ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ತನಿಖೆ: ಹೊಸ ಮಾರ್ಗಸೂಚಿ ಪ್ರಕಟಿಸಿದ ಸಿಬಿಐಸಿ

Published 31 ಮಾರ್ಚ್ 2024, 14:23 IST
Last Updated 31 ಮಾರ್ಚ್ 2024, 14:23 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ ವ್ಯತ್ಯಾಸ ಕುರಿತ ತನಿಖೆಗೆ ಸಂಬಂಧಿಸಿದಂತೆ ನೇರ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಸರಕು ಮತ್ತು ಸೇವೆಗೆ ವಿಧಿಸುವ ಸುಂಕದ ವ್ಯತ್ಯಾಸಕ್ಕೆ ಸಂಬಂಧಿಸಿ ಬೃಹತ್‌ ಕೈಗಾರಿಕೆಗಳು ಅಥವಾ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ತನಿಖೆ ಕೈಗೊಳ್ಳುವುದಕ್ಕೂ ಮೊದಲು ಜಿಎಸ್‌ಟಿ ಕ್ಷೇತ್ರ ಅಧಿಕಾರಿಗಳು, ವಲಯ ಮಟ್ಟದ ಪ್ರಧಾನ ಮುಖ್ಯ ಆಯುಕ್ತರಿಂದ ಒಪ್ಪಿಗೆ ಪಡೆಯಬೇಕಿದೆ. ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ಈ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ಮಂಡಳಿಯು ಸೂಚಿಸಿದೆ.

ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಜಿಎಸ್‌ಟಿ ಘಟಕ ಹಾಗೂ ಜಿಎಸ್‌ಟಿ ಗುಪ್ತಚರ ಮಹಾ ನಿರ್ದೇಶನಾಲಯದಿಂದ (ಡಿಜಿಜಿಐ) ತೆರಿಗೆದಾರನನ್ನು ಏಕಕಾಲಕ್ಕೆ ತನಿಖೆಗೆ ಒಳಪಡಿಸುವ ವೇಳೆ ಒಂದು ತನಿಖಾ ಘಟಕಕ್ಕೆ ಎಲ್ಲಾ ಪ್ರಕರಣಗಳನ್ನು ಒಪ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನ ಆಯುಕ್ತರು ಕ್ರಮಕೈಗೊಳ್ಳಬೇಕಿದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. 

ತನಿಖೆ ಆರಂಭಿಸಿದ ಒಂದು ವರ್ಷದೊಳಗೆ ಮುಕ್ತಾಯಗೊಳಿಸಿ ವರದಿ ಸಲ್ಲಿಸಲು ಗಡುವು ನಿಗದಿಪಡಿಸಲಾಗಿದೆ.

ತನಿಖೆ ನಡೆಸುವುದಕ್ಕೂ ಮೊದಲು ಸಂಬಂಧಪಟ್ಟ ಕಂಪನಿಯ ಮುಖ್ಯ ಅಧಿಕಾರಿಗೆ ಸಮನ್ಸ್‌ ಜಾರಿಗೆ ಬದಲಾಗಿ ಅಧಿಕೃತ ನೋಟಿಸ್‌ ನೀಡಬೇಕು. ಯಾವ ಕಾರಣಕ್ಕೆ ತನಿಖೆ ನಡೆಸಲಾಗುತ್ತಿದೆ ಎಂಬ ಬಗ್ಗೆ ಅದರಲ್ಲಿ ಸ್ಪಷ್ಟವಾಗಿ ವಿವರಿಸಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಲು ಸೂಕ್ತ ಕಾಲಾವಕಾಶ ನೀಡಬೇಕಿದೆ ಎಂದು ಮಂಡಳಿಯು ಹೇಳಿದೆ.

ಒಂದು ವೇಳೆ ಜಿಎಸ್‌ಟಿ ಪೋರ್ಟಲ್‌ನಲ್ಲಿ ತೆರಿಗೆದಾರ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಅಪ್‌ಲೋಡ್‌ ಮಾಡಿದ್ದರೆ ಮತ್ತೆ ಆತನಿಂದ ಮಾಹಿತಿ ಕೇಳುವ ಅಗತ್ಯವಿಲ್ಲ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT