ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತಿಕೂಲ ಹವಾಮಾನದಿಂದ ಉತ್ಪಾದನೆ ಕುಸಿತ: ದುಬಾರಿ ಆಗಲಿದೆಯೇ ಚಹಾ?

ಕೀಟಬಾಧೆಗೆ ನಲುಗಿದ ಉದ್ಯಮ
Published : 22 ಸೆಪ್ಟೆಂಬರ್ 2024, 14:52 IST
Last Updated : 22 ಸೆಪ್ಟೆಂಬರ್ 2024, 14:52 IST
ಫಾಲೋ ಮಾಡಿ
Comments

ಕೋಲ್ಕತ್ತ: ಕಳೆದ ವರ್ಷದಂತೆ ಈ ವರ್ಷವೂ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಚಹಾ ಉತ್ಪಾದನೆ ಕುಸಿತವಾಗಿದೆ. ಜುಲೈ ಅಂತ್ಯದವರೆಗೆ ಈ ಎರಡು ರಾಜ್ಯಗಳಲ್ಲಿ ಕ್ರಮವಾಗಿ ಶೇ 11ರಷ್ಟು ಹಾಗೂ ಶೇ 21ರಷ್ಟು ಉತ್ಪಾದನೆ ಇಳಿಕೆಯಾಗಿದೆ ಎಂದು ಭಾರತೀಯ ಚಹಾ ಮಂಡಳಿ (ಟಿಎಐ) ತಿಳಿಸಿದೆ.

ಮಂಡಳಿ ನೀಡಿರುವ ಮಾಹಿತಿ ಪ್ರಕಾರ, ಇಲ್ಲಿಯವರೆಗೆ 80 ದಶಲಕ್ಷ ಕೆ.ಜಿಯಷ್ಟು ಚಹ ಉತ್ಪಾದನೆ ಕಡಿಮೆಯಾಗಿದೆ. ರಫ್ತು ದರದಲ್ಲಿ ಶೇ 4ರಷ್ಟು ಇಳಿಕೆಯಾಗಿದೆ. ಹಾಗಾಗಿ, ದೇಶೀಯ ಮಾರುಕಟ್ಟೆಯಲ್ಲಿ ಚಹಾ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಪ್ರತಿಕೂಲ ಹವಾಮಾನ ಹಾಗೂ ಕೀಟಬಾಧೆಯೇ ಉತ್ಪಾದನೆ ಕುಸಿತಕ್ಕೆ ಮೂಲ ಕಾರಣ. 2023ರಲ್ಲಿ 1,394 ದಶಲಕ್ಷ ಕೆ.ಜಿ ಉತ್ಪಾದನೆ ಕೊರತೆಯಾಗಿತ್ತು. ಪ್ರಸಕ್ತ ವರ್ಷದಲ್ಲಿ 160ರಿಂದ 170 ದಶಲಕ್ಷ ಕೆ.ಜಿ ಉತ್ಪಾದನೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಿದೆ.

ಇಡೀ ದೇಶದಲ್ಲಿಯೇ ಈ ಎರಡು ರಾಜ್ಯಗಳಲ್ಲಿ ಅತಿಹೆಚ್ಚು ಚಹಾ ಉತ್ಪಾದಿಸಲಾಗುತ್ತದೆ. ರಫ್ತು ದರ ಇಳಿಕೆಯಾಗಿರುವುದರಿಂದ ಚಹಾ ಕೈಗಾರಿಕೆಯು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಸ್ಟೇಟ್‌ ಮಾಲೀಕರು ಮತ್ತು ವರ್ತಕರು ಹೇಳುತ್ತಾರೆ.

ಪ್ರತಿಕೂಲ ಹವಾಮಾನದಿಂದ ಚಹಾ ಗಿಡಗಳ ಬೆಳವಣಿಗೆ ಕುಂಠಿತವಾಗಿದೆ. ಕೀಟಬಾಧೆ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದ ಮುಂಬರುವ ತಿಂಗಳುಗಳಲ್ಲಿ ಮತ್ತಷ್ಟು ಉತ್ಪಾದನೆ ಕುಸಿತವಾಗುವ ಆತಂಕ ಎದುರಾಗಿದೆ ಎಂದು ವಿವರಿಸುತ್ತಾರೆ.

ಮಾರ್ಚ್‌ ಮತ್ತು ಮೇ ತಿಂಗಳಿನಲ್ಲಿ ಅತಿಹೆಚ್ಚು ಚಹಾ ಬೆಳೆಯುವ ಪಶ್ಚಿಮ ಬಂಗಾಳದ ಜಿಲ್ಲೆಗಳಲ್ಲಿ ಶೇ 50ರಿಂದ 80ರಷ್ಟು ಮಳೆ ಕೊರತೆಯಾಗಿದೆ. ಅಸ್ಸಾಂನಲ್ಲಿ ಶೇ 10ರಿಂದ 30ರಷ್ಟು ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹೊಸ ತಳಿ ಬಿಡುಗಡೆ

ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಚಹಾ ಸಂಶೋಧನಾ ಸಂಘವು (ಟಿಆರ್‌ಎ) ಹವಾಮಾನ ಸಹಿಷ್ಣು ತಳಿಯಾದ ‘ಟಿಎಸ್‌ಎಸ್‌ 2’ ಅನ್ನು ಬಿಡುಗಡೆ ಮಾಡಿದೆ. ಈ ತಳಿಯು ಅತಿಹೆಚ್ಚು ಉಷ್ಣಾಂಶಕ್ಕೆ ಹೊಂದಿಕೊಳ್ಳುವ ಗುಣ ಹೊಂದಿದ್ದು ಉತ್ತಮ ಇಳುವರಿ ಕೊಡಲಿದೆ ಎಂದು ಹೇಳಿದೆ. ಕೇಂದ್ರ ವಾಣಿಜ್ಯ ಸಚಿವಾಲಯ ಮತ್ತು ಚಹಾ ಕೈಗಾರಿಕಾ ವಲಯವು ಈ ತಳಿಯ ಅಭಿವೃದ್ಧಿಗೆ ಹಣಕಾಸಿನ ನೆರವು ನೀಡಿವೆ. ‘ಚಹಾ ಗಿಡಗಳಿಗೆ ಉಷ್ಣತೆ ಮತ್ತು ತೇವಾಂಶ ಸಮತೋಲಿತವಾಗಿರಬೇಕು. ಆದರೆ ಉಷ್ಣಾಂಶ ಏರಿಕೆಯಾದರೆ ಮಣ್ಣು ಶುಷ್ಕಗೊಳ್ಳಲಿದೆ. ಇದು ಗಿಡಗಳ ಬೆಳವಣಿಗೆ ಮೇಲೆ ಒತ್ತಡ ಹೇರಲಿದೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಉಷ್ಣಾಂಶವು 35 ಡಿಗ್ರಿ ಸೆಲ್ಸಿಯಸ್‌ ದಾಟಿತ್ತು. ಇದರಿಂದ ಗಿಡಗಳಲ್ಲಿ ಹೊಸ ಎಲೆಗಳ ಉತ್ಪತ್ತಿ ಮೇಲೆ ಪರಿಣಾಮ ಬೀರಿದೆ’ ಎಂದು ಟಿಆರ್‌ಎ ಕಾರ್ಯದರ್ಶಿ ಜಾಯ್‌ದೀಪ್‌ ಫುಕನ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT