ನವದೆಹಲಿ: ಆರೋಗ್ಯ ವಿಮೆ ಹಾಗೂ ಜೀವ ವಿಮೆಗಳ ಪ್ರೀಮಿಯಂ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಈಗಿರುವ ಶೇಕಡ 18ಕ್ಕಿಂತ ಕಡಿಮೆ ಮಾಡಬೇಕು ಎಂಬ ವಿಚಾರವಾಗಿ ಜಿಎಸ್‌ಟಿ ಮಂಡಳಿಯಲ್ಲಿ ಬಹುತೇಕ ಸಹಮತ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿದೆ.
ಆದರೆ ಈ ಕುರಿತ ಅಂತಿಮ ತೀರ್ಮಾನವನ್ನು ಜಿಎಸ್‌ಟಿ ಮಂಡಳಿಯ ಮುಂದಿನ ಸಭೆಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ಗೊತ್ತಾಗಿದೆ. ಜಿಎಸ್‌ಟಿ ಮಂಡಳಿಯ ಸಭೆಯು ಸೋಮವಾರ ನಡೆಯಿತು.
ವಿಮಾ ಪ್ರೀಮಿಯಂಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವುದರ ಪರಿಣಾಮದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಿಗಳನ್ನು ಒಳಗೊಂಡಿರುವ ಫಿಟ್‌ಮೆಂಟ್ ಸಮಿತಿಯು ವರದಿಯೊಂದನ್ನು ಸಲ್ಲಿಸಿತು.
ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಸಂಗ್ರಹವಾಗುತ್ತಿರುವ ವರಮಾನದ ಮೊತ್ತವು ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಿರುವ ಕಾರಣಕ್ಕೆ, ವಿಮಾ ಕಂತುಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂಬ ವಿಚಾರದಲ್ಲಿ ಬಹುತೇಕ ರಾಜ್ಯಗಳು ಸಮ್ಮತಿ ವ್ಯಕ್ತಪಡಿಸಿವೆ ಎಂದು ಗೊತ್ತಾಗಿದೆ.
ಜಿಎಸ್‌ಟಿ ಪ್ರಮಾಣವನ್ನು ಕಡಿಮೆ ಮಾಡಿದಲ್ಲಿ, ಕೋಟ್ಯಂತರ ಮಂದಿ ಪಾಲಿಸಿದಾರರಿಗೆ ಅನುಕೂಲ ಆಗಲಿದೆ.