ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧಕ್ಕೆ ಕುಸಿದ ತೆಂಗು ಧಾರಣೆ: ಮದುವೆ ಸೀಜನ್‌ನಲ್ಲೂ ರೈತರಿಗಿಲ್ಲ ಲಾಭ

ಪ್ರತಿ ಕೆ.ಜಿ.ಗೆ ₹24 ಬೆಲೆ ನಿಗದಿ
Last Updated 30 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ರಾಮನಗರ: ತೆಂಗಿನಕಾಯಿ ಧಾರಣೆಯು ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು, ರೈತರು ನಷ್ಟ ಅನುಭವಿಸುವಂತಹ ಪರಿಸ್ಥಿತಿ ಎದುರಾಗಿದೆ.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸದ್ಯ ತಕ್ಕ ಮಟ್ಟಿಗೆ ತೆಂಗು ಆವಕವಾಗುತ್ತಿದೆ. ಆದರೆ, ನಾಲ್ಕೈದು ತಿಂಗಳಲ್ಲಿ ಬೆಲೆಯು ಅರ್ಧದಷ್ಟು ಕಡಿಮೆ ಆಗಿದೆ. ಸದ್ಯಕ್ಕೆ ಸಣ್ಣ ಗಾತ್ರದ ಕಾಯಿ ₹ 8–9, ಮಧ್ಯಮ ಗಾತ್ರದ್ದು ₹12–13 ಹಾಗೂ ದಪ್ಪ ಗಾತ್ರದ್ದು ₹15–16ರ ಆಸುಪಾಸಿನಲ್ಲಿ ಸಗಟು ದರದಲ್ಲಿ ಖರೀದಿ ನಡೆದಿದೆ.

2017ರ ಜೂನ್‌ನಿಂದ ತೆಂಗು ಧಾರಣೆಯು ನಿರಂತರವಾಗಿ ಏರುಮುಖವಾಗಿತ್ತು. ಅದೇ ವರ್ಷ ಡಿಸೆಂಬರ್‌ನಲ್ಲಿ ಪ್ರತಿ ಕೆ.ಜಿ. ತೆಂಗಿನ ಬೆಲೆ ₹40 ಇದ್ದು, ಮಧ್ಯಮ ಗಾತ್ರದ ಒಂದು ತೆಂಗಿನ ಕಾಯಿ ಸರಾಸರಿ ₹20ಕ್ಕೆ ಮಾರಾಟ ಕಂಡಿತ್ತು. ಮೂರು ತಿಂಗಳ ಹಿಂದೆಯಷ್ಟೇ ಕೆ.ಜಿ.ಗೆ ₹40–45 ಇತ್ತು. ಆದರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹24 ದರ ನಿಗದಿಯಾಗಿದ್ದು, ಅರ್ಧದಷ್ಟು ಧಾರಣೆ ಕಡಿಮೆ ಆಗಿರುವುದು ಕಂಡು ಬಂದಿತು.

ಚನ್ನಪಟ್ಟಣದ ಅಂಚಿಪುರ ಗ್ರಾಮದ ತೆಂಗು ಬೆಳೆಗಾರ ಯಲ್ಲೇಗೌಡ ಸೋಮವಾರ ಎಪಿಎಂಸಿಗೆ 5,500 ಕಾಯಿ ತಂದಿದ್ದರು. ಈ ಪೈಕಿ ಸಾವಿರದಷ್ಟು ಸಣ್ಣ ಕಾಯಿಯನ್ನು₹ 8ರ ದರದಲ್ಲಿ ಮದುವೆಗಾಗಿ ವ್ಯಕ್ತಿಯೊಬ್ಬರು ಖರೀದಿಸಿದರು. ಉಳಿದವು ₹14ರ ದರದಲ್ಲಿ ಮಾರಾಟ ಕಂಡವು. ಚನ್ನಪಟ್ಟಣ ಭಾಗದಿಂದ ಹೆಚ್ಚು ಕಾಯಿ ಮಾರುಕಟ್ಟೆಗೆ ಬಂದಿದ್ದು, 100ಕ್ಕೆ ₹1,300–1,400ರ ಆಸುಪಾಸಿನಲ್ಲಿ ಹರಾಜು ನಡೆಯಿತು.

‘ಮಧ್ಯಮ ಗಾತ್ರದ ತೆಂಗಿನ ಕಾಯಿ ₹20–22ಕ್ಕೆ ಮಾರಾಟ ಕಾಣುತ್ತಿದ್ದುದು ಈಗ ಅರ್ಧ ಬೆಲೆಗೆ ಹರಾಜಾಗುತ್ತಿದೆ. ಕೆಲವೇ ತಿಂಗಳ ಅಂತರದಲ್ಲಿ ಬೆಲೆ ತೀರ ಕಡಿಮೆಯಾಗಿದೆ. ಮದುವೆ ಸೀಜನ್‌ ಇರುವುದರಿಂದ ಹೆಚ್ಚಿನ ಬೆಲೆ ಬರಬಹುದೆಂಬ ನಿರೀಕ್ಷೆ ಇತ್ತು. ಆದರೆ ಬೇಡಿಕೆ ಇದ್ದರೂ ಬೆಲೆ ಮಾತ್ರ ಕುಸಿಯುತ್ತಲೇ ಇದೆ’ ಎಂದು ಮಾರುಕಟ್ಟೆಗೆ ಬಂದಿದ್ದ ರೈತರು ಬೇಸರ ವ್ಯಕ್ತಪಡಿಸಿದರು.

ತಮಿಳುನಾಡು ಕಾಯಿ ಕಾರಣ: ‘ತಮಿಳುನಾಡು ಭಾಗದ ತೆಂಗಿನ
ಕಾಯಿಯು ರಾಜ್ಯದ ಮಾರುಕಟ್ಟೆಗೆ ಕಾಲಿಟ್ಟಿರುವುದೇ ಬೆಲೆ ಕುಸಿಯಲು ಕಾರಣ’ ಎಂದು ಮಂಡಿ ವರ್ತಕ ಪರಮೇಶ್‌ ಹೇಳಿದರು.

‘ಹೊರ ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನಕಾಯಿ ರಾಜ್ಯದ ಮಾರುಕಟ್ಟೆ ಪ್ರವೇಶಿಸಿದೆ. ಬೆಂಗಳೂರಿನಲ್ಲಿ ಲೋಡ್‌ಗಟ್ಟಲೆ ಕಾಯಿ ದಾಸ್ತಾನು ಆಗಿದೆ. ಅಲ್ಲಿ ಮಧ್ಯಮ ಗಾತ್ರದ ಕಾಯಿ ಒಂದಕ್ಕೆ ₹ 10ಕ್ಕೆ ಸಿಗುತ್ತಿದೆ. ಇಲ್ಲಿ ಅದೇ ಕಾಯಿಗೆ ₹ 13 ಬೆಲೆ ಇದೆ. ಜೊತೆಗೆ ಕಮಿಷನ್‌ ದರ, ಕೂಲಿ, ಸಾಗಣೆ ವೆಚ್ಚ ಎಲ್ಲವೂ ಸೇರಿದರೆ ಇನ್ನೂ ಜಾಸ್ತಿಯಾಗುತ್ತದೆ. ಈ ಕಾರಣಕ್ಕೆ ವರ್ತಕರು ಇಲ್ಲಿನ ಕಾಯಿ ಕೊಳ್ಳಲು ಮುಂದೆ ಬರುತ್ತಿಲ್ಲ. ಹೀಗಾಗಿ ಬೆಲೆ ಕುಸಿಯುತ್ತಿದೆ’ ಎಂದು ಅವರು ಹೇಳಿದರು.

ಎಳನೀರಿನತ್ತ ಚಿತ್ತ: ತೆಂಗಿನಕಾಯಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ರೈತರು ಮತ್ತೆ ಎಳನೀರು ಕೊಯ್ಲಿನತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ‘ಬೇಸಿಗೆಯಾದ್ದರಿಂದ ಎಳನೀರಿಗೆ ಬೇಡಿಕೆ ಇದ್ದು, ಒಂದಕ್ಕೆ₹ 25ಕ್ಕೆ ಮಾರಾಟ ಆಗುತ್ತಿದೆ. ವರ್ತಕರು, ದಲ್ಲಾಳಿಗಳು ತೋಟಕ್ಕೇ ಬಂದು ₹10–12ಕ್ಕೆ ಎಳನೀರು ಕೊಯ್ದು ಒಯ್ಯುತ್ತಾರೆ’ ಎಂದು ರೈತ ಶಂಕರ್ ಹೇಳಿದರು.

ಬೆಂಬಲ ಬೆಲೆಗೆ ಆಗ್ರಹ

‘2016ರ ಅಂತ್ಯಕ್ಕೆ ತೆಂಗಿನ ಬೆಲೆ ತೀವ್ರ ಕುಸಿದಿತ್ತು. ಆಗ ರೈತರ ನೆರವಿಗೆ ಧಾವಿಸಿದ್ದ ಸರ್ಕಾರವು ಹಾಪ್‌ಕಾಮ್ಸ್‌ ಮೂಲಕ ಬೆಂಬಲ ಬೆಲೆಯಲ್ಲಿ ತೆಂಗು ಖರೀದಿ ಮಾಡಿತ್ತು. ಈಗ ಪರಿಸ್ಥಿತಿ ಇನ್ನಷ್ಟು ವಿಷಮಿಸಿದರೆ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಖರೀದಿ ಮಾಡಬೇಕು. ಪ್ರತಿ ಕೆ.ಜಿ.ಗೆ ಕನಿಷ್ಠ ₹40ರಂತೆ ಖರೀದಿ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT