ಬುಧವಾರ, ಏಪ್ರಿಲ್ 8, 2020
19 °C

'ಅದಕ್ಷ, ಹೃದಯಹೀನ ಬ್ಯಾಂಕ್‌ ಎಸ್‌ಬಿಐ'; ಹಣಕಾಸು ಸಚಿವೆ ನಿರ್ಮಲಾ ಹೇಳಿಕೆಗೆ ಖಂಡನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ ಅಧ್ಯಕ್ಷ ರಜನೀಶ್‌ ಕುಮಾರ್‌ ವಿರುದ್ಧ ಮಾಡಿರುವ ಟೀಕೆಯನ್ನು ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟವು (ಎಐಬಿಒಸಿ) ಖಂಡಿಸಿದೆ.

ಗುವಾಹಟಿಯಲ್ಲಿ ಇತ್ತೀಚೆಗೆ ನಡೆದ ಬ್ಯಾಂಕ್‌ ಮುಖ್ಯಸ್ಥರ ಸಭೆಯಲ್ಲಿ ನಿರ್ಮಲಾ ಅವರು ಎಸ್‌ಬಿಐ ಮತ್ತು ರಜನೀಶ್‌ ಕುಮಾರ್‌ ವಿರುದ್ಧ ಮಾಡಿರುವ ಟೀಕಾಪ್ರಹಾರದ ಧ್ವನಿಸುರುಳಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸರ್ಕಾರಿ ಅಧಿಕಾರಿಗಳು, ಇತರ ಬ್ಯಾಂಕ್‌ಗಳ ಮುಖ್ಯಸ್ಥರ ಸಮ್ಮುಖದಲ್ಲಿ ನಿರ್ಮಲಾ ಅವರು ರಜನೀಶ್‌ ಅವರ ವಿರುದ್ಧ ತೀಕ್ಷ್ಣ ಸ್ವರೂಪದ ಟೀಕೆ ಮಾಡಿದ್ದಾರೆ.

‘ಅಸ್ಸಾಂನ ಚಹಾ ತೋಟಗಳ 2.5 ಲಕ್ಷ ಕಾರ್ಮಿಕರಿಗೆ ಸಾಲ ಸೌಲಭ್ಯ ವಿತರಿಸಲು ಸಾಧ್ಯವಾಗದಿರುವುದಕ್ಕೆ ನಿಮ್ಮ ಅದಕ್ಷತೆಯೇ ಮುಖ್ಯ ಕಾರಣ. ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ, ಹೃದಯಹೀನ ಬ್ಯಾಂಕ್‌ ಆಗಿದೆ’ ಎಂದು ನಿರ್ಮಲಾ ಅವರು ರಜನೀಶ್‌ ವಿರುದ್ಧ ಹರಿಹಾಯ್ದಿರುವುದು ಧ್ವನಿಸುರುಳಿಯಲ್ಲಿ ಇದೆ.

‘ತಿಳಿಯಿರಿ ನಿಮ್ಮ ಗ್ರಾಹಕರನ್ನು’ (ಕೆವೈಸಿ) ನಿಯಮದ ಕಾರಣಕ್ಕೆ ಕಾರ್ಮಿಕರ ಬ್ಯಾಂಕ್‌ ಖಾತೆಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಸಾಧ್ಯವಾಗಿಲ್ಲ.

ಸಭೆಯ ವಿವರಗಳನ್ನು ಒಳಗೊಂಡ ಧ್ವನಿಸುರುಳಿಯು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಲು ಬಿಟ್ಟಿರುವುದು ಬ್ಯಾಂಕ್‌ನ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶಪೂರ್ವಕ ಕೃತ್ಯವಾಗಿದೆ. ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ವಿರುದ್ಧ ತನಿಖೆಯಾಗಬೇಕು ಎಂದು ‘ಎಐಬಿಒಸಿ’ ಒತ್ತಾಯಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು