ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಸಿಐಸಿಐ ಬ್ಯಾಂಕ್‌ ನಿರ್ಮಾತೃ ವಘುಲ್ ಇನ್ನಿಲ್ಲ

Published 18 ಮೇ 2024, 16:14 IST
Last Updated 18 ಮೇ 2024, 16:14 IST
ಅಕ್ಷರ ಗಾತ್ರ

ಮುಂಬೈ: ಐಸಿಐಸಿಐ ಬ್ಯಾಂಕ್‌ನ ನಿರ್ಮಾತೃ ನಾರಾಯಣನ್‌ ವಘುಲ್ (88) ಶನಿವಾರ ಚೆನ್ನೈನಲ್ಲಿ ನಿಧನರಾದರು. 

‌ಕೆಲವು ದಿನಗಳ ಹಿಂದೆ ಮನೆಯಲ್ಲಿ ಕುಸಿದು ಬಿದ್ದು, ಪ್ರಜ್ಞೆ ಕಳೆದುಕೊಂಡಿದ್ದ  ಅವರನ್ನು ಆಸ್ಪತ್ರೆಗೆ ದಾಖಲಿಸಿ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿತ್ತು. 

ಮೃತರಿಗೆ ಪತ್ನಿ ಪದ್ಮಾ, ಪುತ್ರ ಮೋಹನ್‌ ಹಾಗೂ ಪುತ್ರಿ ಸುಧಾ ಇದ್ದಾರೆ. ಭಾನುವಾರ ಚೆನ್ನೈನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಗ್ರಾಮೀಣ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ಅವರು, ಮದ್ರಾಸ್‌ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. 2010ರಲ್ಲಿ ಕೇಂದ್ರ ಸರ್ಕಾರವು ಅವರಿಗೆ ಪದ್ಮಭೂಷಣ ನೀಡಿ ಗೌರವಿಸಿತ್ತು ಎಂದು ಮೂಲಗಳು ತಿಳಿಸಿವೆ.

1960ರಲ್ಲಿ ವಘುಲ್‌ ಅವರು ಸ್ಟೇಟ್‌ ಬ್ಯಾಂಕ್‌ ಆಪ್‌ ಇಂಡಿಯಾದ ಅಧಿಕಾರಿಯಾಗಿ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಪ್ರವೇಶಿಸಿದರು. ಈ ಹುದ್ದೆ ತ್ಯಜಿಸಿದ ಅವರು, ಪುಣೆಯಲ್ಲಿ ಇರುವ ರಾಷ್ಟ್ರೀಯ ಬ್ಯಾಂಕಿಂಗ್‌ ನಿರ್ವಹಣಾ ಸಂಸ್ಥೆಯಲ್ಲಿ ಬೋಧಕ ಹುದ್ದೆಗೆ ಸೇರ್ಪಡೆಯಾದರು. ಎರಡೇ ವರ್ಷಗಳಲ್ಲಿ ಆ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೇರಿದರು.

ಬಳಿಕ ಸರ್ಕಾರಿ ಸ್ವಾಮ್ಯದ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ನೇಮಕವಾಗುವ ಮೂಲಕ ಮತ್ತೆ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಮರಳಿದರು.

1981ರಲ್ಲಿ ಬ್ಯಾಂಕ್‌ ಆಫ್‌ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾದರು. ಆಗ ಅವರಿಗೆ 44ರ ಹರೆಯ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಇತಿಹಾಸದಲ್ಲಿಯೇ ಉನ್ನತ ಹುದ್ದೆ ಅಲಂಕರಿಸಿದ ಕಿರಿಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1985ರಲ್ಲಿ ಸಾರ್ವಜನಿಕ ಹಣಕಾಸು ಸಂಸ್ಥೆಯಾಗಿದ್ದ ಐಸಿಐಸಿಐನ ಲಗಾಮು ಹಿಡಿದರು. 11 ವರ್ಷಗಳ ಅವಿರತ ಸೇವೆಯಲ್ಲಿ ಐಸಿಐಸಿಐ ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ ಆಗಿ ರೂಪಾಂತರಗೊಳ್ಳುವಲ್ಲಿ ಶ್ರಮಿಸಿದರು. ಹಲವು ಕಾರ್ಪೊರೇಟ್ ಕಂಪನಿಗಳ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಹಿರಿಮೆಯನ್ನೂ ಅವರು ಹೊಂದಿದ್ದಾರೆ.

ಭೀಷ್ಮ ಪಿತಾಮಹ: ಮಹೀಂದ್ರ ಸಮೂಹದ ಅಧ್ಯಕ್ಷ ಆನಂದ್‌ ಮಹೀಂದ್ರ ಅವರು, ವಘುಲ್‌ ಅವರನ್ನು ‘ಭೀಷ್ಮ ಪಿತಾಮಹ’ ಎಂದು ಕರೆಯುತ್ತಿದ್ದರು. ಅಲ್ಲದೆ, ಅವರೇ ನನಗೆ ಮಾರ್ಗದರ್ಶಕ ಎಂದು ಹೇಳಿದ್ದಾರೆ.

ದೇಶದ ಶಿಕ್ಷಣದ ಗುಣಮಟ್ಟ ಸುಧಾರಿಸಲು ರಚಿಸಲಾದ ‘ಪ್ರಥಮ್‌’ನಂತಹ ನವೀನ ಕಲಿಕಾ ಸಂಸ್ಥೆ ಜೊತೆಗೂ ವಘುಲ್‌ ಒಡನಾಟ ಹೊಂದಿದ್ದರು. 

ವಘುಲ್‌ ಅವರು ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT