ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಸಾಲ ನೀಡಿಕೆ ಇಳಿಕೆ

ಜಿಡಿಪಿ ಇಳಿಕೆ– ಆರ್‌ಬಿಐನಿಂದ ಬಿಗಿ ನಿಯಮ: ಕ್ರಿಸಿಲ್
Published 28 ಮೇ 2024, 23:45 IST
Last Updated 28 ಮೇ 2024, 23:45 IST
ಅಕ್ಷರ ಗಾತ್ರ

ಮುಂಬೈ: ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2024–25ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ಗಳ ಸಾಲ ನೀಡಿಕೆಯು ಶೇ 2ರಷ್ಟು ಕುಸಿತಗೊಳ್ಳುವ ಸಾಧ್ಯತೆಯಿದೆ ಎಂದು ಕ್ರೆಡಿಟ್‌ ರೇಟಿಂಗ್‌ ಸಂಸ್ಥೆ ಕ್ರಿಸಿಲ್‌ ಹೇಳಿದೆ.

2023–24ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣವು ಶೇ 16ರಷ್ಟಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 14ರಷ್ಟಕ್ಕೆ ಇಳಿಕೆಯಾಗಲಿದೆ ಎಂದು ವರದಿ ತಿಳಿಸಿದೆ.

2023–24ನೇ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿಯು ಶೇ 7.6ರಷ್ಟು ಹಾಗೂ 2024–25ನೇ ಆರ್ಥಿಕ ವರ್ಷದಲ್ಲಿ ಶೇ 6.8ರಷ್ಟು ಪ್ರಗತಿ ಕಾಣಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಅಂದಾಜಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಇಳಿಕೆಯಾಗಲಿರುವುದೇ ಸಾಲ ನೀಡಿಕೆಯ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.

ಜಿಡಿಪಿ ಇಳಿಕೆಯಾಗಲಿರುವ ಹಿನ್ನೆಲೆಯಲ್ಲಿ ದೇಶದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಎದುರಾಗಬಹುದಾದ ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ ಆರ್‌ಬಿಐ ಮುನ್ನೆಚ್ಚರಿಕೆಯ ಹೆಜ್ಜೆ ಇಡಲಿದೆ. ಇದರ ಭಾಗವಾಗಿ ಅಡಮಾನರಹಿತ ವೈಯಕ್ತಿಕ ಸಾಲ ನೀಡಿಕೆಯ ನಿಯಮಗಳನ್ನು ಬಿಗಿಗೊಳಿಸಲಿದೆ ಎಂದು ವಿವರಿಸಿದೆ.

ಅಲ್ಲದೆ, ಅಡಮಾನರಹಿತ ವೈಯಕ್ತಿಕ ಸಾಲ ನೀಡುವುದರಿಂದ ಆಗಬಹುದಾದ ನಷ್ಟ ಭರಿಸಲು ತೆಗೆದಿರಿಸುವ ಮೊತ್ತದ ಪ್ರಮಾಣವನ್ನು (ರಿಸ್ಕ್‌ ವೇಯ್ಟ್‌) ಹೆಚ್ಚಿಸುವ ಸಾಧ್ಯತೆಯಿದೆ. ಆರ್‌ಬಿಐನ ಈ ಕ್ರಮದಿಂದಾಗಿ ಸಾಲ ನೀಡಿಕೆಯಲ್ಲಿ ಇಳಿಕೆಯಾಗಲಿದೆ ಎಂದು ಹೇಳಿದೆ.

ನಿಧಾನಗತಿಯ ಠೇವಣಿ ಸಂಗ್ರಹವು ಸಾಲ ನೀಡಿಕೆ ಮೇಲೆ ಪರಿಣಾಮ ಬೀರಬಹುದು. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಠೇವಣಿ ಸಂಗ್ರಹವು ಕುಸಿತವಾಗಬಹುದು ಎಂದು ಹೇಳಿದೆ.‌

ಕಾರ್ಪೊರೇಟ್‌ ಸಾಲದಲ್ಲೂ ಕುಸಿತ ಬ್ಯಾಂಕ್‌ಗಳು

ನೀಡುವ ಒಟ್ಟು ಸಾಲದಲ್ಲಿ ಕಾರ್ಪೊರೇಟ್ ವಲಯದ ಸಾಲದ ಪಾಲು ಶೇ 45ರಷ್ಟಿದೆ. 2023–24ನೇ ಹಣಕಾಸು ವರ್ಷದಲ್ಲಿ ಈ ವಲಯಕ್ಕೆ ಶೇ 14ರಷ್ಟು ಸಾಲ ನೀಡಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 13ಕ್ಕೆ ಇಳಿಕೆಯಾಗಲಿದೆ ಎಂದು ವರದಿ ತಿಳಿಸಿದೆ. ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (ಎನ್‌ಬಿಎಫ್‌ಸಿ) ಆರ್‌ಬಿಐ ವಿಧಿಸಿರುವ ನಿರ್ಬಂಧಗಳಿಂದಾಗಿ ಕಾರ್ಪೊರೇಟ್‌ ವಲಯಕ್ಕೆ ನೀಡುವ ಸಾಲದ ಪ್ರಮಾಣದಲ್ಲಿ ಕುಸಿತವಾಗಲಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ರೀಟೆಲ್‌ ವಲಯಕ್ಕೆ ಸಾಲ ನೀಡಿಕೆ ಪ್ರಮಾಣವು ಶೇ 17ರಿಂದ ಶೇ 16ಕ್ಕೆ ಕುಗ್ಗಲಿದೆ. ಅತಿಸಣ್ಣ ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ದಿಮೆ ವಲಯಕ್ಕೆ ನೀಡುವ ಸಾಲದ ಬೆಳವಣಿಗೆ ಪ್ರಮಾಣವು ಶೇ 19ರಿಂದ ಶೇ 15ಕ್ಕೆ ಕುಸಿತವಾಗಲಿದೆ ಎಂದು ವಿವರಿಸಿದೆ. ಆದರೆ ಕೃಷಿ ವಲಯದ ಸಾಲವು ಮಾನ್ಸೂನ್‌ ಆರಂಭದ ಮೇಲೆ ನಿಂತಿದೆ ಎಂದು ಹೇಳಿದೆ.  ‘ಉಕ್ಕು ಸಿಮೆಂಟ್‌ ಮತ್ತು ಔಷಧಗಳು ಕಾರ್ಪೊರೇಟ್‌ ವಲಯದ ಬಂಡವಾಳ ವೆಚ್ಚದ ಚೇತರಿಕೆಗೆ ನೆರವಾಗಲಿದೆ. ಎಲೆಕ್ಟ್ರಾನಿಕ್ಸ್‌ ಸೆಮಿಕಂಡಕ್ಟರ್‌ ವಿದ್ಯುತ್‌ ಚಾಲಿತ ವಾಹನಗಳು ಮತ್ತು ಸೌರ ಫಲಕಗಳು ಕೂಡ ಬಂಡವಾಳ ವೆಚ್ಚಕ್ಕೆ ಸಹಕಾರಿಯಾಗಲಿವೆ’ ಎಂದು ಕ್ರಿಸಿಲ್‌ನ ಹಿರಿಯ ನಿರ್ದೇಶಕ ಅಜಿತ್ ವೆಲೋನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT