ಶನಿವಾರ, ಮೇ 21, 2022
28 °C

ರಾಜ್ಯಗಳಿಗೆ ತೆರಿಗೆ ಮೊತ್ತ ಹಂಚಿಕೆ: ₹95,082 ಕೋಟಿ ಬಿಡುಗಡೆಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸುಧಾರಣಾ ಕಾರ್ಯಕ್ರಮಗಳು ಮತ್ತು ಬಂಡವಾಳ ವೆಚ್ಚವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಇದೇ ತಿಂಗಳಲ್ಲಿ ರಾಜ್ಯಗಳಿಗೆ ₹95 ಸಾವಿರ ಕೋಟಿಗೂ ಅಧಿಕ ತೆರಿಗೆಯ ಮೊತ್ತವನ್ನು ವರ್ಗಾಯಿಸಲು ಕೇಂದ್ರ ಸರ್ಕಾರ ತಿರ್ಮಾನಿಸಿದೆ.

ಇದು, ರಾಜ್ಯಗಳಿಗೆ ವರ್ಗಾವಣೆ ಮಾಡುತ್ತಿದ್ದ ಮೊತ್ತದ ದುಪ್ಪಟ್ಟಾಗಿದೆ. ಬಂಡವಾಳ ವೆಚ್ಚವನ್ನು ಚುರುಕುಗೊಳಿಸಲು ತನ್ನ ಪಾಲಿನ ತೆರಿಗೆ ಮೊತ್ತವನ್ನು ಅವಧಿಗೆ ಮೊದಲೇ ಬಿಡುಗಡೆ ಮಾಡಬೇಕು ಎಂಬ ಕೆಲ ರಾಜ್ಯಗಳ ಮನವಿ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

‘ಈಗ ಹಂಚಿಕೆ ಮಾಡುತ್ತಿದ್ದ ₹ 47,541 ಕೋಟಿಗೆ ಬದಲಾಗಿ, ಒಟ್ಟು ₹ 95,082 ಕೋಟಿ ಅನ್ನು ನ. 22ರಂದು ರಾಜ್ಯಗಳಿಗೆ ಬಿಡುಗಡೆ ಮಾಡಲು ಹಣಕಾಸು ಕಾರ್ಯದರ್ಶಿಗೆ ಸಲಹೆ ಮಾಡಿದ್ದೇನೆ’ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಿಳಿಸಿದರು.

ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರ ಸಭೆಯ ನಂತರ ಮಾತನಾಡಿದ ಅವರು, ‘ಮೂಲಸೌಕರ್ಯ ಕಾಮಗಾರಿಗಳಿಗೆ ಹಣ ವ್ಯಯಿಸಲು ರಾಜ್ಯಗಳ ಬಳಿ ಹಣ ಇರಬೇಕು ಎಂಬ ಕೆಲ ರಾಜ್ಯಗಳ ಮನವಿ ಆಧರಿಸಿ ಈ ಕ್ರಮವಹಿಸಲಾಗಿದೆ’ ಎಂದರು.

ತೆರಿಗೆಯ ಮೊತ್ತವನ್ನು ರಾಜ್ಯಗಳಿಗೆ ಕೇಂದ್ರ ಸರ್ಕಾರ ವಾರ್ಷಿಕ 14 ಕಂತುಗಳಲ್ಲಿ ಬಿಡುಗಡೆ ಮಾಡಲಿದೆ. ಸುಮಾರು 20 ರಾಜ್ಯಗಳು ವಾರ್ಷಿಕ ಬಂಡವಾಳ ವೆಚ್ಚ ಗುರಿಯಲ್ಲಿ ಈಗಾಗಲೇ ಶೇ 80ಕ್ಕೂ ಹೆಚ್ಚು ವ್ಯಯಮಾಡಿವೆ.

‘ಅಭಿವೃದ್ಧಿ ಚಟುವಟಿಕೆಗಳಿಗೆ ನೆರವಾಗಲು ಈ ವರ್ಷದಲ್ಲಿ ನೀಡಲು ಸಮ್ಮತಿಸಿದ್ದ ಜಿಎಸ್‌ಟಿ ಪರಿಹಾರದ ಮೊತ್ತವನ್ನು ನವೆಂಬರ್‌ ತಿಂಗಳ ಆರಂಭದಲ್ಲಿಯೇ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ’ ಎಂದು ಅವರು ತಿಳಿಸಿದರು.

ರಾಜ್ಯಗಳಿಗೆ ಬಹುತೇಕ ಅನುದಾನದ ಸ್ವರೂಪದಲ್ಲಿ 50 ವರ್ಷದ ಅವಧಿಗೆ ಬಡ್ಡಿರಹಿತವಾಗಿ ನೀಡಲಿರುವ ಬಂಡವಾಳವೆಚ್ಚದ ಮೊತ್ತಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹಲವು ರಾಜ್ಯಗಳು ಯೋಜನೆಯನ್ನು ಮುಂದುವರಿಸುವಂತೆ ಕೋರಿವೆ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು