ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಖರೀದಿಗೆ ಪೋರ್ಟಲ್‌ ಆರಂಭ

Published 5 ಜನವರಿ 2024, 15:37 IST
Last Updated 5 ಜನವರಿ 2024, 15:37 IST
ಅಕ್ಷರ ಗಾತ್ರ

ನವದೆಹಲಿ: ದೇಶದ ತೊಗರಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರವು ಪೋರ್ಟಲ್‌ ಆರಂಭಿಸಿದೆ.

ಕನಿಷ್ಠ ಬೆಂಬಲ ಬೆಲೆ ಅಥವಾ ಮಾರುಕಟ್ಟೆ ದರದಡಿ ರೈತರಿಂದ ನೇರವಾಗಿ ತೊಗರಿ ಖರೀದಿಗೆ ಇದರಿಂದ ಅನುಕೂಲವಾಗಲಿದೆ. ಕರ್ನಾಟಕದಲ್ಲಿ ಅತಿಹೆಚ್ಚು ತೊಗರಿ ಬೆಳೆಯುವ ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬೀದರ್‌ ಜಿಲ್ಲೆಯ ರೈತರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ. 

ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್‌ಸಿಸಿಎಫ್‌) ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳವು (ನಾಫೆಡ್) ಖರೀದಿ ಏಜೆನ್ಸಿಗಳಾಗಿವೆ. ರೈತರು ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿ ಮಾರಾಟ ಮಾಡಬಹುದಾಗಿದೆ. ಅವರ ಬ್ಯಾಂಕ್‌ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಹಣ ಜಮೆಯಾಗಲಿದೆ. 

ಈ ಪೋರ್ಟಲ್ ಸೇವೆಯನ್ನು ಉದ್ದು ಮತ್ತು ಮೆಕ್ಕೆಜೋಳ ಖರೀದಿಗೂ ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ.

ಅಮಿತ್‌ ಶಾ ಚಾಲನೆ: ಗುರುವಾರ ಪೋರ್ಟಲ್‌ಗೆ ಚಾಲನೆ ನೀಡಿದ ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಅವರು, ನಾಫೆಡ್‌ ಮತ್ತು ಎನ್‌ಸಿಸಿಎಫ್‌ನಡಿ ಹೆಸರು ನೋಂದಾಯಿಸಿ ತೊಗರಿ ಮಾರಾಟ ಮಾಡಿದ 25 ರೈತರಿಗೆ ಸ್ಥಳದಲ್ಲಿಯೇ ₹68 ಲಕ್ಷ ಮೊತ್ತವನ್ನು ಡಿಬಿಟಿ ಮೂಲಕ ವರ್ಗಾಯಿಸಿದರು. 

‘2027ರ ವೇಳೆಗೆ ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಭಾರತವು ಸ್ವಾವಲಂಬನೆ ಸಾಧಿಸಲಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವೂ ಆಗಿದೆ’ ಎಂದು ಸಚಿವ ಶಾ ತಿಳಿಸಿದರು.

‘ದೇಶದಲ್ಲಿ ದ್ವಿದಳ ಧಾನ್ಯಗಳಿಗೆ ಉತ್ತಮ ಧಾರಣೆ ಸಿಗುತ್ತಿಲ್ಲ. ಹಾಗಾಗಿ, ಹಲವು ರೈತರು ದ್ವಿದಳ ಧಾನ್ಯ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಪೋರ್ಟಲ್‌ ಮೂಲಕ ರೈತರಿಗೆ ಭರವಸೆ ತುಂಬುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ’ ಎಂದರು. 

ದೇಶದಲ್ಲಿ 2016-17ರ ಮುಂಗಾರು ಋತುವಿನಲ್ಲಿ ತೊಗರಿ ಉತ್ಪಾದನೆಯು 8.87 ದಶಲಕ್ಷ ಟನ್‌ ಆಗಿತ್ತು. ಆ ನಂತರದ ವರ್ಷಗಳಲ್ಲಿ ಉತ್ಪಾದನೆಯು ಕುಸಿದಿದೆ. 2022–23ರಲ್ಲಿ 3.31 ದಶಲಕ್ಷ ಟನ್‌ ಉತ್ಪಾದನೆಯಾಗಿತ್ತು. 2023–24ರ ಋತುವಿನಲ್ಲಿ 3.42 ದಶಲಕ್ಷ ಟನ್‌ ಉತ್ಪಾದನೆಯಾಗುವ ನಿರೀಕ್ಷೆಯಿದೆ ಎಂದು ಕೃಷಿ ಸಚಿವಾಲಯ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT