ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6.25 ಲಕ್ಷ ಕ್ವಿಂಟಲ್‌ ಉಂಡೆ ಕೊಬ್ಬರಿ ಖರೀದಿಗೆ ನಿಗದಿ

ದಾಸ್ತಾನು ಇರುವ ಪೂರ್ಣ ಕೊಬ್ಬರಿ ಖರೀದಿಗೆ ಬೆಳೆಗಾರರ ಒತ್ತಾಯ
Published 8 ಫೆಬ್ರುವರಿ 2024, 0:30 IST
Last Updated 8 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಋತುವಿನಡಿ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಒಟ್ಟು 6.25 ಲಕ್ಷ ಕ್ವಿಂಟಲ್‌ (62,500 ಟನ್‌) ಉಂಡೆ ಕೊಬ್ಬರಿ ಖರೀದಿಗೆ ನಿರ್ಧರಿಸಿದೆ.

ಕಳೆದ ಋತುವಿನಲ್ಲಿ ರಾಜ್ಯದ ರೈತರಿಂದ 5 ಲಕ್ಷ ಕ್ವಿಂಟಲ್ (50,167 ಟನ್‌) ಖರೀದಿಸಿತ್ತು. ಇದಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚುವರಿಯಾಗಿ 1.25 ಲಕ್ಷ ಕ್ವಿಂಟಲ್‌ನಷ್ಟು ಕೊಬ್ಬರಿ ಖರೀದಿಸಲಿದೆ.  

ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಕೊಬ್ಬರಿ ಖರೀದಿಗೆ ಒಟ್ಟು 48 ನೋಂದಣಿ ಕೇಂದ್ರಗಳನ್ನು ತೆರೆದಿದ್ದು, ಮೂರು ದಿನಗಳಿಂದ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಕರ್ನಾಟಕದಲ್ಲಿ ನಾ‍ಫೆಡ್‌ ಖರೀದಿ ಏಜೆನ್ಸಿಯಾಗಿದೆ.

ರೈತರ ಆತಂಕ ಏನು?:

ಕಳೆದ ವರ್ಷ ಫೆಬ್ರುವರಿಯಿಂದ ಜುಲೈವರೆಗೆ ಖರೀದಿ ಪ್ರಕ್ರಿಯೆ ನಡೆದಿತ್ತು. ರೈತರ ಒತ್ತಾಯದ ಮೇರೆಗೆ ಈ ಅವಧಿಯನ್ನು ಒಂದು ತಿಂಗಳು ವಿಸ್ತರಿಸಲಾಗಿತ್ತು. ಈ ಬಾರಿ ಏಪ್ರಿಲ್‌ವರೆಗೆ ಮಾತ್ರವೇ ಖರೀದಿಗೆ ಸರ್ಕಾರ ಸಮಯ ನಿಗದಿಪಡಿಸಿರುವುದು ರೈತರನ್ನು ಆತಂಕದ ಮಡುವಿಗೆ ದೂಡಿದೆ. 

ಸರ್ಕಾರವು ಕಳೆದ ಡಿಸೆಂಬರ್‌ ತಿಂಗಳ ಕೊನೆಯ ವಾರದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸಿತ್ತು. ದರ ಕುಸಿತದಿಂದ ಕಂಗಾಲಾಗಿದ್ದ ರೈತರು ಆಗಿನಿಂದಲೇ ನಾಫೆಡ್‌ ಕೇಂದ್ರಗಳಲ್ಲಿ ಮಾರಾಟಕ್ಕೆ ದಾಸ್ತಾನು ಮಾಡಿದ್ದಾರೆ.

ಆದರೆ, 6.25 ಲಕ್ಷ ಕ್ವಿಂಟಲ್‌ ಖರೀದಿಗೆ ಮಿತಿ ನಿಗದಿಪಡಿಸಿದೆ. ಈ ಮಿತಿ ಪೂರ್ಣಗೊಂಡ ಬಳಿಕ ಹೆಚ್ಚುವರಿ ಖರೀದಿಗೆ ಅವಕಾಶ ಇರುವುದಿಲ್ಲ. ಅಲ್ಲದೆ, ಖರೀದಿ ಪ್ರಕ್ರಿಯೆಗೆ ಮೂರು ತಿಂಗಳಷ್ಟೇ ಸಮಯ ನಿಗದಿ‍ಪಡಿಸಿದೆ. ಇದೇ ರೈತರ ಆತಂಕಕ್ಕೆ ಕಾರಣವಾಗಿದ್ದು, ನೋಂದಣಿಗಾಗಿ ಸಾಲುಗಟ್ಟಿ ನಿಲ್ಲುವಂತಾಗಿದೆ.

ಎಂದಿನಿಂದ ಖರೀದಿ?:

‘ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಪೋರ್ಟಲ್‌ನಲ್ಲಿ ನೋಂದಣಿಯಾದ ರೈತರ ದತ್ತಾಂಶವು ನಾಫೆಡ್‌ನ ಇ–ಸಮೃದ್ಧಿ ಪೋರ್ಟಲ್‌ಗೆ ರವಾನೆಯಾದ ಬಳಿಕ ಖರೀದಿ ಪ್ರಕ್ರಿಯೆಯನ್ನು ಆರಂಭಿಸಲಾಗುವುದು’ ಎಂದು ನಾಫೆಡ್‌ನ ರಾಜ್ಯ ಮುಖ್ಯಸ್ಥೆ ಜ್ಯೋತಿ ಪಾಟೀಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

....
....

ಅಂಕಿಅಂಶ

₹12,000– ಕ್ವಿಂಟಲ್‌ಗೆ ನಿಗದಿಯಾಗಿರುವ ಬೆಂಬಲ ಬೆಲೆ ₹1,500– ರಾಜ್ಯ ಸರ್ಕಾರದ ಪ್ರೋತ್ಸಾಹ ಧನ 1.33 ಲಕ್ಷ ಟನ್‌– ಕಳೆದ ವರ್ಷ ದೇಶದಲ್ಲಿ ಕೇಂದ್ರದಿಂದ ಖರೀದಿಸಿದ್ದ ಒಟ್ಟು ಕೊಬ್ಬರಿ ₹1,493 ಕೋಟಿ– ಬೆಂಬಲ ಬೆಲೆಯಡಿ ರೈತರಿಗೆ ಪಾವತಿಸಿದ ಮೊತ್ತ 

ಸರ್ಕಾರವು ಏಪ್ರಿಲ್‌ವರೆಗಷ್ಟೇ ಖರೀದಿಗೆ ಸಮಯ ನಿಗದಿಪಡಿಸಿದೆ. ಬೆಂಬಲ ಬೆಲೆಯಡಿ ಖರೀದಿಸಿದ ಕೊಬ್ಬರಿಯು ಮಾರಾಟವಾದ ಬಳಿಕ ಮತ್ತೆ ಖರೀದಿ ಪ್ರಕ್ರಿಯೆ ಆರಂಭಿಸುವ ನಿರೀಕ್ಷೆಯಿದೆ

-ಜ್ಯೋತಿ ಪಾಟೀಲ್‌ ನಾಫೆಡ್‌ನ ರಾಜ್ಯ ಮುಖ್ಯಸ್ಥೆ 

ನೋಂದಣಿ ಪ್ರಕ್ರಿಯೆ ಚುರುಕು

‘ನೋಂದಣಿ ಕೇಂದ್ರಗಳಲ್ಲಿ ಸರ್ವರ್‌ ಸಮಸ್ಯೆಯಿಲ್ಲ. ನೆಟ್‌ವರ್ಕ್‌ ಸಮಸ್ಯೆ ಇರುವ ಕೇಂದ್ರಗಳಲ್ಲಷ್ಟೇ ನೋಂದಣಿ ನಿಧಾನಗತಿಯಲ್ಲಿತ್ತು. ಅಂತಹ ಕೇಂದ್ರಗಳಲ್ಲಿ ಸಮಸ್ಯೆ ಸರಿಪಡಿಸಿ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಆರ್‌. ಶ್ರೀಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬುಧವಾರದವರೆಗೆ 3.60 ಲಕ್ಷ ಕ್ವಿಂಟಲ್ ಕೊಬ್ಬರಿ ಮಾರಾಟಕ್ಕೆ 20978 ರೈತರು ಹೆಸರು ನೋಂದಾಯಿಸಿದ್ದಾರೆ. ಇನ್ನು ಎರಡು– ಮೂರು ದಿನಗಳಲ್ಲಿ ಸರ್ಕಾರವು ಖರೀದಿಗೆ ನಿಗದಿಪಡಿಸಿರುವ ಮಿತಿಗೆ ಅನುಗುಣವಾಗಿ ನೋಂದಣಿ ಪ್ರಕ್ರಿಯೆಯು ಪೂರ್ಣಗೊಳ್ಳುವ ನಿರೀಕ್ಷೆಯಿದೆ’ ಎಂದರು.

ಮಾನದಂಡ ಮಾರ್ಪಾಡಿಗೆ ಮನವಿ

‘ನನಗೆ ಆರು ಎಕರೆ ತೋಟವಿದ್ದು 300 ತೆಂಗಿನ ಮರಗಳಿವೆ. 50 ಸಾವಿರಕ್ಕೂ ಹೆಚ್ಚು ಸಿಪ್ಪೆ ಕೊಬ್ಬರಿ ದಾಸ್ತಾನಿದೆ. ಇದನ್ನು ಸುಲಿದರೆ  ಸುಮಾರು 75 ಕ್ವಿಂಟಲ್‌ನಷ್ಟು ಕೊಬ್ಬರಿ ಸಿಗಲಿದೆ’ ಎಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕಾವಲ ಹೊಸೂರು ಗ್ರಾಮದ ತೆಂಗು ಬೆಳೆಗಾರ ಹೊಂಗ್ಯಪ್ಪ ತಿಳಿಸಿದರು. ‘ಆದರೆ ಸರ್ಕಾರ ನಿಗದಿಪಡಿಸಿರುವ ಮಾನದಂಡದ ಅನ್ವಯ ಐದು ಎಕರೆ ತೋಟ ಇದ್ದವರಿಂದ ಗರಿಷ್ಠ 18 ಕ್ವಿಂಟಲ್‌ನಷ್ಟು ಮಾತ್ರವೇ ಕೊಬ್ಬರಿ ಖರೀದಿಸಲಾಗುತ್ತದೆ. ಒಂದು ವರ್ಷದಿಂದಲೂ ಕೊಬ್ಬರಿ ದಾಸ್ತಾನು ಇಟ್ಟಿದ್ದೇನೆ. ಉಳಿದ ಕೊಬ್ಬರಿಯನ್ನು ಏನು ಮಾಡಬೇಕು ಎಂಬುದು ತೋಚುತ್ತಿಲ್ಲ. ರೈತರ ಬಳಿ ದಾಸ್ತಾನು ಇರುವ ಸಂಪೂರ್ಣ ಕೊಬ್ಬರಿಯನ್ನು ಸರ್ಕಾರ ಖರೀದಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT