ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳತ್ತ ಬೌನ್ಸ್ ಮುಖ

ಬೆಂಗಳೂರು: ದ್ವಿಚಕ್ರ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ನೀಡುವ ನವೋದ್ಯಮ ಕಂಪನಿ ‘ಬೌನ್ಸ್’, ಫೆಬ್ರುವರಿ ತಿಂಗಳಿಗೆ ಮೊದಲು ಒಟ್ಟು ನಾಲ್ಕು ಸಾವಿರ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ಸೇವೆಗೆ ಮುಕ್ತವಾಗಿಸುವ ಗುರಿ ಹೊಂದಿರುವುದಾಗಿ ತಿಳಿಸಿದೆ.
ಈಗ ಬೆಂಗಳೂರು ಮತ್ತು ಹೈದರಾಬಾದ್ಗಳಲ್ಲಿ ಬೌನ್ಸ್ ಕಂಪನಿಯು ಸೇವೆಗೆ ಲಭ್ಯವಾಗಿಸಿರುವ ದ್ವಿಚಕ್ರ ವಾಹನಗಳ ಪೈಕಿ ಶೇಕಡ 50ರಷ್ಟು ವಾಹನಗಳು ವಿದ್ಯುತ್ ಚಾಲಿತ ಎಂದು ಕಂಪನಿ ಹೇಳಿದೆ.
2021ರ ಮೂರನೆಯ ತ್ರೈಮಾಸಿಕಕ್ಕೆ ಮೊದಲು, ಸಾಂಪ್ರದಾಯಿಕ ಇಂಧನ ಬಳಸುವ ದ್ವಿಚಕ್ರ ವಾಹನಗಳ ಸೇವೆಯನ್ನು ಪೂರ್ತಿಯಾಗಿ ನಿಲ್ಲಿಸಿ, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ಮಾತ್ರ ಸೇವೆಗೆ ಲಭ್ಯವಾಗಿಸುವ ಗುರಿ ಹೊಂದಿರುವುದಾಗಿಯೂ ‘ಬೌನ್ಸ್’ ತಿಳಿಸಿದೆ.
‘ಕೋವಿಡ್–19 ಸಾಂಕ್ರಾಮಿಕವು ಉದ್ಯಮಗಳಿಗೆ ತೊಂದರೆ ತಂದಿತ್ತಾಗ, ನಾವು ಅದನ್ನು ನಮಗೆ ಪ್ರಯೋಜನವಾಗುವ ರೀತಿಯಲ್ಲಿ ಬಳಸಿಕೊಂಡೆವು. ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಬಳಕೆಗೆ ವೇಗ ನೀಡುವ ಕೆಲಸ ಮಾಡಿದೆವು’ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ವಿವೇಕಾನಂದ ಹಳ್ಳೆಕೆರೆ ಹೇಳಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ಬೌನ್ಸ್ ದ್ವಿಚಕ್ರ ವಾಹನಗಳ ಸೇವೆ ಪಡೆಯುವವರ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆ ಕಂಡುಬರುತ್ತಿದೆ. ಕಂಪನಿಯ ದ್ವಿಚಕ್ರ ವಾಹನಗಳಿಗೆ ಈಗ ಬರುತ್ತಿರುವ ಬೇಡಿಕೆಯು ಕೋವಿಡ್–19 ಪೂರ್ವದ ಸ್ಥಿತಿಗೆ ಹೋಲಿಸಿದರೆ, ಶೇಕಡ 35ರಷ್ಟಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಬೆಂಗಳೂರು ಮಾತ್ರವಲ್ಲದೆ ಹಾಸನ, ಮೈಸೂರು ಮತ್ತು ವಿಜಯವಾಡ ನಗರಗಳಲ್ಲಿ ಕಂಪನಿಯ ಸೇವೆಗಳು ಪುನರಾರಂಭ ಆಗಿವೆ. ಕೋವಿಡ್–19 ಸಾಂಕ್ರಾಮಿಕ ಹರಡುವುದನ್ನು ತಡೆಯಲು ಜಾರಿಯಾದ ಲಾಕ್ಡೌನ್ಗೂ ಮೊದಲು ಬೌನ್ಸ್ ದ್ವಿಚಕ್ರ ವಾಹನಗಳನ್ನು ಬಳಸಿ ಪ್ರತಿದಿನ ಒಟ್ಟು 1.30 ಲಕ್ಷ ಸವಾರಿಗಳು ಆಗುತ್ತಿದ್ದವು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.