ಸೋಮವಾರ, ಜುಲೈ 26, 2021
26 °C

ಏರ್‌ಟೆಲ್‌ನಲ್ಲಿ ₹ 15 ಸಾವಿರ ಕೋಟಿಹೂಡಿಕೆಗೆ ಅಮೆಜಾನ್‌ ಮಾತುಕತೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ  : ಭಾರ್ತಿ ಏರ್‌ಟೆಲ್‌ನಲ್ಲಿ ₹ 15 ಸಾವಿರ ಕೋಟಿ ಹೂಡಿಕೆ ಮಾಡುವ ಕುರಿತು ರಿಟೇಲ್‌ ವಹಿವಾಟಿನ ದಿಗ್ಗಜ  ಅಮೆಜಾನ್‌ ಕಂಪನಿಯು ಆರಂಭಿಕ ಹಂತದ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಹೂಡಿಕೆಯಿಂದ ಭಾರತದಲ್ಲಿ ಡಿಜಿಟಲ್‌ ಆರ್ಥಿಕತೆಗೆ ಉತ್ತೇಜನ ಸಿಗುವ ನಿರೀಕ್ಷೆ ಮಾಡಲಾಗಿದೆ. ಉದ್ದೇಶಿತ ಹೂಡಿಕೆ ಪೂರ್ಣಗೊಂಡರೆ ಅಮೆಜಾನ್‌ ಕಂಪನಿಯು ಸದ್ಯದ ಮಾರುಕಟ್ಟೆ ದರದ ಆಧಾರದ ಮೇಲೆ ಭಾರ್ತಿ ಏರ್‌ಟೆಲ್‌ನಲ್ಲಿ ಶೇ 5ರಷ್ಟು ಷೇರು ಹೊಂದಲಿದೆ. ಇದರಿಂದಾಗಿ ದೇಶದಲ್ಲಿ ಮೂರನೇ ಅತಿದೊಡ್ಡ ಮೊಬೈಲ್‌ ಸೇವಾದಾತ ಕಂಪನಿಯಾಗಿರುವ ಏರ್‌ಟೆಲ್‌ಗೆ ಮೊದಲ ಸ್ಥಾನದಲ್ಲಿರುವ ರಿಲಯನ್ಸ್‌ ಜಿಯೊದೊಂದಿಗೆ ಪೈಪೋಟಿ ನೀಡಲು ಹೆಚ್ಚು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಡಲಾಗಿದೆ.

ಮೊಬೈಲ್‌ ಸೇವಾ ಕಂಪನಿಯಾಗಿ ವಹಿವಾಟು ಆರಂಭಿಸಿದ ಜಿಯೊ ಕಂಪನಿಯು ಇದೀಗ ಡಿಜಿಟಲ್‌ ತಂತ್ರಜ್ಞಾನ ಆಧಾರಿತ ಕಂಪನಿಯಾಗಿ ಪ‍ರಿವರ್ತನೆಗೊಂಡಿದೆ. ಇದೇ ಹಾದಿಯಲ್ಲಿ ಏರ್‌ಟೆಲ್‌ ಸಹ ಸಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಅಮೆಜಾನ್‌ ಕಂಪನಿಯು ಹಲವು ರೀತಿಯ ಹೂಡಿಕೆ ಆಯ್ಕೆಗಳನ್ನು ಪರಿಶೀಲನೆ ನಡೆಸುತ್ತಿದೆ. ಶೇ 8 ರಿಂದ ಶೇ 10ರವರೆಗೂ ಷೇರುಗಳನ್ನು ಖರೀದಿಸಲೂ ನೋಡುತ್ತಿದೆ ಎಂದು ಉದ್ಯಮವಲಯದ  ಪ್ರಮುಖ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಮಾತುಕತೆ ಇನ್ನೂ ಆರಂಭಿಕ ಹಂತದಲ್ಲಿದೆ. ಹೀಗಾಗಿ ಒಪ್ಪಂದಲ್ಲಿ ಬದಲಾವಣೆ ಆಗಬಹುದು ಅಥವಾ ಒಪ್ಪಂದಕ್ಕೆ ಬರಲು ಸಾಧ್ಯವಾಗದೇ ಇರಬಹುದು ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ವಿವರಿಸಿದ್ದಾರೆ.

ಭವಿಷ್ಯದ ಕಾರ್ಯವೈಖರಿಯ ಕುರಿತು ಇರುವ ವದಂತಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅಮೆಜಾನ್‌ ಕಂಪನಿಯ ವಕ್ತಾರರೊಬ್ಬರು ಹೇಳಿದ್ದಾರೆ.

ಗ್ರಾಹಕರಿಗೆ ಹೊಸ ಸೇವೆಗಳನ್ನು ನೀಡುವ  ನಿಟ್ಟಿನಲ್ಲಿ  ಡಿಜಿಟಲ್‌  ಕಂಪನಿಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದಷ್ಟೇ ಏರ್‌ಟೆಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.