ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಂಎಸ್‌ಎಂಇ ಉತ್ತೇಜನಕ್ಕೆ ಆದ್ಯತೆ: ವೇಣು

Published 4 ಜುಲೈ 2024, 16:21 IST
Last Updated 4 ಜುಲೈ 2024, 16:21 IST
ಅಕ್ಷರ ಗಾತ್ರ

ಬೆಂಗಳೂರು: ಶುದ್ಧ ಇಂಧನ ಮತ್ತು ಪರ್ಯಾಯ ಇಂಧನ ಬಳಕೆಗೆ ಉತ್ತೇಜಿಸುವುದು, ಎಂಎಸ್‌ಎಂಇಗಳ ಸ್ಪರ್ಧಾತ್ಮಕತೆಯನ್ನು ಬಲಪಡಿಸುವುದು, ಸದೃಢವಾದ ಉದ್ಯಮ ನಿರ್ಮಾಣ ಹಾಗೂ ಬೆಂಗಳೂರಿನ ಹೊರಭಾಗದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ಹೆಚ್ಚಿಸಲು ಶ್ರಮಿಸಲಾಗುವುದು ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ ಕರ್ನಾಟಕದ ಅಧ್ಯಕ್ಷ ಮತ್ತು ಹಿಟಾಚಿ ಎನರ್ಜಿಯ ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎನ್. ವೇಣು ಹೇಳಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದರು.

ದೇಶದ ಜಿಡಿಪಿ ಬೆಳವಣಿಗೆ ಕರ್ನಾಟಕದ ಪಾಲು ಮಹತ್ವದ್ದಾಗಿದೆ. ಇರದಲ್ಲಿ ಹೆಚ್ಚಿನ ಪಾಲು ಬೆಂಗಳೂರಿನಿಂದಲೇ ಬರುತ್ತದೆ. ‘ಬಿಯಾಂಡ್‌ ಬೆಂಗಳೂರು’ ಯೋಜನೆಯಡಿ ಎರಡು ಮತ್ತು ಮೂರನೇ ಹಂತದ ನಗರದಲ್ಲೂ ಉದ್ಯಮ ವಲಯದ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಸರ್ಕಾರದೊಂದಿಗೆ ಅಗತ್ಯ ಚರ್ಚೆಗಳನ್ನು ನಡೆಸಲಾಗುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇದೆ ಎಂದರು.

ವಿಮಾನ ನಿಲ್ದಾಣಗಳು ಯಾವುದೇ ದೇಶದ ಆರ್ಥಿಕ ಪ್ರಗತಿಗೆ ಬಹುಮುಖ್ಯ. ರಾಜ್ಯದಲ್ಲಿ ಹೆಚ್ಚು ವಿಮಾನ ನಿಲ್ದಾಣಗಳಿದ್ದರೆ, ಇತರೆ ರಾಜ್ಯ, ದೇಶದೊಂದಿಗೆ ವ್ಯಾಪಾರ–ವಹಿವಾಟು ಸುಗಮವಾಗುತ್ತದೆ. ಈಗಾಗಲೇ, ಮುಂದುವರಿದ ದೇಶದಲ್ಲಿ ಹೆಚ್ಚು ವಿಮಾನ ನಿಲ್ದಾಣಗಳಿವೆ. ರಾಜ್ಯಕ್ಕೂ ಹೆಚ್ಚು ವಿಮಾನ ನಿಲ್ದಾಣಗಳ ಅಗತ್ಯವಿದೆ ಎಂದು ಹೇಳಿದರು.

‘ಸಿಐಐ ಇಂಡಿಯನ್‌ ವುಮೆನ್‌ ನೆಟ್‌ವರ್ಕ್‌ ಮತ್ತು ಸಿಐಐ ಯಂಗ್‌ ಇಂಡಿಯನ್ಸ್‌ನಂತಹ ಯೋಜನೆಗಳ ಮೂಲಕ ಉದ್ಯಮಶೀಲತೆ ಮತ್ತು ನಾಯಕತ್ವದ ಬೆಳವಣಿಗೆಯನ್ನು ಬಲಪಡಿಸುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದೆ’ ಎಂದು ಸಿಐಐ ಕರ್ನಾಟಕದ ಉಪಾಧ್ಯಕ್ಷ ಮತ್ತು ಎಎಸ್‌ಎಂ ಟೆಕ್ನಾಲಜೀಸ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಶ್ರೀಕಂಠನ್ ಹೇಳಿದರು.

ಸಿಐಐನಡಿ ಕರ್ನಾಟಕದಲ್ಲಿ 700 ಸದಸ್ಯ ಕಂಪನಿಗಳಿವೆ. ಇದರಲ್ಲಿ 250 ಕಂಪನಿಗಳು ಬೆಳಗಾವಿ, ಮಂಗಳೂರು, ಮೈಸೂರು, ಹುಬ್ಬಳ್ಳಿ–ಧಾರವಾಡದಲ್ಲಿ ಇವೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಎಂಎಸ್‌ಎಂಇಗಳಿವೆ. ಕಲಬುರಗಿ, ಬಳ್ಳಾರಿ, ಹೊಸಪೇಟೆ ಪ್ರದೇಶದಲ್ಲಿರುವ ಕಂಪನಿಗಳ ಜೊತೆ ಕೆಲಸ ಮಾಡುತ್ತಿದ್ದೇವೆ ಎಂದರು.

ಮೈಸೂರಿನಲ್ಲಿ ಇಎಸ್‌ಡಿಎಂ ಆಗುತ್ತಿದ್ದು, ಸರ್ಕಾರದ ಜೊತೆ ಕೆಲಸ ಮಾಡುತ್ತಿದ್ದೇವೆ. ಬೆಂಗಳೂರಲ್ಲಿ ಮೊದಲಿನಿಂದಲೂ ಏರೋಸ್ಪೇಸ್‌, ಡಿಫೆನ್ಸ್‌ನಂತಹ ಕಂಪನಿಗಳಿವೆ. ರಾಜ್ಯಕ್ಕೆ ಸೆಮಿಕಂಡಕ್ಟರ್‌, ಸೋಲಾರ್‌, ಇಎಸ್‌ಡಿಎಂ, ಮೊಬೈಲ್‌ ಫೋನ್‌ ಕಂಪನಿಗಳು ಬರುತ್ತಿದ್ದು, ಒಕ್ಕೂಟದ ಸದಸ್ಯರಿಗೆ ಇದರ ಕುರಿತು ಮಾಹಿತಿ ನೀಡಿ ಅವರ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಿಐಐ ರಾಜ್ಯ ಮುಖ್ಯಸ್ಥೆ ರಾಧಿಕಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT