ಶುಕ್ರವಾರ, ಆಗಸ್ಟ್ 23, 2019
21 °C
ಪ್ರತಿ ತಿಂಗಳೂ ಕಡಿಮೆಯಾಗುತ್ತಿದೆ ವಾಹನ ಮಾರಾಟ

ವಾಹನ ಉದ್ಯಮ: 3.5 ಲಕ್ಷ ಉದ್ಯೋಗಕ್ಕೆ ಕತ್ತರಿ

Published:
Updated:

ನವದೆಹಲಿ (ರಾಯಿಟರ್ಸ್‌): ದೇಶದಲ್ಲಿ ವಾಹನ ಮಾರಾಟ ಕುಸಿತ ಕಾಣುತ್ತಿರುವುದರಿಂದ ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತವಾಗುತ್ತಿದೆ.

ಏಪ್ರಿಲ್‌ನಿಂದ ಈಚೆಗೆ ‌ವಾಹನ, ಬಿಡಿಭಾಗ ತಯಾರಿಕೆ ಮತ್ತು ವಿತರಣಾ ಸಂಸ್ಥೆಗಳಿಂದ ಒಟ್ಟಾರೆ 3.50 ಲಕ್ಷ ಸಿಬ್ಬಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಉದ್ಯಮ ವಲಯದ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಬಹಳಷ್ಟು ಕಂಪನಿಗಳು ತಯಾರಿಕೆ ತಗ್ಗಿಸುವ, ಕೆಲ ದಿನಗಳ ಮಟ್ಟಿಗೆ ತಯಾರಿಕೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿವೆ. ವಿತರಣಾ ಸಂಸ್ಥೆಗಳು ತಮ್ಮ ಷೋರೂಂಗಳನ್ನು ಮುಚ್ಚಲಾರಂಭಿಸಿವೆ ಎಂದು ಮೂಲಗಳು ತಿಳಿಸಿವೆ.

‘ವಾಹನ ಉದ್ಯಮವು ಆರ್ಥಿಕ ಹಿಂಜರಿತ ಎದುರಿಸುತ್ತಿದೆ’ ಎಂದು ವಾಹನ ಬಿಡಿಭಾಗಗಳ ತಯಾರಕರ ಒಕ್ಕೂಟದ (ಎಸಿಎಂಎ) ಪ್ರಧಾನ ನಿರ್ದೇಶಕ ವಿನಿ ಮೆಹ್ತಾ ತಿಳಿಸಿದ್ದಾರೆ.

ಉತ್ತೇಜಕ ಕೊಡುಗೆ ನೀಡಲು ಒತ್ತಾಯ

ವಾಹನ ಉದ್ಯಮದ ಚೇತರಿಕೆಗೆ ಪೂರಕವಾದ ಉತ್ತೇಜಕ ಕೊಡುಗೆಗಳನ್ನು ನೀಡುವಂತೆ ಕಂಪನಿಗಳ ಮುಖ್ಯಸ್ಥರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಮಾರುತಿ ಸುಜುಕಿ ಅಧ್ಯಕ್ಷ ಆರ್‌.ಸಿ.ಭಾರ್ಗವ್‌, ಮಹೀಂದ್ರಾ ಅಧ್ಯಕ್ಷ ರಾಜನ್‌ ವಧೇರಾ ಅವರನ್ನೂ ಒಳಗೊಂಡು ವಿವಿಧ ಒಕ್ಕೂಟಗಳ ಪ್ರತಿನಿಧಿಗಳು ಬುಧವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿ ಉದ್ಯಮದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

‘ಜಿಎಸ್‌ಟಿ ದರ ಕಡಿತವೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಬೇಡಿಕೆ ಇಡಲಾಗಿದೆ. ಪರಿಹಾರ ಕ್ರಮಗಳು ಶೀಘ್ರದಲ್ಲೇ ಬರುವ ವಿಶ್ವಾಸವಿದೆ’ ಎಂದು ಎಸ್‌ಐಎಎಂನ ಅಧ್ಯಕ್ಷರೂ ಆಗಿರುವ ರಾಜನ್‌ ವಧೇರಾ ಹೇಳಿದ್ದಾರೆ.

Post Comments (+)