ಶುಕ್ರವಾರ, ಮಾರ್ಚ್ 31, 2023
22 °C
ಅದಾನಿ ಕಂಪನಿಗಳ ಬಂಡವಾಳ ಮೌಲ್ಯ ₹ 4.17 ಲಕ್ಷ ಕೋಟಿ ಕುಸಿತ, ಬ್ಯಾಂಕಿಂಗ್ ಷೇರು ಕುಸಿತ

ಅದಾನಿ ಕಂಪನಿ ಬಂಡವಾಳ ಮೌಲ್ಯ ₹ 4.17 ಲಕ್ಷ ಕೋಟಿ ನಷ್ಟ, ಬ್ಯಾಂಕಿಂಗ್ ಷೇರು ಕುಸಿತ

ಪಿಟಿಐ/ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ನವದೆಹಲಿ, ಮುಂಬೈ: ಅಮೆರಿಕದ ಸಂಶೋ ಧನಾ ಸಂಸ್ಥೆ ‘ಹಿಂಡನ್‌ಬರ್ಗ್‌ ರಿಸರ್ಚ್‌’ ನ ವರದಿ ಪ್ರಕಟವಾದ ನಂತರದಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಶುರುವಾದ ಕುಸಿತವು ಶುಕ್ರವಾರವೂ ಮುಂದುವರಿದಿದೆ. ಬುಧವಾರ ಹಾಗೂ ಶುಕ್ರವಾರದ ವಹಿವಾಟಿನಲ್ಲಿ ಅದಾನಿ ಸಮೂಹದ ಷೇರುಪೇಟೆ ನೋಂದಾಯಿತ ಕಂಪನಿಗಳ ಷೇರುಮೌಲ್ಯದಲ್ಲಿ ಒಟ್ಟು ₹ 4.17 ಲಕ್ಷ ಕೋಟಿ ನಷ್ಟವಾಗಿದೆ.

ಬ್ಯಾಂಕಿಂಗ್ ವಲಯದ ಷೇರುಗಳ ಮೌಲ್ಯ ಕೂಡ ದೊಡ್ಡ ಮಟ್ಟದಲ್ಲಿ ಕುಸಿ ದಿದೆ. ಅದಾನಿ ಸಮೂಹಕ್ಕೆ ಬ್ಯಾಂಕಿಂಗ್‌ ವಲಯದಿಂದ ನೀಡಿರುವ ಸಾಲ ದೊಡ್ಡ ಪ್ರಮಾಣದಲ್ಲಿದೆ ಎಂಬ ಕಳವಳ ಇದಕ್ಕೆ ಕಾರಣ.

ಅದಾನಿ ಸಮೂಹದ ಕಂಪನಿಗಳ ಷೇರುಮೌಲ್ಯದಲ್ಲಿನ ಇಳಿಕೆಯು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಷೇರು ಮೌಲ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ. ಏಕೆಂದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸಮೂಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿವೆ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

‘ಸಂಶೋಧನೆ ನಡೆಸದೆ ಸಿದ್ಧಪಡಿಸಿರುವ ವರದಿಯು ಅದಾನಿ ಸಮೂಹ, ಸಮೂಹದ ಷೇರುದಾರರು ಹಾಗೂ ಹೂಡಿಕೆದಾರರ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಿದೆ. ಸಮೂಹದ ಕಂಪನಿಗಳ ಷೇರುಮೌಲ್ಯದಲ್ಲಿ ಆಗುವ ಕುಸಿತದಿಂದ ಲಾಭ ಮಾಡಿಕೊಳ್ಳುವ ಸ್ಥಿತಿಯಲ್ಲಿ ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆ ಇದೆ. ಈ ವಿಚಾರವನ್ನು ಸಂಸ್ಥೆಯೇ ಹೇಳಿದೆ’ ಎಂದು ಅದಾನಿ ಸಮೂಹದ ಮುಖ್ಯಸ್ಥ ಜತಿನ್ ಜಲುಂಧ್ವಾಲಾ ಗುರುವಾರ ಹೇಳಿದ್ದರು.

ಹಿಂಡನ್‌ಬರ್ಗ್‌ ರಿಸರ್ಚ್‌ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಸಮೂ ಹವು ಈಗಾಗಲೇ ತಿಳಿಸಿದೆ. ವರದಿಗೆ ಬದ್ಧವಾಗಿರುವುದಾಗಿ ಹಿಂಡನ್‌ ಬರ್ಗ್‌ ರಿಸರ್ಚ್‌ ಹೇಳಿದೆ.

‘ಮಿತಿ ಮೀರಿಲ್ಲ’: ಅದಾನಿ ಸಮೂಹಕ್ಕೆ ತಾವು ನೀಡಿರುವ ಸಾಲದ ಮೊತ್ತವು ಆರ್‌ಬಿಐ ನಿಗದಿ ಮಾಡಿರುವ ಮಿತಿ ಯೊಳಗೇ ಇದೆ ಎಂದು ಕೆಲವು ಬ್ಯಾಂಕ್‌ ಗಳು ಶುಕ್ರವಾರ ಸ್ಪಷ್ಟಪಡಿಸಿವೆ. ಬ್ಯಾಂಕ್‌ ಬಳಿ ಸಾಲ ಕೊಡಲು ಲಭ್ಯವಿರುವ ಬಂಡವಾಳದಲ್ಲಿ ಶೇಕಡ 25ರಷ್ಟನ್ನು ಮಾತ್ರ ಒಂದೇ ಸಮೂಹಕ್ಕೆ ಸಾಲವಾಗಿ ನೀಡಬಹುದು ಎಂದು ನಿಯಮ ಹೇಳುತ್ತದೆ.

‘ಅದಾನಿ ಸಮೂಹಕ್ಕೆ ನೀಡಿರುವ ಸಾಲದ ವಿಚಾರದಲ್ಲಿ ಕಳವಳಪಡುವಂಥದ್ದು ಏನೂ ಇಲ್ಲ’ ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖರಾ ಹೇಳಿದ್ದಾರೆ. ಬ್ಯಾಂಕ್‌ ಆಫ್ ಇಂಡಿಯಾ ಕೂಡ ತಾನು ನೀಡಿರುವ ಸಾಲವು ಮಿತಿಯನ್ನು ಮೀರಿಲ್ಲ ಎಂದು ಹೇಳಿದೆ.

ಎಲ್‌ಐಸಿಗೆ ನಷ್ಟ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿದ್ದು, ಎರಡು ದಿನಗಳ ವಹಿವಾಟಿನಲ್ಲಿ ಸಮೂಹದ ಷೇರುಮೌಲ್ಯ ಕುಸಿತ ಕಂಡ ಪರಿಣಾಮವಾಗಿ ಎಲ್‌ಐಸಿ ಹೂಡಿಕೆಯು ₹ 18 ಸಾವಿರ ಕೋಟಿಯಷ್ಟು ಕರಗಿದೆ.

ಅಲ್ಲದೆ, ಎಲ್‌ಐಸಿ, ಅದಾನಿ ಎಂಟರ್‌ಪ್ರೈಸಸ್‌ನ ಷೇರು ಮಾರಾಟ ಪ್ರಕ್ರಿಯೆ (ಎಫ್‌ಪಿಒ) ವೇಳೆ ₹ 300 ಕೋಟಿ ಹೊಸ ಹೂಡಿಕೆ ಮಾಡಿದೆ ಎಂದು ಗೊತ್ತಾಗಿದೆ.

‘ನಿಭಾಯಿಸುವ ಸ್ಥಿತಿಯಲ್ಲಿ ಬ್ಯಾಂಕ್‌ಗಳ ಸಾಲ’

ಮುಂಬೈ (ರಾಯಿಟರ್ಸ್): ಭಾರತದ ಬ್ಯಾಂಕ್‌ಗಳು ಅದಾನಿ ಸಮೂಹಕ್ಕೆ ನೀಡಿರುವ ಸಾಲದ ಮೊತ್ತವು ‘ನಿಭಾಯಿಸಬಹುದಾದ ಮಿತಿ’ಯಲ್ಲಿ ಇದೆ ಎಂದು ಸಿಎಲ್‌ಎಸ್‌ಎ ಹಾಗೂ ಜೆಫರೀಸ್‌ ಬ್ರೋಕರೇಜ್ ಸಂಸ್ಥೆಗಳು ಅಂದಾಜಿಸಿವೆ. ‘ದೇಶದ ಬ್ಯಾಂಕಿಂಗ್ ವಲಯಕ್ಕೆ ಯಾವುದೇ ಕೆಟ್ಟ ಪರಿಣಾಮ ಎದುರಾಗುವ ಸಾಧ್ಯತೆ ನಮಗೆ ಕಾಣುತ್ತಿಲ್ಲ’ ಎಂದು ಜೆಫರೀಸ್‌ ಹೇಳಿದೆ.

ಅದಾನಿ ಸಮೂಹವು ಭಾರತದ ಬ್ಯಾಂಕ್‌ಗಳಿಂದ ಪಡೆದಿರುವ ಸಾಲದ ಮೊತ್ತವು ಅದರ ಒಟ್ಟು ಸಾಲದ ಶೇ40ರಷ್ಟು ಮಾತ್ರ ಎಂದು ಸಿಎಲ್‌ಎಸ್‌ಎ ಬ್ರೋಕರೇಜ್ ಸಂಸ್ಥೆ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು