ಬುಧವಾರ, ಮಾರ್ಚ್ 29, 2023
23 °C

ಅಡಿಕೆ ಆಮದು ಗಣನೀಯ ಹೆಚ್ಚಳ: ಲೋಕಸಭೆಯಲ್ಲಿ ವಾಣಿಜ್ಯ ಸಚಿವರ ಉತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಡಿಕೆ ಆಮದು ಪ್ರಮಾಣ ಗಣನೀಯವಾಗಿ ಹೆಚ್ಚಳ ಆಗಿದೆ. 2022–23ರ ಆರ್ಥಿಕ ವರ್ಷ ನವೆಂಬರ್ ಅಂತ್ಯದ ವರೆಗೆ 61,450 ಟನ್‌ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ. 

ಲೋಕಸಭೆಯಲ್ಲಿ ಸಂಸದ ನಳಿನ್‌ ಕುಮಾರ್ ಕಟೀಲು ಬುಧವಾರ ಕೇಳಿರುವ ಪ್ರಶ್ನೆಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್‌ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ
ಇದೆ. 

ಸಿಂಗಪುರ, ಯುಎಇ ಸೇರಿದಂತೆ ಹಲವು ದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ, ಕಳೆದ ನಾಲ್ಕು ವರ್ಷಗಳಿಂದ ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಅಡಿಕೆಯ ದೇಶೀಯ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಕೋಯಿಕ್ಕೋಡ್ ಮಾರುಕಟ್ಟೆಯಲ್ಲಿ 2017–18ರಲ್ಲಿ ಕ್ವಿಂಟಲ್ ಅಡಿಕೆಗೆ ₹19,038 ಇತ್ತು. 2021–22ರಲ್ಲಿ ಅದು ₹35,481 ಕ್ಕೆ ಏರಿದೆ. ಸಾಗರದ
ಚಾಲಿ ಅಡಿಕೆ ಮಾರುಕಟ್ಟೆ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಸಹ ಬೆಲೆ ಏರಿಕೆ ಆಗಿದೆ. 2017–18ರಲ್ಲಿ ಕ್ವಿಂಟಲ್‌ಗೆ ₹20,847 ಇದ್ದ ಬೆಲೆ 2021–22ರಲ್ಲಿ ₹39,019 ಆಗಿದೆ. ದೇಶದ ಅಡಿಕೆ ಬೆಳೆಗಾರರ ಹಿತಾಸಕ್ತಿ ರಕ್ಷಿಸಲು ಹಾಗೂ ಆಮದು ನಿಯಂತ್ರಿಸಲು ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ. 

ಅಡಿಕೆ ಆಮದು ಮೇಲಿನ ಮೂಲ ಕಸ್ಟಮ್ಸ್‌ ಸುಂಕವು ಶೇ 100 ಇದೆ. ದೇಶೀಯ ಮಾರುಕಟ್ಟೆಗೆ ಕಳಪೆ ಗುಣಮಟ್ಟದ ಅಡಿಕೆ ಪ್ರವೇಶಿಸದಂತೆ ತಡೆಯಲು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಕಡಿಮೆ ಗುಣಮಟ್ಟದ ಅಡಿಕೆ ಆಮದನ್ನು ನಿರ್ಬಂಧಿಸಲು ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರವು ಗುಣಮಟ್ಟದ ಮಾನದಂಡಗಳನ್ನು ಅಭಿವೃದ್ಧಿಪಡಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಕರ್ನಾಟಕದಲ್ಲಿ ಅಡಿಕೆ ತೋಟಗಳಲ್ಲಿ ಹಬ್ಬಿರುವ ಎಲೆಚುಕ್ಕಿ ರೋಗದಿಂದ ಕೃಷಿಕರಿಗೆ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ. ಈ ರೋಗದ ಬಗ್ಗೆ ಅಧ್ಯಯನ ನಡೆಸಲು ಏಳು ತಜ್ಞರನ್ನು ಒಳಗೊಂಡ ಸಮಿತಿಯನ್ನು ಕೇಂದ್ರ ಕೃಷಿ ಸಚಿವಾಲಯ ರಚಿಸಿದೆ ಎಂದು ಅವರು ತಿಳಿಸಿದ್ದಾರೆ.  

 

ಆಮದು ಪ್ರಮಾಣ 

 

ಅಡಿಕೆ 

ವರ್ಷ: ಪ್ರಮಾಣ (ಟನ್‌ಗಳಲ್ಲಿ)

2019–20; 4,975

2020–21; 9,982

2021–22; 7,698

2022–23; 25,891

ಎಲ್ಲಿಂದ ಆಮದು: ಕೆನಡಾ, ಇಂಡೋನೇಷ್ಯಾ, ಮಾಲ್ಡೀವ್ಸ್‌, ಬರ್ಮಾ, ಸಿಂಗಪುರ, ಶ್ರೀಲಂಕಾ, ತಾಂಜಾನಿಯಾ, ವಿಯೆಟ್ನಾಂ

 

ಇತರ ಅಡಿಕೆ 

ವರ್ಷ: ಪ್ರಮಾಣ (ಟನ್‌ಗಳಲ್ಲಿ)

2019–20; 11,855

2020–21; 13,998

2021–22; 18,274

2022–23; 35,559

 ಎಲ್ಲಿಂದ ಆಮದು: ಇಂಡೋನೇಷ್ಯಾ, ಬರ್ಮಾ, ಸಿಂಗಪುರ, ಶ್ರೀಲಂಕಾ ಮತ್ತು ಯುಎಇ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.