ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಇಂಡಿಯಾದಿಂದ 'ಅಲಯನ್ಸ್ ಏರ್‌' ದೂರ; ಈಗ ಕೇಂದ್ರದ ಸ್ವತಂತ್ರ ಉದ್ಯಮ

Last Updated 15 ಏಪ್ರಿಲ್ 2022, 15:59 IST
ಅಕ್ಷರ ಗಾತ್ರ

ನವದೆಹಲಿ: ಏರ್‌ ಇಂಡಿಯಾದ ಭಾಗವಾಗಿದ್ದ 'ಅಲಯನ್ಸ್ ಏರ್‌' ಈಗ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿನ ಸ್ವತಂತ್ರ ಉದ್ಯಮವಾಗಿದೆ. ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ ಟಾಟಾ ಸಮೂಹದ ತೆಕ್ಕೆಗೆ ಸೇರಿದ್ದು, ಅಲಯನ್ಸ್‌ ಏರ್‌ ಸರ್ಕಾರದ ಸ್ವಾಮ್ಯದಲ್ಲೇ ಉಳಿದಿದೆ.

ಪ್ರಸ್ತುತ ಏರ್‌ ಇಂಡಿಯಾ ಅಸೆಟ್‌ ಹೋಲ್ಡಿಂಗ್ಸ್‌ ಪ್ರೈವೇಟ್‌ ಲಿಮಿಟೆಡ್‌ನ (ಎಐಎಎಚ್‌ಎಲ್‌) ಭಾಗವಾಗಿ ಅಲಯನ್ಸ್ ಏರ್‌ ಕಾರ್ಯಾಚರಿಸುತ್ತಿದೆ. 1996ರಲ್ಲಿ ಆರಂಭವಾದ ಅಲಯನ್ಸ್‌ ಏರ್‌, ಅಂದಿನ ಇಂಡಿಯನ್‌ ಏರ್‌ಲೈನ್ಸ್‌ನ ಭಾಗವಾಗಿತ್ತು ಹಾಗೂ ನಂತರದಲ್ಲಿ ಏರ್‌ ಇಂಡಿಯಾದೊಂದಿಗೆ ವಿಲೀನಗೊಂಡಿತ್ತು.

ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯ ಭಾಗವಾಗಿ ಸ್ಥಳೀಯ ಮಾರ್ಗಗಳಲ್ಲಿ ಇದರ ವಿಮಾನಗಳು ಕಾರ್ಯಾಚರಿಸುತ್ತವೆ. ಎರಡು ಮತ್ತು ಮೂರನೇ ಹಂತದ ನಗರಗಳನ್ನು ಸಂಪರ್ಕಿಸುವ ಸುಮಾರು 100 ಸ್ಥಳೀಯ ಮಾರ್ಗಗಳಲ್ಲಿ ಅಲಯನ್ಸ್‌ ಏರ್‌ನ ಒಟ್ಟು 19 ವಿಮಾನಗಳು ಹಾರಾಟ ನಡೆಸುತ್ತಿವೆ. 18 ಎಟಿಆರ್‌–72ಎಸ್‌ ವಿಮಾನದ ಜೊತೆಗೆ ಇತ್ತೀಚೆಗಷ್ಟೇ ಒಂದು ಡಾರ್ನಿಯರ್‌–288 ವಿಮಾನ ಸೇರ್ಪಡೆಯಾಗಿದೆ.

ಅಲಯನ್ಸ್‌ ಏರ್‌ ವಿಮಾನ ಸಂಸ್ಥೆಯು ಏಪ್ರಿಲ್‌ 18ರಿಂದ ಕಲಬುರಗಿ–ಹೈದರಾಬಾದ್ ಮಧ್ಯೆ ಪ್ರತಿ ದಿನ ವಿಮಾನ ಹಾರಾಟ ಆರಂಭಿಸಲಿದೆ.

2019–20ರಲ್ಲಿಈ ವಿಮಾನಯಾನ ವಿಭಾಗದಿಂದ ₹1,182 ಕೋಟಿ ಆದಾಯ ಬಂದಿದ್ದು, ₹65 ಕೋಟಿ ಲಾಭ ಗಳಿಸಿರುವುದಾಗಿ ಐಎಎನ್‌ಎಸ್‌ ವರದಿ ಮಾಡಿದೆ.

'ಅಲಯನ್ಸ್‌ ಏರ್‌ 2022ರ ಏಪ್ರಿಲ್‌ 15ರಿಂದ ಏರ್‌ ಇಂಡಿಯಾದ ಭಾಗವಾಗಿರುವುದಿಲ್ಲ, ಭಾರತ ಸರ್ಕಾರದ ಅಡಿಯಲ್ಲಿ ಸ್ವತಂತ್ರ ಉದ್ಯಮ ಘಟಕವಾಗಿ ಮುಂದುವರಿಯಲಿದೆ ' ಎಂದು ಅಲಯನ್ಸ್‌ ಏರ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಮಾನಯಾನ ಸಂಸ್ಥೆಯ ಟಿಕೆಟ್‌ಗಳಲ್ಲಿ '9I-XXX'ವಿಮಾನದ ಕೋಡ್‌ ಬಳಕೆಯಾಗಲಿದೆ. ವಿನೀತ್‌ ಸೂದ್‌ ಅವರು ಅಲಯನ್ಸ್‌ ಏರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ.

ಹರಾಜು ಪ್ರಕ್ರಿಯೆಯ ಮೂಲಕ ₹18,000 ಕೋಟಿಗೆ ಟಾಟಾ ಸಮೂಹವು ಸಾಲದ ಸುಳಿಯಲ್ಲಿದ್ದ ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಿತು. ಇದೇ ವರ್ಷ ಜನವರಿ 27ರಂದು ಏರ್‌ ಇಂಡಿಯಾ ಮೇಲೆ ಟಾಟಾ ಪೂರ್ಣ ನಿಯಂತ್ರಣ ಪಡೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT