ಭಾನುವಾರ, ಮಾರ್ಚ್ 26, 2023
23 °C

ಬಿಪಿಸಿಎಲ್‌ನ ಖಾಸಗೀಕರಣದ ನಂತರ ಸಬ್ಸಿಡಿ ಎಲ್‌ಪಿಜಿ ಸಿಗುವುದೇ?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಕಂಪನಿಯು ಖಾಸಗಿಯವರಿಗೆ ಮಾರಾಟ ಆದ ನಂತರವೂ ತನ್ನ ಗ್ರಾಹಕರಿಗೆ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್‌ ಪೂರೈಸಲಿದೆಯೇ?

ದೇಶದಲ್ಲಿ ಉತ್ಪಾದನೆ ಆಗುವ ಎಲ್‌ಪಿಜಿಯನ್ನು (ದ್ರವೀಕೃತ ಪೆಟ್ರೋಲಿಯಂ ಅನಿಲ) ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಮಾತ್ರ ಪೂರೈಕೆ ಮಾಡಬೇಕು ಎಂದು ಎರಡು ದಶಕಗಳ ಹಿಂದೆ ಹೊರಡಿಸಿದ್ದ ಆದೇಶವೊಂದು ಈ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಬಿಪಿಸಿಎಲ್‌ ಖಾಸಗೀಕರಣ ಆದ ನಂತರದಲ್ಲಿ, ಒಎನ್‌ಜಿಸಿ ಮತ್ತು ಗೇಲ್‌ ಉತ್ಪಾದಿಸಿದ ಎಲ್‌ಪಿಜಿ ಪಡೆಯುವ ಅರ್ಹತೆಯನ್ನು ಉಳಿಸಿಕೊಳ್ಳುವುದೇ ಎಂಬ ಬಗ್ಗೆ ವಿವರ ನೀಡುವಂತೆ ಕಾನೂನು ತಜ್ಞರಿಂದ ಅಭಿಪ್ರಾಯ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಗ ಬಿಪಿಸಿಎಲ್‌ ಒಟ್ಟು 8.4 ಕೋಟಿಗಿಂತ ಹೆಚ್ಚು ಎಲ್‌ಪಿಜಿ ಗ್ರಾಹಕರನ್ನು ಹೊಂದಿದೆ. ಇವರಲ್ಲಿ 2.1 ಕೋಟಿ ಉಜ್ವಲಾ ಯೋಜನೆ ಫಲಾನುಭವಿಗಳೂ ಸೇರಿದ್ದಾರೆ.

ಬಿಪಿಸಿಎಲ್‌ ಕಂಪನಿಯು ಇತರ ತೈಲೋತ್ಪನ್ನ ಮಾರಾಟ ಕಂಪನಿಗಳಂತೆಯೇ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ, ಗೇಲ್‌ ಕಂಪನಿಗಳಿಂದ ಎಲ್‌ಪಿಜಿ ಖರೀದಿ ಮಾಡುತ್ತಿದೆ. 2020ರ ಎಲ್‌ಪಿಜಿ ನಿಯಂತ್ರಣ ಆದೇಶವು ದೇಶದಲ್ಲಿ ಉತ್ಪಾದನೆ ಆಗುವ ಎಲ್‌ಪಿಜಿಯನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಮಾತ್ರ ಪೂರೈಕೆ ಮಾಡಬೇಕು ಎಂದು ಹೇಳುತ್ತದೆ. ಖಾಸಗಿ ಕಂಪನಿಗಳು ತಮ್ಮ ಗ್ರಾಹಕರಿಗೆ ಎಲ್‌ಪಿಜಿ ಪೂರೈಸುವುದಿದ್ದರೆ ಅವು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕು.

ಬಿಪಿಸಿಎಲ್‌ ಖಾಸಗಿಯವರ ಕೈಗೆ ಹಸ್ತಾಂತರ ಆದ ನಂತರ ಈ ಆದೇಶವು ಆ ಕಂಪನಿಗೆ ಎಲ್‌ಪಿಜಿ ಪೂರೈಸುವುದನ್ನು ನಿರ್ಬಂಧಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಅಲ್ಲದೆ, ಖಾಸಗಿಯವರ ತೆಕ್ಕೆಗೆ ಸರಿದ ನಂತರ ಬಿಪಿಸಿಎಲ್‌ಗೆ ತನ್ನ ಗ್ರಾಹಕರಿಗೆ ಅಗತ್ಯ ಪ್ರಮಾಣದಲ್ಲಿ ಎಲ್‌ಪಿಜಿ ಪೂರೈಸಲು ಆಗುವುದಿಲ್ಲ.

2000ನೇ ಇಸವಿಯ ಆದೇಶಕ್ಕೆ ತಿದ್ದುಪಡಿ ತಂದು, ಖಾಸಗಿ ಕಂಪನಿಗಳು ಕೂಡ ದೇಶದಲ್ಲಿ ಉತ್ಪಾದನೆ ಆದ ಎಲ್‌ಪಿಜಿಯನ್ನು ಖರೀದಿಸಬಹುದು ಎಂಬ ನಿಯಮ ಜಾರಿಗೆ ತರುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು