ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ಬಿಕ್ಕಟ್ಟು: ಬ್ಯಾಂಕ್‌ಗಳಿಂದ ಗ್ರಾಹಕರಿಗೆ ವಿಶೇಷ ತುರ್ತು ಸಾಲ ಸೌಲಭ್ಯ

36 ತಿಂಗಳ ಪಾವತಿ ಗಡುವು
Last Updated 26 ಮಾರ್ಚ್ 2020, 6:57 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ ಸೋಂಕು ವ್ಯಾಪಿಸಿರುವುದರಿಂದ ದೇಶದಲ್ಲಿ ವ್ಯಾಪಾರ ಮತ್ತು ವಹಿವಾಟುಗಳ ಮೇಲೆ ತೀವ್ರ ಪರಿಣಾಮ ಉಂಟಾಗಿದ್ದು, ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೆ ಬ್ಯಾಂಕ್‌ಗಳು ಹಣಕಾಸು ಸಹಕಾರ ನೀಡಲು ಮುಂದಾಗಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಬುಧವಾರ ವಿಶೇಷ ತುರ್ತು ಸಾಲ ಸೌಲಭ್ಯ ಘೋಷಿಸಿವೆ.

'ಇಂಥ ಕಠಿಣ ಸಂದರ್ಭದಲ್ಲಿ ಬ್ಯಾಂಕ್‌ ತನ್ನ ಗ್ರಾಹಕರಿಗೆ ನೆರವಾಗಲು ಬದ್ಧವಾಗಿದೆ. ಆರ್ಥಿಕತೆಯ ವಿವಿಧ ವಲಯಗಳಲ್ಲಿ ಎದುರಾಗಿರುವ ಸವಾಲುಗಳನ್ನು ಗಮನದಲ್ಲಿರಿಸಿಕೊಂಡು ತಕ್ಷಣವೇ ಹೊಸ ಪ್ರಾಡಕ್ಟ್‌ಗೆ ಚಾಲನೆ ನೀಡಿದ್ದೇವೆ. ವ್ಯಾಪಾರಿಗಳು ಹಾಗೂ ಇತರೆ ಗ್ರಾಹಕರಿಗೆ ಇದರಿಂದ ಅಗತ್ಯ ಹಣಕಾಸು ಸಹಕಾರ ಸಿಗಲಿದೆ' ಎಂದು ಇಂಡಿಯನ್‌ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಪದ್ಮಜ ಚುಂದೂರು ಹೇಳಿದ್ದಾರೆ.

ಇಂಡಿಯನ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡಾ, ಕೆನರಾ ಬ್ಯಾಂಕ್‌, ಯೂಕೊ ಬ್ಯಾಂಕ್‌ ಹಾಗೂ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ಗಳು ತುರ್ತು ಸಾಲ ವ್ಯವಸ್ಥೆ ಕಲ್ಪಿಸಿವೆ. ಬ್ಯಾಂಕ್‌ ಸಿಬ್ಬಂದಿ ಸುರಕ್ಷತೆ ಹಾಗೂ ಬ್ಯಾಂಕಿಂಗ್‌ ಸೇವೆಗಳಿಗೆ ತೊಡುಕಾಗದಂತೆ ಈಗಾಗಲೇ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ 'ಕೋವಿಡ್‌ ಎಮರ್ಜೆನ್ಸಿ ಲೈನ್‌ ಆಫ್‌ ಕ್ರೆಡಿಟ್‌ (ಸಿಇಎಲ್‌ಸಿ)'ಗೆ ಚಾಲನೆ ನೀಡಿದೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕಾರ್ಪೊರೇಟ್‌ ಉದ್ಯಮಿಗಳಿಗಾಗಿ ಬ್ಯಾಂಕ್‌ ಆಫ್ ಬರೋಡಾ ವಿಶೇಷ ತುರ್ತು ಸಾಲ ನೀಡುತ್ತಿದೆ. ಎಸ್‌ಬಿಐ ಕಳೆದ ವಾರವೇ ಹೆಚ್ಚುವರಿ ಸಾಲ ನೀಡಿಕೆ ಸೌಲಭ್ಯ ಘೋಷಿಸಿದೆ.

ವ್ಯಾಪಾರಿ, ವೇತನದಾರರಿಗೂ ಸಿಗುತ್ತೆ ತುರ್ತು ಸಾಲ

'ಕೋವಿಡ್‌–19' ಪ್ರಭಾವದಿಂದ ಸಂಕಷ್ಟಕ್ಕೆ ಸಿಲುಕಿರುವ ಕೈಗಾರಿಕೆಗಳು, ಕಾರ್ಪೊರೇಟ್‌, ವ್ಯಾಪಾರ, ಕೃಷಿ ಮತ್ತು ರಿಟೇಲ್‌ ಗ್ರಾಹಕರಿಗಾಗಿಯೇ ಸರ್ಕಾರಿ ಸ್ವಾಮ್ಯದ ಬಹುತೇಕ ಬ್ಯಾಂಕ್‌ಗಳು ಸಾಲ ನೀಡುತ್ತಿವೆ. ಉದ್ಯಮಗಳಿಗೆ ಅನುಸಾರ ಹೆಚ್ಚುವರಿಯಾಗಿ ಶೇ 10ರ ವರೆಗೂ ಸಾಲ ಸಹಕಾರ ನೀಡಲಾಗುತ್ತಿದ್ದು, ಒಟ್ಟು ಸಾಲದ ಅವಧಿ 36 ತಿಂಗಳಾಗಿದೆ. ಆರಂಭದ 6 ತಿಂಗಳು ಪಾವತಿಗೆ ತಾತ್ಕಾಲಿಕ ಬಿಡುವು ನೀಡಲಾಗಿದೆ. 1 ವರ್ಷದ ವರೆಗೂ ನಿಗದಿತ ಬಡ್ಡಿ ದರ ಇರಲಿದೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಗರಿಷ್ಠ ₹50 ಲಕ್ಷದ ವರೆಗೂ ಸಾಲ ಸಿಗಲಿದೆ.

ಇಂಡಿಯನ್‌ ಬ್ಯಾಂಕ್‌ ದುಡಿಯುವ ಮಹಿಳೆಯರಿಗಾಗಿ ₹5,000ದಿಂದ ಗರಿಷ್ಠ ₹1 ಲಕ್ಷದ ವರೆಗೂ 'ಸಹಾಯ' ಸಾಲ ನೀಡುತ್ತಿದೆ. ಈ ಸಾಲ ಮರು ಪಾವತಿಗೂ ಗರಿಷ್ಠ 36 ತಿಂಗಳು ಮಿತಿ ಇದೆ. ಇದರಿಂದ ಸುಮಾರು 22 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಬ್ಯಾಂಕ್ ತಿಳಿಸಿದೆ.

ಇನ್ನೂ ವೇತನ ಪಡೆಯುವ ವರ್ಗಕ್ಕೂ 'ಕೋವಿಡ್‌ ತುರ್ತು ವೇತನ ಸಾಲ' ಲಭ್ಯವಿದೆ. ಇತ್ತೀಚಿನ ವೇತನದ 20 ಪಟ್ಟು ಅಥವಾ ಗರಿಷ್ಠ ₹2 ಲಕ್ಷದ ವರೆಗೂ ಸಾಲ ಸಿಗಲಿದೆ. ವೈದ್ಯಕೀಯ ತುರ್ತು ಹಾಗೂ ಇತರೆ ಖರ್ಚುಗಳಿಗಾಗಿ ಉಪಯೋಗವಾಗಲಿರುವ ಸಾಲ ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ.

ಬ್ಯಾಂಕ್‌ನ ಶೇ 50ರಷ್ಟು ಸಿಬ್ಬಂದಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಹಕರು ಬ್ಯಾಂಕ್‌ ಶಾಖೆಗಳಿಗೆ ಭೇಟಿ ನೀಡುವ ಬದಲು ಡಿಜಿಟಲ್‌ ವಹಿವಾಟು ನಡೆಸುವಂತೆ ಸಲಹೆ ಮಾಡಲಾಗುತ್ತಿದೆ. ಹಣ ಪಾವತಿ ಮತ್ತು ವರ್ಗಾವಣೆಗಳಿಗೆ ಮೊಬೈಲ್ ಬ್ಯಾಂಕಿಂಗ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌, ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಪಾವತಿಗೆ ಬ್ಯಾಂಕ್‌ಗಳು ಉತ್ತೇಜಿಸುತ್ತಿವೆ. ವಿಡಿಯೊಗಳ ಮೂಲಕ ಡಿಜಿಟಲ್‌ ಪಾವತಿ ಕುರಿತು ಮಾಹಿತಿ ನೀಡಲಾಗುತ್ತಿದೆ. ಪಿಂಚಣಿ ಪಡೆಯುತ್ತಿರುವವರಿಗೆ ಮನೆಯ ಬಾಗಿಲಿಗೇ ಹಣ ಸಂದಾಯ ಮಾಡುವ ಕ್ರಮಗಳ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT