ನವದೆಹಲಿ: ಸಬ್ಸಿಡಿ ಇರುವ ಮತ್ತು ಸಬ್ಸಿಡಿ ಇಲ್ಲದ ಅಡುಗೆ ಅನಿಲ (ಎಲ್‌ಪಿಜಿ) ದರವನ್ನು 14.2 ಕೆ.ಜಿ.ಯ ಸಿಲಿಂಡರ್‌ಗೆ ₹ 25ರಂತೆ ಹೆಚ್ಚಿಸಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆ ಬುಧವಾರ ₹ 887ಕ್ಕೆ ತಲುಪಿದೆ.
ಬುಧವಾರದ ದರ ಏರಿಕೆಯನ್ನೂ ಒಳಗೊಂಡರೆ ಎರಡು ತಿಂಗಳಲ್ಲಿ ಒಟ್ಟಾರೆ ಮೂರು ಬಾರಿ ಎಲ್‌ಪಿಜಿ ಬೆಲೆ ಹೆಚ್ಚಳ ಮಾಡಿದಂತಾಗಿದೆ. ಈ ಹಿಂದೆ ಜುಲೈ 1 ಮತ್ತು ಆಗಸ್ಟ್ 18ರಂದು ಎಲ್‌ಪಿಜಿ ಬೆಲೆ ಹೆಚ್ಚಿಸಲಾಗಿತ್ತು. ಜನವರಿ 1ರಿಂದ ಸೆಪ್ಟೆಂಬರ್ 1ರವರೆಗಿನ ಅವಧಿಯಲ್ಲಿ ಒಟ್ಟು ಬೆಲೆ ಏರಿಕೆಯು ಪ್ರತಿ ಸಿಲಿಂಡರ್‌ಗೆ ₹ 190ರಷ್ಟಾಗಿದೆ.
ಸರ್ಕಾರದ ನಿಯಮಗಳ ಪ್ರಕಾರ, ಪ್ರತಿ ಮನೆಗೆ ಪ್ರತಿ ವರ್ಷ ಗರಿಷ್ಠ 12 ಸಿಲಿಂಡರ್‌ಗಳನ್ನು (14.2 ಕೆ.ಜಿ.ಯದ್ದು) ಸಬ್ಸಿಡಿ ದರದಲ್ಲಿ ಅಥವಾ ಮಾರುಕಟ್ಟೆ ದರಕ್ಕಿಂತ ಕಡಿಮೆಗೆ ಪೂರೈಸಬೇಕು. ಆದರೆ, ಎಲ್‌ಪಿಜಿ ದರ ತಿಂಗಳಿಗೊಮ್ಮೆ ಹೆಚ್ಚಾಗಲು ಶುರುವಾಗಿದ್ದರಿಂದ 2020ರ ಮೇ ನಂತರ ಸಬ್ಸಿಡಿ ಸಿಗುತ್ತಿಲ್ಲ.
ಕೆಲವು ದೂರದ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ಸಬ್ಸಿಡಿ ಸಿಗುತ್ತಿರುವುದನ್ನು ಹೊರತುಪಡಿಸಿದರೆ, ಪ್ರಮುಖ ನಗರಗಳಲ್ಲಿ ಸಬ್ಸಿಡಿ ಮತ್ತು ಸಬ್ಸಿಡಿಯೇತರ ಎಲ್‌ಪಿಜಿ ದರವು ಬಹುತೇಕ ಸಮನಾಗಿದೆ.
ಏಳು ವರ್ಷಗಳ ಅವಧಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯು ಎರಡು ಪಟ್ಟಿಗಿಂತ ಹೆಚ್ಚಾಗಿದೆ. 2014ರ ಮಾರ್ಚ್ 1ರಂದು 14.2 ಕೆ.ಜಿ. ಸಿಲಿಂಡರ್ ಬೆಲೆಯು ₹ 410.5ರಷ್ಟು ಇತ್ತು.
ಪೆಟ್ರೋಲ್, ಡೀಸೆಲ್ ದರ ಇಳಿಕೆ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಬುಧವಾರ ಪೆಟ್ರೋಲ್ ದರವನ್ನು 10 ಪೈಸೆ ಮತ್ತು ಡೀಸೆಲ್ ದರವನ್ನು 14 ಪೈಸೆಗಳಷ್ಟು ಇಳಿಕೆ ಮಾಡಿವೆ.
ಎಚ್‌ಪಿಸಿಎಲ್ ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರಿಗೆ ₹ 104.87 ಮತ್ತು ಡೀಸೆಲ್ ದರ ₹ 94.22ರಷ್ಟಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ ₹ 101.34 ಮತ್ತು ಡೀಸೆಲ್ ದರ ₹ 88.77ಕ್ಕೆ ತಲುಪಿದ್ದರೆ, ಮುಂಬೈನಲ್ಲಿ ಪೆಟ್ರೋಲ್ ದರ ₹ 107.39 ಮತ್ತು ಡೀಸೆಲ್ ದರ ₹ 96.33ರಷ್ಟಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.