ಮಂಗಳವಾರ, ಜನವರಿ 31, 2023
27 °C

ಬಂಡವಾಳ ಮಾರುಕಟ್ಟೆ: ಯಾವುದಕ್ಕೆ ಎಷ್ಟು ಸಾಲ ತಗೋಬೇಕು?

ಅವಿನಾಶ್ ಕೆ.ಟಿ. Updated:

ಅಕ್ಷರ ಗಾತ್ರ : | |

ಆದಾಯಕ್ಕೆ ತಕ್ಕಂತೆ ಎಷ್ಟು ಮೊತ್ತದ ಮನೆ ಖರೀದಿಸಬೇಕು, ಗಳಿಕೆಗೆ ಅನುಗುಣವಾಗಿ ಎಷ್ಟು ಮೌಲ್ಯದ ಕಾರು ಕೊಳ್ಳೋದು ಸೂಕ್ತ, ಹೀಗೆ ಅನೇಕ ಪ್ರಶ್ನೆಗಳು ನಿಮಗೂ ಇರಬಹುದು. ಜೊತೆಗೆ ಯಾವುದಕ್ಕೆ ಎಷ್ಟು ಸಾಲ ಮಾಡಬೇಕು ಎನ್ನುವ ಗೊಂದಲವೂ ಇರಬಹುದು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡೋಣ.

ಎಷ್ಟು ಮೊತ್ತದ ಮನೆ ಖರೀದಿಸಬೇಕು?: ನೀವು ಎಷ್ಟು ಮೊತ್ತದ ಮನೆ ಖರೀದಿ ಮಾಡಬೇಕು ಎನ್ನುವುದು ನಿಮ್ಮ ವಾರ್ಷಿಕ ಆದಾಯವನ್ನು ಅವಲಂಬಿಸಿದೆ. ವಾರ್ಷಿಕ ಸಂಪಾದನೆಯ 3 ರಿಂದ 4 ಪಟ್ಟು ಮೌಲ್ಯದ ಮನೆ ಖರೀದಿ ಮಾಡುವ ನಿರ್ಧಾರಕ್ಕೆ ಬರುವುದು ಉತ್ತಮ. ಬಹುತೇಕರು ತಾವು ಎಷ್ಟು ಮಾಸಿಕ ಕಂತು (ಇಎಂಐ) ಪಾವತಿಸಬಹುದು ಎನ್ನುವ ಲೆಕ್ಕಾಚಾರ ಆಧರಿಸಿ ಅಷ್ಟು ಮೊತ್ತದ ಮನೆ ಖರೀದಿಗೆ ಮುಂದಾಗುತ್ತಾರೆ. ಆದರೆ ಈ ರೀತಿಯ ನಿರ್ಧಾರ ಖಂಡಿತ ನಿಮ್ಮ ಆರ್ಥಿಕ ಸ್ಥಿತಿಗತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಉದಾಹರಣೆಗೆ ನಿಮ್ಮ ವಾರ್ಷಿಕ ಆದಾಯ ₹ 25 ಲಕ್ಷ ಎಂದಾದಲ್ಲಿ ₹ 75 ಲಕ್ಷದಿಂದ ₹ 1 ಕೋಟಿ ವರೆಗಿನ ಮೌಲ್ಯವಿರುವ ಮನೆ ಖರೀದಿಗೆ ಮುಂದಾಗಬಹುದು. ಇನ್ನು ನಿಮ್ಮ ಗೃಹ ಸಾಲದ ಮಾಸಿಕ ಕಂತು ತಿಂಗಳ ಆದಾಯದ ಶೇ 25 ರಿಂದ ಶೇ 35 ರ ವರಗೆ ಮಾತ್ರ ಇರಬೇಕು.

ಎಷ್ಟು ದುಬಾರಿ ಕಾರನ್ನು ನೀವು ಖರೀದಿಸಬಹುದು?: ಕಾರು ಅಪಮೌಲ್ಯಕ್ಕೆ ಒಳಗಾಗುತ್ತದೆ. ಷೋರೂಂನಿಂದ ಹೊರಬಂದರೆ ಆಯ್ತು, ಕಾರು ಮೌಲ್ಯ ಕಳೆದುಕೊಳ್ಳುವ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಉದಾಹರಣೆಗೆ ನೀವು ₹ 10 ಲಕ್ಷ ಕೊಟ್ಟು ಕಾರು ಖರೀದಿಸಿದ್ದೀರಿ ಎಂದಾದರೆ ನಾಲ್ಕೈದು ವರ್ಷಗಳ ಬಳಿಕ ಆ ಕಾರಿನ ಬೆಲೆ ಶೇ 50 ರಷ್ಟು ಕಡಿಮೆಯಾಗಿರುತ್ತೆ. ಕಾರನ್ನು ಚೆನ್ನಾಗಿಯೇ ಇಟ್ಟುಕೊಂಡಿದ್ದೀರಿ ಎಂದಾದರೂ ಅದಕ್ಕೆ ಹೆಚ್ಚಿನ ಬೆಲೆ ಕೊಡಲು ಖರೀದಿದಾರರು ಮುಂದೆ ಬರುವುದಿಲ್ಲ. ನಿಮ್ಮ ವಾರ್ಷಿಕ ಆದಾಯದ ಶೇ 40 ರಿಂದ ಶೇ 50 ರಷ್ಟು ಮೌಲ್ಯದ ಕಾರನ್ನು ನೀವು ಖರೀದಿಸಬಹುದು. ವಾರ್ಷಿಕವಾಗಿ ₹ 20 ಲಕ್ಷ ಆದಾಯ ಗಳಿಸುತ್ತೀರಿ ಎಂದಾದಲ್ಲಿ ನೀವು ಕೊಳ್ಳುವ ಕಾರಿನ ಬೆಲೆ ₹ 10 ಲಕ್ಷ ಮೀರಬಾರದು. ಇಷ್ಟೇ ಅಲ್ಲ, ಕಾರು ಖರೀದಿ ಮಾಡುವಾಗ ಶೇ 20 ರಿಂದ ಶೇ 25 ರಷ್ಟು ಹಣವನ್ನು ಡೌನ್ ಪೇಮೆಂಟ್ ಮಾಡುವುದು ಒಳಿತು. ಇನ್ನು ಕಾರು ಕೊಳ್ಳಲು ಸಾಲ ಪಡೆದಲ್ಲಿ ನಿಮ್ಮ ಮಾಸಿಕ ಆದಾಯದ ಶೇ 10 ರಿಂದ ಶೇ 15 ರಷ್ಟು ಮಾತ್ರ ಕಾರು ಸಾಲದ ಕಂತಿನ (ಇಎಂಐ) ಮೊತ್ತವಾಗಿರಬೇಕು.

ಆದಾಯಕ್ಕೆ ತಕ್ಕಂತೆ ಎಷ್ಟು ಸಾಲ ಮಾಡಬೇಕು?: ಎಷ್ಟು ಸಾಲ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳೋದು ಬಹಳ ಮುಖ್ಯ. ಇಲ್ಲದಿದ್ದರೆ ಸಾಲದ ಶೂಲಕ್ಕೆ ಸಿಲುಕಬೇಕಾಗುತ್ತದೆ. ಮಾಸಿಕ ಆದಾಯದ ಶೇ 30 ರಿಂದ ಶೇ 35 ರಷ್ಟು ಹಣವನ್ನು ಮಾತ್ರ ನೀವು ಸಾಲದ ಕಂತಿಗೆ ಮೀಸಲಿಡಬೇಕು. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಈ ಎಲ್ಲಾ ಸಾಲಗಳನ್ನು ಒಳಗೊಂಡಾಗಲೂ ಒಟ್ಟು ಸಾಲದ ಮಾಸಿಕ ಕಂತು ನಿಮ್ಮ ಮಾಸಿಕ ಆದಾಯದ ಶೇ 35ಕ್ಕಿಂತ ಹೆಚ್ಚಿಗೆ ಇರಬಾರದು. ಒಂದೊಮ್ಮೆ ಇದಕ್ಕಿಂತ ಹೆಚ್ಚಿಗೆ ಸಾಲ ಮಾಡಿಕೊಂಡರೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಇನ್ನೊಂದು ಪ್ರಮುಖ ವಿಷಯ ಏನೆಂದರೆ ನಿವೃತ್ತಿ ಹೊಂದಲು ಇನ್ನು 5 ವರ್ಷ ಬಾಕಿ ಇರುವಂತೆಯೇ ಎಲ್ಲಾ ಸಾಲಗಳಿಂದ ಮುಕ್ತವಾಗಬೇಕು. ಏಕೆಂದರೆ ನಿವೃತ್ತಿಯ ನಂತರ ಆದಾಯ ಕಡಿತಗೊಳ್ಳುವುದರಿಂದ ಸಾಲಗಳನ್ನು ತೀರಿಸಲು ಕಷ್ಟವಾಗುತ್ತದೆ.

ಸಾರ್ವಕಾಲಿಕ ದಾಖಲೆ ಬರೆದ ಸೂಚ್ಯಂಕಗಳು

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರ ಗಳಿಕೆ ದಾಖಲಿಸಿವೆ. ಡಿಸೆಂಬರ್ 2 ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಉತ್ತಮ ಗಳಿಕೆ ಕಂಡಿವೆ. 62,868 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.92 ರಷ್ಟು ಹೆಚ್ಚಳ ಕಂಡಿದೆ. 18,887 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ, ಶೇ 0.99 ರಷ್ಟು ಜಿಗಿದಿದೆ. ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಇಳಿಕೆ, ಡಾಲರ್ ಬೆಲೆ ಇಳಿಕೆ, ತೈಲ ಬೆಲೆ ಇಳಿಕೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಖರೀದಿ ಉತ್ಸಾಹ ಸೇರಿ ಹಲವು ಅಂಶಗಳು ಮಾರುಕಟ್ಟೆ ಸೂಚ್ಯಂಕಗಳ ಹೆಚ್ಚಳಕ್ಕೆ ಕಾರಣವಾಗಿವೆ. ಮತ್ತೊಂದೆಡೆ ಡಿಸೆಂಬರ್ 1 ರಂದು ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕ್ರಮವಾಗಿ 63,583 ಮತ್ತು 18,887 ಅಂಶಗಳನ್ನು ತಲುಪಿ ಸಾರ್ವಕಾಲಿಕ ಗರಿಷ್ಠಮಟ್ಟ ತಲುಪಿ ದಾಖಲೆ ಬರೆದಿವೆ.

ವಲಯವಾರು, ಎಲ್ಲಾ ವಲಯಗಳು ಸಕಾರಾತ್ಮಕ ಗಳಿಕೆ ಕಂಡಿವೆ. ನಿಫ್ಟಿ ಮಾಧ್ಯಮ ಸೂಚ್ಯಂಕ ಶೇ 4, ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 4, ಲೋಹ ಸೂಚ್ಯಂಕ ಶೇ 3.7 ಮತ್ತು ನಿಫ್ಟಿ ಎಫ್ ಎಂಸಿಜಿ ಸೂಚ್ಯಂಕ ಶೇ 2.4 ರಷ್ಟು ಗಳಿಕೆ ದಾಖಲಿಸಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 15,067.55 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 1,335.57 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಬಿಎಸ್‌ಇ ಲಾರ್ಜ್ ಕ್ಯಾಪ್‌ನಲ್ಲಿ ಪೇಟಿಎಂ, ಬಂಧನ್ ಬ್ಯಾಂಕ್, ಜೊಮಾಟೊ, ಐಸಿಐಸಿಐ ಲೋಬಾರ್ಡ್‌ ಗಳಿಕೆ ದಾಖಲಿಸಿವೆ. ಮಿಡ್ ಕ್ಯಾಪ್‌ನಲ್ಲಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ, ಟ್ಯೂಬ್ ಇನ್ವೆಸ್ಟ್ ಮೆಂಟ್ಸ್ ಆಫ್ ಇಂಡಿಯಾ, ಆದಿತ್ಯ ಬಿರ್ಲಾ ಕ್ಯಾಪಿಟಲ್, ದಾಲ್ಮಿಯಾ ಭಾರತ್, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಮತ್ತು ಎಲ್‌ ಅಂಡ್ ಟಿ ಟೆಕ್ನಾಲಜಿ ಸರ್ವೀಸಸ್ ಉತ್ತಮ ಗಳಿಕೆ ಕಂಡಿವೆ. ಬಿಎಸ್‌ಇ ಸ್ಮಾಲ್ ಕ್ಯಾಪ್‌ನಲ್ಲಿ ಎಚ್‌ಎಲ್‌ವಿ, ಸದ್ಭಾವ್ ಎಂಜಿನಿಯರಿಂಗ್, ಲಿಖಿತಾ ಇನ್ಫ್ರಾಸ್ಟ್ರಕ್ಚರ್, ರಿಕೋ ಆಟೋ, ಕೆಬಿಸಿ ಗ್ಲೋಬಲ್, ಜಯಪ್ರಕಾಶ್ ಅಸೋಸಿಯೇಟ್ಸ್, ರೇಮೆಂಡ್, ಕಾಸ್ಮೊ ಫಸ್ಟ್ ಮತ್ತು ಬಜಾಜ್ ಹಿಂದುಸ್ತಾನ್‌ ಶುಗರ್ ಶೇ 20 ರಿಂದ ಶೇ 31 ರಷ್ಟು ಗಳಿಸಿಕೊಂಡಿವೆ.

ಮುನ್ನೋಟ: ಡಿಸೆಂಬರ್ 7 ರಂದು ಆರ್‌ಬಿಐನ ಹಣಕಾಸು ಸಮಿತಿ ಸಭೆಯ ನಿರ್ಧಾರ ಹೊರಬೀಳಲಿದೆ. ಸಭೆಯಲ್ಲಿ ರೆಪೊ ಬಡ್ಡಿ ದರವನ್ನು ಮತ್ತಷ್ಟು ಹೆಚ್ಚಳ ಮಾಡುವ ತೀರ್ಮಾನವನ್ನು ಆರ್‌ಬಿಐ ಕೈಗೊಳ್ಳುವುದೇ ಎನ್ನುವ ಕುತೂಹಲವಿದೆ. ಒಂದೊಮ್ಮೆ ರೆಪೊ ದರ ಹೆಚ್ಚಳವಾದರೆ ಅದರ ನೇರ ಹೊರೆ ಸಾಲ ಪಡೆದವರ ಮೇಲೆ ಬೀಳಲಿದೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಮತ್ತು ದೇಶಿಯ ಬೆಳವಣಿಗೆಗಳು ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿವೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹ ವಿಭಾಗದ ಮುಖ್ಯಸ್ಥ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು