ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌, ಡೀಸೆಲ್‌ಗೆ ಸೆಸ್‌ ಹೊರೆ: ಪ್ರತಿ ಲೀಟರಿಗೆ ₹ 3ರವರೆಗೂ ಏರಿಕೆ

Last Updated 5 ಜುಲೈ 2019, 20:06 IST
ಅಕ್ಷರ ಗಾತ್ರ

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸೆಸ್‌ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರವು ಜನಸಾಮಾನ್ಯರ ಪ್ರಯಾಣದ ಹೊರೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಮೇಲೆ ₹ 1 ರಂತೆ ವಿಶೇಷ ಹೆಚ್ಚುವರಿ ಎಕ್ಸೈಸ್‌ ಸುಂಕ ಹಾಗೂ ₹ 1 ರಂತೆ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ ಒಟ್ಟಾರೆ ₹ 2 ಏರಿಕೆಯಾಗಿದೆ. ಇದರಿಂದ ಈಗಾಗಲೇ ಗರಿಷ್ಠ ಮಟ್ಟದಲ್ಲಿರುವ ಇಂಧನ ದರ ಮತ್ತಷ್ಟು ಏರಿಕೆಯಾಗಲಿದೆ.

‘ಕಚ್ಚಾ ತೈಲ ದರ ಇಳಿಮುಖವಾಗಿರುವುದರಿಂದ ತೆರಿಗೆ ದರ ಪರಿಷ್ಕರಣೆಗೆ ಅವಕಾಶ ದೊರೆತಿದೆ’ ಎಂದು ತಮ್ಮ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಮರ್ಥಿಸಿಕೊಂಡಿದ್ದಾರೆ.

ಒಂದು ವಾರದಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಏರುಮುಖವಾಗಿಯೇ ಇವೆ. ಶುಕ್ರವಾರ ಪ್ರತಿ ಲೀಟರ್ ಪೆಟ್ರೋಲ್‌ ದರ ₹ 72.83 ಇದ್ದರೆ, ಡೀಸೆಲ್‌ ದರ ₹ 66.45 ಇದೆ.ರಾಜ್ಯ ವಿಧಿಸುವ ತೆರಿಗೆ ಸೇರಿಸಿದರೆ ಪ್ರತಿ ಲೀಟರ್‌ ದರ ₹ 2.60 ರಿಂದ ₹ 3ರವರೆಗೂ ಏರಿಕೆಯಾಗಲಿದೆ.ಸದ್ಯಕ್ಕೆ, ಎಕ್ಸೈಸ್‌ ಸುಂಕವು ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹ 17.98 ಮತ್ತು ವ್ಯಾಟ್‌ ₹ 14.98 ಇದೆ.

ಗ್ರಾಹಕರಿಗೇ ಹೊರೆ: ‘ಸೆಸ್‌ ಹೊರೆಯನ್ನು ನೇರವಾಗಿ ಗ್ರಾಹಕರೇ ಭರಿಸಬೇಕಾಗುತ್ತದೆ. ಒಂದೊಂದು ರಾಜ್ಯಗಳಲ್ಲಿ ಬೇರೆ ಬೇರೆ ಮಾರಾಟ ತೆರಿಗೆ ದರ ಇದೆ. ಕರ್ನಾಟಕದಲ್ಲಿ ಲೀಟರ್ ಪೆಟ್ರೋಲ್‌ದರ ₹ 2.60 ಮತ್ತು ಡೀಸೆಲ್‌ ದರ ₹ 2.40ರಷ್ಟು ಹೆಚ್ಚಾಗಲಿದೆ ’ ಎಂದು ಕರ್ನಾಟಕ ರಾಜ್ಯ ಪೆಟ್ರೋಲಿಯಂ ವಿತರಕರ ಒಕ್ಕೂಟದ ಅಧ್ಯಕ್ಷ ಎಚ್‌.ಎಸ್‌. ಮಂಜಪ್ಪ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಇಂಧನ ದರ ಪರಿಷ್ಕರಣೆ ಲೆಕ್ಕಾಚಾರವೇ ಅರ್ಥ ಆಗುತ್ತಿಲ್ಲ. ಯಾವ ರೀತಿಯಲ್ಲಿ ದರ ಏರಿಕೆ ಅಥವಾ ಇಳಿಕೆ ಮಾಡಲಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಸೆಸ್‌ ಏರಿಕೆ ಹೊರೆ ಜನರ ಮೇಲೆಯೇ ಬೀಳಲಿದೆ. ಮುಂಬರುವ ದಿನಗಳಲ್ಲಿ ಇಂಧನ ದರಗಳು ಏರಿಕೆಯಾಗುತ್ತಲೇ ಹೋಗಲಿವೆ’ ಎಂದುರಾಜ್ಯ ಪೆಟ್ರೋಲಿಯಂ ವಿತರಕರ ಸಂಘದ ಖಜಾಂಚಿಅರುಣಹುಂಡೇಕಾರ ಪ್ರತಿಕ್ರಿಯೆ ನೀಡಿದ್ದಾರೆ.

ಕಚ್ಚಾ ತೈಲ ದರ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರುಮುಖವಾಗಿಯೇ ಇದೆ. 2019ರ ಜನವರಿ 1ರಂದು ಬ್ರೆಂಟ್‌ ತೈಲ ದರ ಪ್ರತಿ ಬ್ಯಾರೆಲ್‌ಗೆ 53.80 ಡಾಲರ್‌ಗಳಷ್ಟಿತ್ತು. ಜೂನ್‌ 5ರಂದು ಪ್ರತಿ ಬ್ಯಾರೆಲ್‌ಗೆ 63.63 ಡಾಲರ್‌ಗಳಷ್ಟಿದೆ. ಅಂದರೆ 9.83 ಡಾಲರ್‌ಗಳಷ್ಟು ಏರಿಕೆ ಕಂಡಿದೆ.

ಶೇ 5ರಷ್ಟು ಟಿಡಿಎಸ್‌: ಗುತ್ತಿಗೆದಾರರು ಅಥವಾ ವೃತ್ತಿಪರರಿಗೆ ವ್ಯಕ್ತಿಯೊಬ್ಬ ನೀಡುವ ಮೊತ್ತ ಒಂದು ವರ್ಷದಲ್ಲಿ ₹ 50 ಲಕ್ಷ ಮೀರಿದರೆ ಅದಕ್ಕೆ ಶೇ 5ರಷ್ಟು ಟಿಡಿಎಸ್‌ಗೆ (ಮೂಲದಲ್ಲೇ ತೆರಿಗೆ ಕಡಿತ) ಪ್ರಸ್ತಾಪಿಸಲಾಗಿದೆ.ಹಣ ಪಾವತಿಸುವವರ ಪ್ಯಾನ್‌ ಬಳಸಿ ಟ್ರೆಸರಿಯಲ್ಲಿಯೇ ಟಿಡಿಎಸ್‌ ಕಡಿತ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಕಂಪನಿ ತೆರಿಗೆ ವಹಿವಾಟು ಮಿತಿ ಹೆಚ್ಚಳ
ವಾರ್ಷಿಕ ₹ 400 ಕೋಟಿಯವರೆಗೆ ವಹಿವಾಟು ಮಿತಿ ಹೊಂದಿರುವ ಕಂಪನಿಗಳಿಗೆ ಕಾರ್ಪೊರೇಟ್‌ ತೆರಿಗೆಯನ್ನು ಶೇ 25ಕ್ಕೆ ತಗ್ಗಿಸಲಾಗಿದೆ. ಇದರಿಂದ ಶೇ 99.3ರಷ್ಟು ಕಂಪನಿಗಳಿಗೆ ಪ್ರಯೋಜನವಾಗಲಿದೆ. ಈ ಮೊದಲು ₹ 250 ಕೋಟಿಯ ವರೆಗಿನವಹಿವಾಟು ಮೊತ್ತಕ್ಕೆ ಮಾತ್ರವೇ ಶೇ 25ರಷ್ಟು ತೆರಿಗೆ ಅನ್ವಯವಾಗುತ್ತಿತ್ತು.

ಇದಕ್ಕೆಲ್ಲಾ ರಿಟರ್ನ್ಸ್‌ ಕಡ್ಡಾಯ
ಒಂದು ವರ್ಷದಲ್ಲಿಚಾಲ್ತಿ ಖಾತೆಯಲ್ಲಿ ₹ 1 ಕೋಟಿಗೂ ಅಧಿಕ ಮೊತ್ತ ಠೇವಣಿ ಇಟ್ಟರೆ, ವಿದ್ಯುತ್‌ ಬಿಲ್‌ ಪಾವತಿಗೆ ₹ 1 ಲಕ್ಷ ವ್ಯಯಿಸಿದರೆ ಹಾಗೂ ವಿದೇಶಿ ಪ್ರಯಾಣಕ್ಕೆ ₹ 2 ಲಕ್ಷ ಖರ್ಚು ಮಾಡಿದರೆ ರಿಟರ್ನ್ಸ್‌ ಸಲ್ಲಿಕೆ ಕಡ್ಡಾಯಗೊಳಿಸಲು ಪ್ರಸ್ತಾಪಿಸಲಾಗಿದೆ.

ಇ–ವಾಹನಕ್ಕೆ ಪ್ರೋತ್ಸಾಹ
ದೇಶದಲ್ಲಿ ಬ್ಯಾಟರಿಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಬ್ಯಾಟರಿಚಾಲಿತ ವಾಹನ ಖರೀದಿಗೆ ಮಾಡುವ ಸಾಲದ ಬಡ್ಡಿದರ ಪಾವತಿಗಾಗಿ ಆದಾಯ ತೆರಿಗೆಯಲ್ಲಿ ಹೆಚ್ಚುವರಿಯಾಗಿ₹ 1.5 ಲಕ್ಷದವರೆಗೆ ಕಡಿತ ನೀಡಲು ಪ‍್ರಸ್ತಾಪಿಸಲಾಗಿದೆ.

ಬ್ಯಾಂಕ್‌ಗಳಿಗೆ ₹ 70 ಸಾವಿರ ಕೋಟಿ ನೆರವು
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಬಲವರ್ಧನೆ ಮತ್ತು ಸಾಲ ಸಾಮರ್ಥ್ಯ ಹೆಚ್ಚಿಸಲು ₹ 70 ಸಾವಿರ ಕೋಟಿ ನೆರವು ನೀಡಲು ನಿರ್ಧರಿಸಲಾಗಿದೆ.

ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ₹ 1 ಲಕ್ಷ ಕೋಟಿಗಳಷ್ಟು ಕಡಿಮೆಯಾಗಿದೆ. ಹಣಕಾಸು ನಷ್ಟ ಮತ್ತು ದಿವಾಳಿ ಕಾಯ್ದೆಯಿಂದ ಕಳೆದ ನಾಲ್ಕು ವರ್ಷಗಳಲ್ಲಿ ಬ್ಯಾಂಕ್‌ಗಳು ₹ 4 ಲಕ್ಷ ಕೋಟಿಗಳಷ್ಟು ಸಾಲ ವಸೂಲಿ ಮಾಡಿವೆ ಎಂದು ತಿಳಿಸಲಾಗಿದೆ.

ಸಾಲ ಖಾತರಿ: ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಆಸ್ತಿ ಖರೀದಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಒಂದು ಅವಧಿಗೆ ಭಾಗಶಃ ಸಾಲ ಖಾತರಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.

ಉಪಭೋಗದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಮತ್ತು ಎಂಎಸ್‌ಎಂಇಗಳಿಗೆ ಬಂಡವಾಳ ಒದಗಿಸುವಲ್ಲಿ ಎನ್‌ಬಿಎಫ್‌ಸಿಗಳು ಪ್ರಮುಖ ಪಾತ್ರ ವಹಿಸುತ್ತಿವೆ.

ಡಿಜಿಟಲ್‌ ಪಾವತಿಗೆ ಉತ್ತೇಜನ
ಡಿಜಿಟಲ್‌ ಪಾವತಿಗೆ ಉತ್ತೇಜನ ನೀಡಲುಬ್ಯಾಂಕ್‌ನಿಂದ₹ 1 ಕೋಟಿಗೂ ಅಧಿಕ ಮೊತ್ತದ ನಗದು ಪಡೆದರೆ ಶೇ 2ರಷ್ಟು ಟಿಡಿಎಸ್‌ ವಿಧಿಸಲು ಪ್ರಸ್ತಾಪಿಸಲಾಗಿದೆ.

ವಾರ್ಷಿಕ ₹ 50 ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆಸುವವರು ಗ್ರಾಹಕರಿಗೆ ಡಿಜಿಟಲ್‌ ಪಾವತಿಗೆ ಸೌಲಭ್ಯ ನೀಡಬಹುದು. ಇದಕ್ಕೆ ವರ್ತಕರು ಮತ್ತು ಗ್ರಾಹಕರಿಗೆ ಯಾವುದೇ ರೀತಿಯ ಶುಲ್ಕ ಅಥವಾ ಮರ್ಚಂಟ್‌ ಡಿಸ್ಕೌಂಟ್‌ ರೇಟ್‌ (ಎಂಡಿಆರ್‌) ವಿಧಿಸುವುದಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಭೀಮ್‌ ಯುಪಿಐ, ಯುಪಿಐ–ಕ್ಯೂಆರ್‌ ಕೋಡ್‌, ಆಧಾರ್‌ ಪೇ, ಕೆಲವು ಡೆಬಿಟ್‌ ಕಾರ್ಡ್‌ಗಳು, ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್‌ ಸೌಲಭ್ಯಗಳನ್ನು ಗ್ರಾಹಕರಿಗೆ ಕಲ್ಪಿಸಬಹುದಾಗಿದೆ.

ಆದಾಯ ತೆರಿಗೆ ಕಾಯ್ದೆ ಮತ್ತು ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವ ಮೂಲಕ ಇದನ್ನು ಜಾರಿಗೊಳಿಸಲಾಗುವುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT