ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ವೃತ್ತಿಪರರೇ ಈ 6 ತಪ್ಪು ಮಾಡಬೇಡಿ

Last Updated 20 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ‘ಸಾಮಾಜಿಕ ಭದ್ರತೆ’ಯ ವ್ಯವಸ್ಥೆ ಬಹುತೇಕ ನಾಶವಾಗಿದೆ ಎಂಬುದು ನಮ್ಮಲ್ಲಿ ಎಷ್ಟು ಜನರಿಗೆ ಗೊತ್ತಿದೆ. ಉದ್ಯೋಗಿಗಳ ಭವಿಷ್ಯನಿಧಿ (ಇಪಿಎಫ್‌) ಯೋಜನೆಯು ಸಾಮಾಜಿಕ ಭದ್ರತೆಯ ನಿಟ್ಟಿನಲ್ಲಿ ಅತ್ಯಂತ ದುರ್ಬಲವಾದ ಸಾಧನ. ಇದಕ್ಕೆ ಹೋಲಿಸಿದರೆ ರಾಷ್ಟ್ರೀಯ ಪಿಂಚಣಿ ಯೋಜನೆಯು (ಎನ್‌ಪಿಎಸ್‌) ಸ್ವಲ್ಪ ಸುಧಾರಿತ ಆವೃತ್ತಿ ಎನ್ನಬಹುದು ಅಷ್ಟೇ. ಇಂಥ ಸ್ಥಿತಿಯಲ್ಲಿ ನಿವೃತ್ತಿಯ ನಂತರದ ಬದುಕಿಗಾಗಿ ವೃತ್ತಿ ಜೀವನದ ಆರಂಭದಿಂದಲೇ ಒಂದಷ್ಟು ಉಳಿತಾಯವನ್ನು ಆರಂಭಿಸುವುದು ಅನಿವಾರ್ಯವಾಗಿದೆ.

ವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ಯುವ ಸಮೂಹವು ಆರ್ಥಿಕ ಭದ್ರತೆಯ ಬಗ್ಗೆ ಚಿಂತನೆ ನಡೆಸಿ, ಸಣ್ಣ ವಯಸ್ಸಿನಿಂದಲೇ ಉಳಿತಾಯವನ್ನು ಆರಂಭಿಸುವುದು ತುಂಬ ವಿರಳ. ಆದರೆ, ಆ ನಿಟ್ಟಿನಲ್ಲಿ ಅವರು ಯೋಚನೆ ಮಾಡುವುದು ಅಗತ್ಯವಾಗಿದೆ. ಮುಂದೆ ತಮಗೆ ಆರ್ಥಿಕ ಸಂಕಷ್ಟಗಳು ಎದುರಾಗಬಾರದು ಎಂದು ನಿರೀಕ್ಷಿಸುವ ಯುವ ವೃತ್ತಿಪರರು ಮಾಡಲೇ ಬಾರದಾದ ಆರು ತಪ್ಪುಗಳ ಮಾಹಿತಿ ಇಲ್ಲಿದೆ:

1. ಹೂಡಿಕೆಗೆ ವಿಳಂಬ

ಕಡಿಮೆ ಪಾಕೆಟ್‌ಮನಿಯಲ್ಲಿ ಕಾಲೇಜು ಜೀವನ ಕಳೆದು, ವೃತ್ತಿಬದುಕು ಆರಂಭಿಸಿದವರಿಗೆ, ಮೊದಲ ತಿಂಗಳ ವೇತನ ಬಂದಾಗ ಅದನ್ನು ಖರ್ಚು ಮಾಡಲು ಎಲ್ಲಿಲ್ಲದ ಉತ್ಸಾಹ ಇರುತ್ತದೆ. ಹೀಗೆ ಖರ್ಚು ಮಾಡುವುದಕ್ಕೂ ಮುನ್ನ ಒಂದು ಕ್ಷಣ ಯೋಚಿಸುವುದು ಅಗತ್ಯ. ಇಂದು ಮಾಡುವ ದುಂದುವೆಚ್ಚವೇ ನಾಳೆ ನಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಬಲ್ಲದು.

ಬಡ್ಡಿ– ಚಕ್ರಬಡ್ಡಿಯ ಪಾಠವನ್ನು ಕಾಲೇಜು ಜೀವನದಲ್ಲಿ ಒಂದು ಪಾಠವಾಗಿ ಕಲಿತಿರಬಹುದು. ಈಗ ಅದನ್ನು ಕೃತಿಗಿಳಿಸುವ ಸಮಯ. ನೀವು ಯಾವುದೇ ಹೂಡಿಕೆ ಮಾಡಿದರೂ ಅದಕ್ಕೆ ಪ್ರತಿವರ್ಷವೂ ಬಡ್ಡಿ, ಚಕ್ರಬಡ್ಡಿಗಳು ಸೇರುತ್ತಾ ಕೊನೆಗೆ ಅದು ದೊಡ್ಡ ನಿಧಿಯಾಗುತ್ತದೆ.

ಅಜಿತ್‌ ಹಾಗೂ ಮನೀಷಾ ಅವರ ಹೂಡಿಕೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಇವರು ಈಗಷ್ಟೇ ವೃತ್ತಿ ಬದುಕಿಗೆ ಕಾಲಿರಿಸಿದ, 25 ವರ್ಷ ವಯಸ್ಸಿನ ಯುವಕರು. ಅಜಿತ್‌ ತಮ್ಮ ಮೊದಲ ತಿಂಗಳ ವೇತನದಿಂದಲೇ ಹೂಡಿಕೆ ಆರಂಭಿಸಿದರು. ಮನೀಷಾ, ತನಗೆ 30 ವರ್ಷ ವಯಸ್ಸಾದ ನಂತರ ಹೂಡಿಕೆ ಆರಂಭಿಸಲು ತೀರ್ಮಾನಿಸಿದರು. ಅಜಿತ್‌ ಪ್ರತಿ ತಿಂಗಳೂ ₹ 10,000 ಹೂಡಿಕೆ ಮಾಡಲು ಆರಂಭಿಸಿದ್ದರೆ, ಐದು ವರ್ಷಗಳ ನಂತರ ಮನೀಷಾ, ಪ್ರತಿ ತಿಂಗಳೂ ₹ 15,000 ಹೂಡಿಕೆ ಆರಂಭಿಸಿದ್ದರು. ಇಬ್ಬರೂ ಪ್ರತಿ ವರ್ಷವೂ ಹೂಡಿಕೆಯ ಮೊತ್ತವನ್ನು ಲತಾ ₹ 1,000ದಂತೆ ಹೆಚ್ಚಿಸುತ್ತಲೇ ಹೋದರು. ಅವರು 60ರ ವಯಸ್ಸಿಗೆ ಬಂದಾಗ ಅಜಿತ್‌ ಅವರ ಗಳಿಕೆಯ ಒಟ್ಟು ಮೊತ್ತವು ಮನೀಷಾ ಅವರ ಗಳಿಕೆಯ ಮೊತ್ತಕ್ಕಿಂತ ₹ 2ಕೋಟಿ ಹೆಚ್ಚಾಗಿತ್ತು. ಐದು ವರ್ಷಗಳ ವಿಳಂಬವು ಮನೀಷಾ ಅವರಿಗೆ ದುಬಾರಿಯಾಗಿ ಪರಿಣಮಿಸಿತು.

2. ಕ್ರೆಡಿಟ್‌ ಕಾರ್ಡ್‌ ಬಳಕೆ

ನೀವು ಬ್ಯಾಂಕ್‌ನಲ್ಲಿ ವೇತನ ಖಾತೆ ತೆರೆಯುತ್ತಿದ್ದಂತೆಯೇ ಬ್ಯಾಂಕ್‌ನವರು ನಿಮಗೆ ಕರೆ ಮಾಡಿ ‘ಕ್ರೆಡಿಟ್‌ ಕಾರ್ಡ್‌ ಬೇಕೇ’ ಎಂದು ವಿಚಾರಿಸುತ್ತಾರೆ. ಕ್ರೆಡಿಟ್‌ ಕಾರ್ಡ್‌ ಎಂಬುದು ಸಾಲ ಹೆಚ್ಚಿಸಿಕೊಳ್ಳಲು ಬರುವ ಒಂದು ಸುಲಭ ಸೌಲಭ್ಯ. ಇಂಥ ಒಂದು ಕಾರ್ಡ್‌ ಕೈಗೆ ಬಂದರೆ ಅನೇಕರು ಚಿಂತೆ ಇಲ್ಲದೆ ವೆಚ್ಚ ಮಾಡಿ, ಸಾಲದ ಪ್ರಮಾಣ ಹೆಚ್ಚಿಸುತ್ತಲೇ ಹೋಗುತ್ತಾರೆ. ಆ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಲು ವಿಫಲರಾಗುತ್ತಾರೆ. ಅಂತಿಮವಾಗಿ ದೊಡ್ಡ ಮೊತ್ತದ ಬಡ್ಡಿ ಕಟ್ಟುವ ಅನಿವಾರ್ಯತೆ ಎದುರಾಗುತ್ತದೆ.

ಕ್ರೆಡಿಟ್‌ ಕಾರ್ಡ್‌ ಮೂಲಕ ಪಡೆದ ಸಾಲಕ್ಕೆ ದೊಡ್ಡ ಮೊತ್ತದ ಬಡ್ಡಿ ವಿಧಿಸಲಾಗುತ್ತದೆ ಎಂಬುದನ್ನು ತಿಳಿದಿರಬೇಕು. ಇದರ ವಾರ್ಷಿಕ ಬಡ್ಡಿ ಪ್ರಮಾಣ ಕೆಲವೊಮ್ಮೆ ಶೇ 42ರಷ್ಟಾಗುತ್ತದೆ. ನಮ್ಮಲ್ಲಿ ಇಲ್ಲದೇ ಇರುವ ಹಣವನ್ನು ವೆಚ್ಚ ಮಾಡಲು ಹೋದರೆ ಇಂತಹ ನಷ್ಟ ಅನುಭವಿಸಬೇಕಾಗುತ್ತದೆ.

3. ವೈಯಕ್ತಿಕ ಸಾಲ

ಕ್ರೆಡಿಟ್‌ ಕಾರ್ಡ್‌ಗಳು ದುಬಾರಿ ಎಂಬುದು ಸರಿ, ಆದರೆ ವೈಯಕ್ತಿಕ ಸಾಲ, ಮಾಸಿಕ ಕಂತುಗಳ ಆಧಾರದಲ್ಲಿ (ಇಎಂಐ) ಸಾಲ ಪಡೆಯಬಹುದಲ್ಲವೇ? ಇಂಥ ಆಮಿಷಗಳೂ ಬಂದೇ ಬರುತ್ತವೆ. ‘ಶೇ 14ರ ಬಡ್ಡಿದರದಲ್ಲಿ ವೈಯಕ್ತಿಕ ಸಾಲ. ಸ್ಥಳದಲ್ಲೇ ಸಾಲ ಮಂಜೂರು...’ ಎಂಬೆಲ್ಲ ಜಾಹೀರಾತುಗಳು ಪ್ರತಿಯೊಬ್ಬರನ್ನೂ ಸೆಳೆಯುತ್ತವೆ. ದುಬಾರಿ ಫೋನ್‌ ಖರೀದಿಸುವ ಆಸೆ ಇದೆ, ಆದರೆ ಕೈಯಲ್ಲಿ ಹಣ ಇಲ್ಲ ಎಂದಾಗ ಇಂಥ ಜಾಹೀರಾತುಗಳು ಇನ್ನಷ್ಟು ಪ್ರಿಯವೆನಿಸುತ್ತವೆ.

ಸಾಲ ಪಡೆದು ಫೋನ್‌ ಖರೀದಿಸುತ್ತೀರಿ. ಇನ್ನೊಂದು ಕಡೆಯಿಂದ ವೈಯಕ್ತಿಕ ಸಾಲ ಪಡೆದು ಯುರೋಪ್‌ ಪ್ರವಾಸ ಮಾಡುತ್ತೀರಿ... ಹೀಗೆ ಸಾಲ ಬೆಳೆಯುತ್ತಲೇ ಇರುತ್ತದೆ. ನಮ್ಮ ಕೈಗೆಟುಕದ ವಸ್ತುಗಳಿಗಾಗಿ ಸಾಲ ಮಾಡುವುದರಿಂದ, ಸಾಲದ ಪ್ರಮಾಣ ಹೆಚ್ಚಿಸಬಹುದಲ್ಲದೆ ಬೇರೇನನ್ನೂ ಸಾಧಿಸಲಾಗದು ಎಂಬುದನ್ನು ತಿಳಿದುಕೊಳ್ಳಬೇಕು. ಇದರ ಬದಲು ಕಡಿಮೆ ಬೆಲೆಯ ಫೋನ್‌ ಅಥವಾ ಗ್ಯಾಜೆಟ್‌ ಖರೀದಿಸಿ. ಉಳಿದ ಹಣವನ್ನು ಭವಿಷ್ಯಕ್ಕಾಗಿ ಹೂಡಿಕೆ ಮಾಡಬಹುದು. ವೃತ್ತಿ ಜೀವನದಲ್ಲಿ ಮೇಲೇರಿದಂತೆ ಒಂದೊಂದೇ ಆಸೆಗಳನ್ನು ಈಡೇರಿಸಿಕೊಳ್ಳಲು ಅವಕಾಶ ಲಭಿಸುತ್ತದೆ.

4. ಯೋಜನೆಯ ತಿಳಿವಳಿಕೆ ಇಲ್ಲದೆ ಹೂಡಿಕೆ

ಹೂಡಿಕೆ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆಯೇ ಹಣ ಹೂಡುವುದು ಯುವ ಸಮುದಾಯ ಮಾಡುವ ಇನ್ನೊಂದು ದೊಡ್ಡ ತಪ್ಪು. ಸಾಮಾನ್ಯವಾಗಿ ಈ ವಯಸ್ಸಿನ ಯುವಕರು, ತಮ್ಮ ಪಾಲಕರು, ಸ್ನೇಹಿತರು, ಚಿಕ್ಕಪ್ಪ– ದೊಡ್ಡಪ್ಪ, ಸಂಬಂಧಿಗಳು... ಮುಂತಾದವರು ಕೊಟ್ಟ ಸಲಹೆಯನ್ನು ಒಪ್ಪಿ ಹೂಡಿಕೆ ಆರಂಭಿಸುತ್ತಾರೆ. ಆದರೆ ಅವರಲ್ಲಿ ಯಾರಿಗೂ ಹೂಡಿಕೆದಾರನ ಅಗತ್ಯವೇನು ಎಂಬುದು ತಿಳಿದಿರುವುದಿಲ್ಲ.

ಹೀಗೆ ಹೂಡಿಕೆ ಮಾಡುವುದರಿಂದ ಸಂಕಷ್ಟಕ್ಕೆ ಒಳಗಾಗಬೇಕಾದ ಪ್ರಸಂಗ ಬರಬಹುದು. ಕಳೆದ ವರ್ಷ ‘ಬಿಟ್‌ ಕಾಯಿನ್‌’ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದ ಅನೇಕರು ನಷ್ಟ ಅನುಭವಿಸಿದ್ದರು. ಆದ್ದರಿಂದ ಹೂಡಿಕೆಗೂ ಮುನ್ನ, ನೀವು ಹೂಡಿಕೆ ಮಾಡಲು ಉದ್ದೇಶಿಸಿದ ಯೋಜನೆಯ ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳಿ. ಸಾಕಷ್ಟು ಯೋಚನೆ ಮಾಡಿದ ನಂತರವೇ ಹೂಡಿಕೆ ಆರಂಭಿಸಿ.

5. ಅಪಾಯದಿಂದ ಪಾರಾಗುವ ಪ್ರಯತ್ನ

ತಮ್ಮ ಗಳಿಕೆಯ ಎಲ್ಲ ಹಣವನ್ನೂ ಬ್ಯಾಂಕ್‌ನಲ್ಲೇ ಕೂಡಿಡುವವರು ಒಂದೆಡೆಯಾದರೆ, ಎಲ್ಲ ಹಣವನ್ನೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರದ್ದು ಇನ್ನೊಂದು ವರ್ಗ. ಈ ರೀತಿಯ ಯಾವ ಅತಿರೇಕವೂ ಸರಿಯಲ್ಲ. ಹೂಡಿಕೆಯ ವಿಚಾರದಲ್ಲಿ ಅತಿ ಹೆಚ್ಚಿನ ಅಪಾಯವನ್ನು ಎದುರು ಹಾಕಿಕೊಳ್ಳಬಾರದು ಎಂಬುದು ಸರಿ. ಆದರೆ, ಸಂಪೂರ್ಣ ಸುರಕ್ಷಿತ ವಿಧಾನವನ್ನೇ ಅನುಸರಿಸುವುದೂ ಸರಿಯಾದ ಕ್ರಮವಲ್ಲ.

ಷೇರುಗಳು ಅಥವಾ ಷೇರು ಸಂಬಂಧಿತ ಮ್ಯೂಚುವಲ್‌ ಫಂಡ್‌ಗಳ ಹೂಡಿಕೆಯಲ್ಲಿ ಅಪಾಯವಿದೆ ಎಂಬುದು ನಿಜ. ಆದರೆ, ಅದರಲ್ಲಿ ಮಾಡಿದ ಹೂಡಿಕೆಯು ಒಳ್ಳೆಯ ಪ್ರತಿಫಲವನ್ನು ನೀಡುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಇಂಥ ಹೂಡಿಕೆಯು ದೀರ್ಘಾವಧಿಯಲ್ಲಿ ಹೆಚ್ಚು ಆದಾಯ ತಂದುಕೊಡುತ್ತದೆ. ಶೇ 1 ರಿಂದ ಶೇ 2ರಷ್ಟು ಹೆಚ್ಚುವರಿ ಗಳಿಕೆ ಮಾಡಿದರೂ ದೀರ್ಘಾವಧಿಯ ಪರಿಣಾಮ ದೊಡ್ಡದಾಗಿರುತ್ತದೆ ಎಂಬುದನ್ನು ಮರೆಯಬಾರದು.

6. ಬಹು ಬೇಗನೆ ಮನೆ ಖರೀದಿಸುವುದು

‘ಸ್ವಂತ ಮನೆ’ ಎಂಬುದು ಎಲ್ಲರಿಗೂ ಒಂದು ಭಾವನಾತ್ಮಕ ವಿಚಾರ. ಅದು ಸಮಾಜದಲ್ಲಿ ಗೌರವದ ಸಂಕೇತವೂ ಹೌದು. ಆ ಕಾರಣಕ್ಕೇ ನಾವೆಲ್ಲರೂ ವೃತ್ತಿ ಜೀವನ ಆರಂಭಿಸುತ್ತಿದ್ದಂತೆ ಸ್ವಂತ ಮನೆ ಖರೀದಿಗೆ ಮುಂದಾಗುತ್ತೇವೆ. ಆದರೆ, ಇದರ ಪರಿಣಾಮ ಬೇರೆಯೇ ಇರುತ್ತದೆ. ದೊಡ್ಡ ಮೊತ್ತದ ಸಾಲ ಮತ್ತು ‘ಶೂನ್ಯ’ ಉಳಿತಾಯ. ನಮ್ಮಲ್ಲಿ ಉಳಿಯುವ ಏಕೈಕ ಆಸ್ತಿ ನಮ್ಮ ಮನೆ. ಮುಂದಿನ ಹಲವು ವರ್ಷಗಳ ಕಾಲ ನಾವು ಅದರ ಸಾಲದ ಕಂತುಗಳನ್ನು ತುಂಬುತ್ತಲೇ ಇರಬೇಕು. ಸಾಲ ಮುಗಿದು, ನಮ್ಮ ಭವಿಷ್ಯಕ್ಕಾಗಿ ಹೂಡಿಕೆ ಆರಂಭಿಸುವಾಗ ಸಾಕಷ್ಟು ತಡವಾಗಿರುತ್ತದೆ.

ಆದ್ದರಿಂದ ಮನೆ ಖರೀದಿಗೆ ಆತುರ ತೋರಬೇಡಿ. ಆರಂಭದ ಕೆಲವು ವರ್ಷಗಳ ಕಾಲ ಯಾವುದಾದರೂ ಯೋಜನೆಯಲ್ಲಿ ಸ್ವಲ್ಪ ಹೂಡಿಕೆ ಮಾಡಿ, ವೃತ್ತಿ ಜೀವನದಲ್ಲೂ ಒಂದಿಷ್ಟು ಏಳಿಗೆ ಸಾಧಿಸಿದ ಬಳಿಕ ಮನೆ ಖರೀದಿಯ ಬಗ್ಗೆ ಚಿಂತಿಸಿ. ಆಗ ನಿಮ್ಮ ಅಗತ್ಯಕ್ಕೆ ಅನುಗುಣವಾದ ಮನೆ ಖರೀದಿಸಬಲ್ಲಂಥ ಸ್ಥಿತಿಯಲ್ಲಿ ನೀವಿರುತ್ತೀರಿ. ಮೊದಲೇ ಮನೆ ಖರೀದಿಸಿದ್ದರ ಪರಿಣಾಮ ಸಾಲ ಹೆಚ್ಚಾಗಿ, ಪರೋಕ್ಷವಾಗಿ ಅದು ನಿಮ್ಮ ವೃತ್ತಿ ಜೀವನದ ಮೇಲೂ ಪರಿಣಾಮ ಉಂಟುಮಾಡಬಹುದು.‌

ವೃತ್ತಿ ಜೀವನದ ಆರಂಭದ ಕೆಲವು ವರ್ಷಗಳಲ್ಲಿ ಈ ಆರು ತಪ್ಪುಗಳನ್ನು ಮಾಡದಿದ್ದರೆ ಭದ್ರವಾದ ಭವಿಷ್ಯವನ್ನು ನಿರ್ಮಾಣ ಮಾಡಬಹುದು.

(ಲೇಖಕ, ‘ಫಂಡ್ಸ್‌ಇಂಡಿಯಾಡಾಟ್‌ಕಾಂ’ನ ಪ್ರಧಾನ ಸಂಶೋಧನಾ ವಿಶ್ಲೇಷಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT