ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಂಕಷ್ಟದ ಉರುಳಿನಲ್ಲಿ ‘ಸಹಕಾರ ಸಾರಿಗೆ’

ಪುನಶ್ಚೇತನಕ್ಕೆ ಮೊರೆ: ಅನಿರ್ದಿಷ್ಟಾವಧಿ ಧರಣಿ ಆರಂಭ
Last Updated 18 ಫೆಬ್ರುವರಿ 2020, 2:57 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸಹಕಾರ ತತ್ವದಡಿ ಸ್ಥಾಪಿತವಾಗಿ ಜನಪ್ರಿಯವಾಗಿರುವ ಕಾಫಿನಾಡಿನ ಸಹಕಾರ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಪುನಶ್ಚೇತನಕ್ಕೆ ಸರ್ಕಾರ ನೆರವು ನೀಡಬೇಕು ಎಂದು ಸಂಸ್ಥೆಯ ನೌಕರರು ಸೋಮವಾರದಿಂದ ಕೊಪ್ಪದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಭಾನುವಾರದಿಂದಲೇ ಸಹಕಾರ ಸಾರಿಗೆ ಬಸ್ಸುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರಿಸಲು ಧರಣಿನಿರತರು ನಿರ್ಧರಿಸಿದ್ದಾರೆ. ವಿದ್ಯಾರ್ಥಿಗಳು, ಸಂಘಸಂಸ್ಥೆಗಳು ಸಾಥ್ ನೀಡಿವೆ.

ಆದಾಯ ಕುಂಠಿತ–ಹೊರೆ ಹೆಚ್ಚಳ:

ಡೀಸೆಲ್‌ ದರ, ವಾಹನ ತೆರಿಗೆ, ವಾಹನ ವಿಮೆ, ವಾಹನ ಬಿಡಿಭಾಗಗಳ ದರ ಹೆಚ್ಚಳ, ವಾಹನಗಳ ದೈನಂದಿನ ನಿರ್ವಹಣೆ ವೆಚ್ಚ ಅಧಿಕವಾಗಿರುವುದರಿಂದ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರವು 2013 ರಿಂದ ಬಸ್ ಪ್ರಯಾಣ ದರ ಏರಿಕೆ ಮಾಡಿಲ್ಲ. ಸಂಸ್ಥೆಯ ಆದಾಯವು ಕುಂಠಿತವಾಗಿದೆ. ಪ್ರಯಾಣ ದರದಲ್ಲಿ ವಿದ್ಯಾರ್ಥಿಗಳು, ಅಂಗವಿಕಲರು, ಇತರರಿಗೆ ರಿಯಾಯಿತಿ ನೀಡಲಾಗಿದೆ. ಆರ್ಥಿಕ ಹೊರೆ ಹೆಚ್ಚಾಗಿದ್ದು, ಸಂಸ್ಥೆ ನಿಭಾಯಿಸುವುದು ದುಸ್ತರವಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ಹೇಳುತ್ತಾರೆ.

ಪ್ರಮುಖ ಬೇಡಿಕೆಗಳು: ರಿಯಾಯಿತಿ ಪಾಸ್‌ ಬಾಬ್ತು ₹ 6.6 ಕೋಟಿ ಮೊತ್ತವನ್ನು ಸರ್ಕಾರವು ಸಂಸ್ಥೆಗೆ ಮಂಜೂರು ಮಾಡಬೇಕು. ಸಂಸ್ಥೆ ಬಸ್‌ಗಳಿಗೆ ಡೀಸೆಲ್‌ ಖರೀದಿಗೆ ಮಾರಾಟ ತೆರಿಗೆಯಿಂದ ವಿನಾಯಿತಿ ನೀಡಬೇಕು. ಬಿಎಂಟಿಸಿ, ಕೆಎಸ್‌ಆರ್‌ಟಿಸಿಗಳಿಗೆ ನೀಡಿದ ಸವಲತ್ತುಗಳನ್ನು ಸಹಕಾರ ತತ್ವದಡಿಯಲ್ಲಿ ನಡೆಯುತ್ತಿರುವ ಸಹಕಾರ ಸಾರಿಗೆಗೆ ನೀಡಬೇಕು. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೀಡಿರುವ ಸೂಚನೆಯನ್ನು ಪರಿಗಣಿಸಬೇಕು ಸಹಿತ ವಿವಿಧ ಬೇಡಿಕೆಗನ್ನು ಈಡೇರಿಸಬೇಕು ಎಂಬುದು ಪ್ರತಿಭಟನಕಾರರ ಆಗ್ರಹ.

ಸಹಕಾರ ಸಾರಿಗೆ ಸಂಸ್ಥೆ ಬಸ್‌ಗಳು ರಸ್ತೆಗಿಳಿಯದಿರುವುದರಿಂದ ಮಲೆನಾಡು ಭಾಗದ ಹಲವು ಕಡೆ ತೊಂದರೆಯಾಗಿದೆ. ಕೆಲವೆಡೆ ವಿದ್ಯಾರ್ಥಿಗಳು ಶಾಲೆ–ಕಾಲೇಜುಗಳಿಗೆ ತೆರಳಲು ತೊಡಕಾಗಿದೆ. ಈಗ ಪರೀಕ್ಷಾ ಸಮಯ, ಬಸ್‌ಗಳು ಇಲ್ಲದಿರುವುದು ಸಂಕಟ ತಂದೊಡ್ಡಿದೆ. ಈ ಬಸ್‌ಗಳು ಮಾತ್ರ ಓಡಾಡುತ್ತಿದ್ದ ಕಡೆಗಳಲ್ಲಿ ಕಾರ್ಮಿಕರು, ನೌಕರರು ಕಾಲ್ನಡಿಗೆಯಲ್ಲಿ ಊರು, ತೋಟ ತಲುಪಬೇಕಾಗಿದೆ.

‘ನಮ್ಮ ಮಾರ್ಗದಲ್ಲಿ ಶಾಲಾ–ಕಾಲೇಜಿಗೆ ಓಡಾಡುವ ವಿದ್ಯಾರ್ಥಿಗಳು (ಚಿಕ್ಕಮಗಳೂರು, ಬಾಳೆಹೊನ್ನೂರು, ಕೊಪ್ಪ, ಶೃಂಗೇರಿ...) ಸಹಕಾರ ಸಾರಿಗೆ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಬಸ್‌ ಸ್ಥಗಿತ ಮಾಡಿರುವುದರಿಂದ ಸಮಸ್ಯೆಯಾಗಿದೆ. ಗಂಟೆಗಟ್ಟಲೆ ಕಾದು ಬೇರೆ ಬಸ್‌, ವಾಹನ ಹಿಡಿದು ಊರು ತಲುಪಬೇಕಾಗಿದೆ’ ಎಂದು ಪಿಯು ವಿದ್ಯಾರ್ಥಿ ಜೋಳದಾಳ್‌ ಗ್ರಾಮದ ಚಂದನ್‌ ಗೋಳು ತೋಡಿಕೊಂಡರು.

ಸಹಕಾರ ಸಾರಿಗೆ ಸಂಸ್ಥೆ ಬೆಳೆದುಬಂದ ಹಾದಿ...

1991ರಲ್ಲಿ ಆರು ಬಸ್ಸುಗಳು, ₹ 12 ಲಕ್ಷ ಬಂಡವಾಳದಲ್ಲಿ ಸಹಕಾರ ತತ್ವದಲ್ಲಿ ಈ ಸಂಸ್ಥೆ ಸ್ಥಾಪಿಸಲಾಯಿತು. ಕಾರ್ಮಿಕರೇ ಸಂಸ್ಥೆಯ ಮಾಲೀಕರು. ಶಂಕರ್‌ ಟ್ರಾನ್ಸ್‌ಪೋರ್ಟ್‌ ಸಂಸ್ಥೆಯ ಅಳಿವಿನಿಂದ ಜನ್ಮ ತಳೆದ ಸಂಸ್ಥೆ ಇದು.

ಕೊಪ್ಪದಲ್ಲಿ ಕೇಂದ್ರ ಕಚೇರಿ ಇದೆ. ಕೊಪ್ಪ ಮತ್ತು ಶೃಂಗೇರಿಯಲ್ಲಿ ಸ್ವಂತ ಗ್ಯಾರೇಜ್‌ ಇದೆ. ಆರು ಬಸ್‌ಗಳಿಂದ ಆರಂಭವಾದ ಸಂಸ್ಥೆಯಲ್ಲಿ ಈಗ 70 ಬಸ್‌ಗಳು, 300ಕ್ಕೂ ಹೆಚ್ಚು ನೌಕರರು ಇದ್ದಾರೆ.

ಸಹಕಾರ ಸಾರಿಗೆ ಬಸ್‌ಗಳು ಮಲೆನಾಡಿನ ಊರುಗಳ ಸಂಪರ್ಕ ಕೊಂಡಿಯಾಗಿವೆ. ಕೆಎಸ್‌ಆರ್‌ಟಿಸಿ ಇತರ ಯಾವುದೇ ಬಸ್‌ ಸೌಕರ್ಯ ಇಲ್ಲದ ಊರುಗಳಿಗೆ ಈ ಬಸ್‌ಗಳು ತಲುಪುತ್ತವೆ. ವಿದ್ಯಾರ್ಥಿಗಳು, ಕೂಲಿಕಾರ್ಮಿಕರು, ನೌಕರರು ಈ ಬಸ್ಸುಗಳನ್ನು ಅವಲಂಬಿಸಿದ್ದಾರೆ. ಸಮಯಪಾಲನೆ, ಪ್ರತಿನಿತ್ಯ ಸಂಚಾರ, ಒಂದೇ ಮಾದರಿ (ತಿಳಿ ಹಸಿರು, ಬಿಳಿ), ವ್ಯವಸ್ಥಿತ ಆಸನ ಸೌಕರ್ಯ, ಸಿಬ್ಬಂದಿ ಸೇವಾ ಮನೋಭಾವ ಇತ್ಯಾದಿಯಿಂದಾಗಿ ಸಂಸ್ಥೆ ಶಿಸ್ತಿಗೆ ಹೆಸರಾಗಿದೆ.

2017ರಲ್ಲಿ ಬೆಳ್ಳಿಹಬ್ಬ ಆಚರಿಸಲಾಗಿದೆ. ಮೂರ್ನಾಲ್ಕು ವರ್ಷಗಳಿಂದ ಸಂಸ್ಥೆ ನಷ್ಟದ ಹಾದಿಯಲ್ಲಿದೆ. ಯಶಸ್ಸಿನ ಉತ್ತುಂಗವೇರಿ ಇತಿಹಾಸ ಸೃಷ್ಟಿಸಿರುವ ಸಂಸ್ಥೆಯ ಗತಿ ಮುಂದೇನು ಎಂಬ ಪ್ರಶ್ನೆ ‘ಧುತ್ತನೆ’ ಎದುರಾಗಿದೆ. ಕಾರ್ಮಿಕರನ್ನು ಆತಂಕಕ್ಕೆ ದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT