ಗುರುವಾರ , ಮಾರ್ಚ್ 4, 2021
19 °C
ಗೃಹೋಪಯೋಗಿ ಸಲಕರಣೆ ಖರೀದಿಗೆ ಒಲವು

ಬೆಂಗಳೂರಿನಲ್ಲಿ ಬೈಕ್‌ಗೆ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬೆಂಗಳೂರು ಸೇರಿದಂತೆ ದೇಶದ ಮಹಾ ನಗರಗಳಲ್ಲಿ ಒಂದು ವರ್ಷಾವಧಿಯಲ್ಲಿ ಗೃಹೋಪಯೋಗಿ ಸಲಕರಣೆಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿರುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಸರಕು ಮತ್ತು ಸೇವೆಗಳ ಕುರಿತು ಗ್ರಾಹಕರ ಬೇಡಿಕೆಯಲ್ಲಿನ ಕುಸಿತವು ದೇಶಿ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎನ್ನುವ ವರದಿಗಳ ಹೊರತಾಗಿಯೂ, ಮಹಾನಗರಗಳಲ್ಲಿ ಗೃಹ ಬಳಕೆ ಸರಕು ಮತ್ತು ದ್ವಿಚಕ್ರ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಸಮೀಕ್ಷೆ ದೃಢಪಡಿಸಿದೆ.

ಅಂತರರಾಷ್ಟ್ರೀಯ ಆರ್ಥಿಕ ಬಾಂಧವ್ಯಕ್ಕೆ ಸಂಬಂಧಿಸಿದ ಭಾರತದ ಸಂಶೋಧನಾ ಮಂಡಳಿಯು (ಐಸಿಆರ್‌ಐಇಆರ್‌) ನಡೆಸಿರುವ ಅಧ್ಯಯನದಲ್ಲಿ ಈ ವಿವರಗಳು ತಿಳಿದು ಬಂದಿವೆ.

ಒಂದು ವರ್ಷದ ಅವಧಿಯಲ್ಲಿ ಗ್ರಾಹಕರು ಗಮನಾರ್ಹ ಪ್ರಮಾಣದಲ್ಲಿ ಗೃಹೋಪಯೋಗಿ ಸಲಕರಣೆಗಳನ್ನು ಖರೀದಿಸಿದ ವಿಷಯದಲ್ಲಿ ಬೆಂಗಳೂರು ಮುಂಚೂಣಿಯಲ್ಲಿ ಇದೆ. ದೇಶದಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶದ ಬಳಕೆದಾರರನ್ನು  ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಬೆಂಗಳೂರಿನ ಶೇ 72 ರಷ್ಟು ಜನರು ಗೃಹೋಪಯೋಗಿ ಸಲಕರಣೆಗಳ ಖರೀದಿಗೆ ಹೆಚ್ಚಿನ ಒಲವು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಕೋಲ್ಕತ್ತ (ಶೇ 62) ಮತ್ತು ದೆಹಲಿ ಮಹಾ ನಗರಗಳು (ಶೇ 52) ಇವೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಖರೀದಿಯಲ್ಲಿಯೂ ಬೆಂಗಳೂರು (ಶೇ 23) ಮೊದಲ ಸ್ಥಾನ ಮತ್ತು ದೆಹಲಿ (ಶೇ 17) ನಂತರದ ಸ್ಥಾನದಲ್ಲಿ ಇವೆ. ಮೊಬೈಲ್‌ ಖರೀದಿಯಲ್ಲಿ ಮುಂಬೈ (ಶೇ 78) ಮುಂಚೂಣಿಯಲ್ಲಿ ಇದೆ. ಭೋಪಾಲ್‌ (ಶೇ 68) ಎರಡನೆ ಸ್ಥಾನದಲ್ಲಿ ಇದೆ.

ಖಚಿತ ಮಾಹಿತಿ: ಸರಕುಗಳ ಬೆಲೆಗಳ ಬಗ್ಗೆ ಹೆಚ್ಚು ಸೂಕ್ಷ್ಮತೆ ತೋರುವ ಮಧ್ಯಮ ವರ್ಗ ಮತ್ತು ಕಡಿಮೆ ಆದಾಯದ ಗ್ರಾಹಕರು ಮಾಡುವ ವೆಚ್ಚಕ್ಕೆ ಸಂಬಂಧಿಸಿದ ಸಮೀಕ್ಷೆಗಳು ಖಚಿತ ಮಾಹಿತಿ ನೀಡುತ್ತವೆ.

ಸಾಲ ಸೌಲಭ್ಯ ಮಾಹಿತಿ: ಗೃಹೋಪಯೋಗಿ ಮತ್ತು ದ್ವಿಚಕ್ರ ವಾಹನಗಳನ್ನು ಖರೀದಿಸಲು ಲಭ್ಯ ಇರುವ ಸಾಲ ಸೌಲಭ್ಯಗಳ ಕುರಿತು ಮಧ್ಯಮ ವರ್ಗದ ಶೇ 67 ಮತ್ತು ಕಡಿಮೆ ಆದಾಯದ ಶೇ 44 ರಷ್ಟು ಗ್ರಾಹಕರಲ್ಲಿ ತಿಳಿವಳಿಕೆ ಇದೆ.

ಬ್ಯಾಂಕ್‌ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಒದಗಿಸುವ ಸಾಲ ಸೌಲಭ್ಯಗಳ ಬಗ್ಗೆ ಬೆಂಗಳೂರಿನ ನಿವಾಸಿಗಳಲ್ಲಿ (ಶೇ 74) ಹೆಚ್ಚಿನ ಅರಿವು ಇದೆ. ಭೋಪಾಲ್‌ನಲ್ಲಿ ಈ ಪ್ರಮಾಣ (ಶೇ 31) ಅತಿ ಕಡಿಮೆ ಮಟ್ಟದಲ್ಲಿ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು