ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಚಿಕಿತ್ಸಾ ವೆಚ್ಚ ಭರಿಸಲು ಪ್ರತ್ಯೇಕ ವಿಮೆ ‘ಕೊರೊನಾ ಕವಚ’

Last Updated 14 ಜುಲೈ 2020, 14:49 IST
ಅಕ್ಷರ ಗಾತ್ರ

ದೇಶದಾದ್ಯಂತ ಕೊರೊನಾ–2 ವೈರಾಣು ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿರುವ ಮಧ್ಯೆಯೇ ‘ಕೋವಿಡ್‌–19’ ಚಿಕಿತ್ಸಾ ವೆಚ್ಚ ಭರಿಸುವ ಪ್ರತ್ಯೇಕ ಅಲ್ಪಾವಧಿಯ ವಿಮೆ ಪರಿಹಾರ ಸೌಲಭ್ಯಕ್ಕೆ ಈಗ ಚಾಲನೆ ಸಿಕ್ಕಿದೆ.

ಕೋವಿಡ್‌ ಚಿಕಿತ್ಸಾ ವೆಚ್ಚ ಭರಿಸಲು ನೆರವಾಗುವ ಪ್ರತ್ಯೇಕ ವಿಮೆ ಪಾಲಿಸಿಗಳನ್ನು ಜುಲೈ 10ರ ಒಳಗೆ ಪರಿಚಯಿಸಬೇಕೆಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಸೂಚಿಸಿತ್ತು. ಆರೋಗ್ಯ ಮತ್ತು ಸಾಮಾನ್ಯ ವಿಮೆ ಕಂಪನಿಗಳು ಅಲ್ಪಾವಧಿಯ ಕೋವಿಡ್‌ ಕವಚ ವಿಮೆ ಪಾಲಿಸಿ ಪರಿಚಯಿಸುವುದನ್ನು ಪ್ರಾಧಿಕಾರವು ಕಡ್ಡಾಯ ಮಾಡಿತ್ತು. ಬಹುತೇಕ ಕಂಪನಿಗಳು ಈ ವಿಮೆ ಸೌಲಭ್ಯವನ್ನು ಈಗ ಜಾರಿಗೆ ತಂದಿವೆ. ಅಲ್ಪಾವಧಿಯ 'ಕೊರೊನಾ ಕವಚ' ವಿಮೆ ಪಾಲಿಸಿ ಜಾರಿಗೆ ತರುವ ಸಂಬಂಧ ಮಾರ್ಗದರ್ಶಿ ಸೂತ್ರಗಳನ್ನೂ ಪ್ರಕಟಿಸಿತ್ತು. ಈ ಸೂತ್ರಗಳ ಅನ್ವಯ, ಹಲವಾರು ವಿಮೆ ಕಂಪನಿಗಳು ಆರಂಭಿಸಿರುವ ‘ಕೊರೊನಾ ಕವಚ’ ಆರೋಗ್ಯ ವಿಮೆ ಪಾಲಿಸಿಗಳಿಗೆ ಪ್ರಾಧಿಕಾರವು ಅನುಮೋದನೆ ನೀಡಿದೆ.

ವಿವಿಧ ವಿಮೆ ಕಂಪನಿಗಳು ಪ್ರಕಟಿಸಿರುವ ‘ಕೊರೊನಾ ಕವಚ’ ಪಾಲಿಸಿನಡಿ, ಮೂರುವರೆ (105 ದಿನ), ಆರೂವರೆ (195 ದಿನ) ಮತ್ತು ಒಂಬತ್ತುವರೆ ತಿಂಗಳ (285 ದಿನಗಳ) ಅಲ್ಪಾವಧಿ ವಿಮೆ ಸೌಲಭ್ಯವು ಇನ್ನು ಮುಂದೆ ಲಭ್ಯ ಇರಲಿದೆ.

ಕೋವಿಡ್‌ ಚಿಕಿತ್ಸಾ ವೆಚ್ಚ ಭರಿಸುವ ವಿಶೇಷ ವಿಮೆ ಯೋಜನೆ ಇದಾಗಿದೆ. ಎಲ್ಲ ವಿಮೆ ಕಂಪನಿಗಳು ‘ಕೊರೊನಾ ಕವಚ’ ಹೆಸರಿನ ಪಾಲಿಸಿಗಳನ್ನೇ ಪರಿಚಯಿಸಿವೆ. ಹೀಗಾಗಿ ಪಾಲಿಸಿ ಖರೀದಿಯಲ್ಲಿ ಗೊಂದಲಕ್ಕೆ ಯಾವುದೇ ಆಸ್ಪದ ಇರಲಾರದು. ಪ್ರತಿಯೊಂದು ವಿಮೆ ಕಂಪನಿಯ ಪಾಲಿಸಿಯ ಸೌಲಭ್ಯಗಳು ಮತ್ತು ಕಂತು ಹೆಚ್ಚು ಕಡಿಮೆ ಒಂದೇ ತೆರನಾಗಿರುತ್ತದೆ. ‘ಕೋವಿಡ್‌–19’ ಚಿಕಿತ್ಸೆಯ ಆಸ್ಪತ್ರೆಯ ವೆಚ್ಚ ಭರಿಸಲು ವಿಮೆ ಪಾಲಿಸಿ ಖರೀದಿಸುವವರು ಯಾವುದೇ ಕಂಪನಿಯ ಪಾಲಿಸಿ ಆಯ್ಕೆ ಮಾಡಿಕೊಳ್ಳಬಹುದು.

ಅನೇಕರು ಈಗಾಗಲೇ ಪಡೆದುಕೊಂಡಿರುವ ಆರೋಗ್ಯ ವಿಮೆ ಯೋಜನೆಗಳಡಿ ಕೋವಿಡ್‌ ಚಿಕಿತ್ಸೆಯೂ ಒಳಗೊಂಡಿರುತ್ತದೆ. ಆದರೆ, ಈ ಆರೋಗ್ಯ ವಿಮೆಗಳಡಿ ಕೋವಿಡ್‌ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಭರಿಸಲು ಸಾಧ್ಯವಾಗುವುದಿಲ್ಲ. ಆರೋಗ್ಯ ವಿಮೆ ಹೊಂದಿದವರೂ ಒಂದು ವೇಳೆ ಕೋವಿಡ್‌ಗೆ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಉದ್ಭವಿಸಿದರೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ.

ಕೋವಿಡ್‌ ಚಿಕಿತ್ಸೆ ಉದ್ದೇಶಕ್ಕೆ ಒದಗಿಸಲಾಗುವ ಹೆಚ್ಚುವರಿ ಸೇವೆಗಳು, ಆರೈಕೆ, ಸ್ವಚ್ಛತೆ ಹಾಗೂ ಸುರಕ್ಷತಾ ಕ್ರಮಗಳಿಗೆ ಆಸ್ಪತ್ರೆಗಳು ಪ್ರತ್ಯೇಕ ಶುಲ್ಕ ವಿಧಿಸುತ್ತವೆ. ಆರೋಗ್ಯ ವಿಮೆಯು ಈ ವೆಚ್ಚಗಳಿಗೆ ಹಣ ಪಾವತಿಸುವುದಿಲ್ಲ. ವೈದ್ಯಕೀಯಯೇತರ ವೆಚ್ಚಗಳಾದ ವೈಯಕ್ತಿಕ ಸುರಕ್ಷತಾ ಪರಿಕರಗಳ ಬಳಕೆಗೆ (ಪಿಪಿಇ) ಶುಲ್ಕ ಪಾವತಿಯಂತಹ ಇತರ ವೆಚ್ಚಗಳನ್ನೂ ವಿಮೆ ಪಾಲಿಸಿಯು ಒಳಗೊಂಡಿರುವುದಿಲ್ಲ.

ಕೋವಿಡ್‌ಗೆ ಮನೆಯಲ್ಲಿಯೇ ಪ್ರತ್ಯೇಕ ಚಿಕಿತ್ಸೆ ಪಡೆಯುವ, ತಾತ್ಕಾಲಿಕವಾಗಿ ನಿರ್ಮಿಸಿರುವ ಆಸ್ಪತ್ರೆಗಳಲ್ಲಿ ಪಡೆಯುವ ಚಿಕಿತ್ಸೆಯು ಕೂಡ ಈಗಾಗಲೇ ಜಾರಿಯಲ್ಲಿ ಇರುವ ಆರೋಗ್ಯ ವಿಮೆ ಪಾಲಿಸಿಗಳ ವ್ಯಾಪ್ತಿಗೆ ಬರುವುದಿಲ್ಲ. ಈ ಎಲ್ಲ ಕಾರಣಗಳಿಗೆ ‘ಕೋವಿಡ್‌–19’ ಚಿಕಿತ್ಸೆಗೆಂದೇ ಮೀಸಲಾದ ಪ್ರತ್ಯೇಕ ಪಾಲಿಸಿ ಖರೀದಿಸುವುದು ಹೆಚ್ಚು ಪ್ರಯೋಜನಕಾರಿ ಆಗಿರಲಿದೆ.

ಇದುವರೆಗೆ ಆರೋಗ್ಯ ವಿಮೆ ಪಡೆದುಕೊಳ್ಳದವರಿಗೂ ಅಲ್ಪಾವಧಿಯ ಕೋವಿಡ್‌ ಕವಚ ವಿಮೆ ಸೌಲಭ್ಯ ಹೆಚ್ಚು ಉಪಯುಕ್ತವಾಗಿರಲಿದೆ. ಈಗಾಗಲೇ ಆರೋಗ್ಯ ವಿಮೆ ಪಡೆದವರೂ ಕೋವಿಡ್‌ ಚಿಕಿತ್ಸೆಯ ಹೆಚ್ಚುವರಿ ಶುಲ್ಕಗಳನ್ನು ಭರಿಸಲು ‘ಕೊರೊನಾ ಕವಚ’ ವಿಮೆ ಪಾಲಿಸಿಗಳನ್ನು ಖರೀದಿಸುವುದು ಲಾಭದಾಯಕವಾಗಿರಲಿದೆ ಎಂಬುದು ವಿಮೆ ಕ್ಷೇತ್ರದ ಪರಿಣತರ ಸಲಹೆಯಾಗಿದೆ.

ಸರ್ಕಾರಿ ಸ್ವಾಮ್ಯದ ಓರಿಯಂಟಲ್‌ ಇನ್ಶುರನ್ಸ್‌, ನ್ಯಾಷನಲ್‌ ಇನ್ಯುರನ್ಸ್‌ ಮತ್ತು ಎಸ್‌ಬಿಐ ಜನರಲ್‌ ಇನ್ಶುರನ್ಸ್‌, ಐಸಿಐಸಿಐ ಲೋಂಬಾರ್ಡ್‌, ಎಚ್‌ಡಿಎಫ್‌ಸಿ ಎರ್ಗೊ, ಮ್ಯಾಕ್‌ ಬುಪಾ, ಬಜಾಜ್‌ ಅಲೈಯನ್ಸ್‌, ಭಾರ್ತಿ ಆಕ್ಸಾ, ಟಾಟಾ ಎಐಜಿ ಮತ್ತಿತರ ವಿಮೆ ಕಂಪನಿwwಗಳು ತಮ್ಮದೇ ಆದ ‘ಕೋವಿಡ್‌ ಕವಚ’ ಪಾಲಿಸಿ ಪರಿಚಯಿಸಿವೆ. ವಿಮೆ ಪರಿಹಾರ ಮೊತ್ತವು ಕನಿಷ್ಠ ₹ 50 ಸಾವಿರದಿಂದ ಗರಿಷ್ಠ 5 ಲಕ್ಷದವರೆಗೆ ಇರಲಿದೆ. ವೈಯಕ್ತಿಕ ಪಾಲಿಸಿಗಳಲ್ಲದೆ ಕುಟುಂಬದ ಸದಸ್ಯರಿಗೂ ವಿಮೆ ಸೌಲಭ್ಯ ಒಳಗೊಂಡ (family floater) ಪಾಲಿಸಿಗಳನ್ನೂ ಖರೀದಿಸಲು ಅವಕಾಶ ಇದೆ.

‘ಕೊರೊನಾ ಕವಚ’ ಪಾಲಿಸಿಯು ವಿಮೆ ರಕ್ಷಣೆ ಆಧಾರ (ಆಸ್ಪತ್ರೆ ವೆಚ್ಚ ಭರಿಸುವ– indemnity cover) ಮತ್ತು ಲಾಭಕರ ಆಧಾರ (ವಿಮೆ ಪರಿಹಾರ ಪಡೆಯುವಾಗ ಪೂರ್ವ ನಿರ್ಧರಿತ ಕ್ಲೇಮ್‌ ಮೊತ್ತ ಪಡೆಯುವುದು–Benefit cover) – ಹೀಗೆ ಎರಡು ಬಗೆಯಲ್ಲಿ ದೊರೆಯಲಿದೆ. ಗ್ರಾಹಕರು ತಮ್ಮ ಅಗತ್ಯಗಳಿಗೆ ಅನುಸಾರ ಸೂಕ್ತ ಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕಾಯಿಲೆ ಮತ್ತು ಚಿಕಿತ್ಸೆಯ ಸಂಕೀರ್ಣತೆಯ ಕಾರಣಕ್ಕೆ ಸೂಕ್ತ ವಿಮೆ ಮೊತ್ತದ ಪಾಲಿಸಿ ಖರೀದಿಸುವುದು ಹೆಚ್ಚು ಉಪಯುಕ್ತಕರವಾಗಿರಲಿದೆ. ಕೋವಿಡ್‌ ಚಿಕಿತ್ಸೆ ಜತೆಗೆ ಈ ಮೊದಲೇ ಇದ್ದ ಅನಾರೋಗ್ಯದ ಚಿಕಿತ್ಸೆಗೂ ವಿಮೆ ಸೌಲಭ್ಯ ಇರಲಿದೆ. ವಯಸ್ಸು, ಆಸ್ಪತ್ರೆ ಆಯ್ಕೆ, ವಾಸಸ್ಥಳ, ಅವಲಂಬಿತರು, ಸದ್ಯದ ಆರೋಗ್ಯ ಪರಿಸ್ಥಿತಿ ಪರಿಗಣಿಸಿ ಪಾಲಿಸಿ ಖರೀದಿಸಬೇಕು.

ಸರ್ಕಾರದ ಮಾನ್ಯತೆ ಪಡೆದ ಕಾಯಿಲೆ ಪತ್ತೆ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಕೋವಿಡ್‌ ದೃಢಪಟ್ಟ ಪ್ರಕರಣಗಳಲ್ಲಿ ವಿಮೆ ಪರಿಹಾರ ದೊರೆಯಲಿದೆ. ಕೋವಿಡ್ ಸ್ಟ್ಯಾಂಡರ್ಡ್‌ ಆರೋಗ್ಯ ವಿಮೆ ಪಾಲಿಸಿಯು ಒಂದು ಕಡ್ಡಾಯ ವಿಮೆ ಪರಿಹಾರ ಮತ್ತು ಇನ್ನೊಂದು ಐಚ್ಛಿಕ ಪರಿಹಾರ ಒಳಗೊಂಡಿರಲಿದೆ. ಐಚ್ಛಿಕ ಪರಿಹಾರಕ್ಕೆ ಪ್ರತ್ಯೇಕ ಪ್ರೀಮಿಯಂ ಇರಲಿದೆ.

ಪ್ರತ್ಯೇಕ ವಿಮೆಯ ಅಗತ್ಯ: ಆರೋಗ್ಯ ವಿಮೆ ಹೊಂದಿದವರೂ ಕೋವಿಡ್‌ ಚಿಕಿತ್ಸೆಗೆ ಸಂಬಂಧಿಸಿದ ಹೆಚ್ಚುವರಿ ಸೇವೆಗಳಿಗೆ ತಮ್ಮ ಕಿಸೆಯಿಂದ ಹಣ ಪಾವತಿಸಬೇಕಾಗುತ್ತದೆ. ಹೀಗಾಗಿ ಹೆಚ್ಚುವರಿ ವೆಚ್ಚ ಭರಿಸಲು ಕೋವಿಡ್‌–19 ವಿಶೇಷ ವಿಮೆ ಪಾಲಿಸಿ ಖರೀದಿಸುವುದು ಸೂಕ್ತ.

ಪಾಲಿಸಿ ಅವಧಿ:

3 1/2 ತಿಂಗಳು (105 ದಿನ)

6 1/2 ತಿಂಗಳು ( 195 ದಿನ)

9 1/2 ತಿಂಗಳು ( 285 ದಿನ)

ಅಲ್ಪಾವಧಿಯ ಪಾಲಿಸಿಗಳ ನವೀಕರಣ, ವಲಸೆ ಮತ್ತು ಕಂಪನಿಗಳನ್ನು ಬದಲಿಸುವ ಅವಕಾಶ ಇರುವುದಿಲ್ಲ.

ವಯೋಮಿತಿ ಅರ್ಹತೆ:

18 ರಿಂದ 65 ವಯಸ್ಸಿನವರು

ಒಂದು ದಿನ ಹಸುಗೂಸಿನಿಂದ ಹಿಡಿ 18 ವರ್ಷದವರೆಗಿನ ಅವಲಂಬಿತರು

ಪಾಲಿಸಿಯ ವಿಶೇಷತೆಗಳು

ಒಂದೇ ಕಂತಿನ ಪ್ರೀಮಿಯಂ

ದೇಶದಾದ್ಯಂತ ಒಂದೇ ಪ್ರೀಮಿಯಂ ದರ

ಪ್ರದೇಶ, ವಲಯ ಆಧರಿಸಿ ಪ್ರೀಮಿಯಂ ನಿಗದಿ ಇಲ್ಲ

ಕೋವಿಡ್‌ ಚಿಕಿತ್ಸೆ ಜತೆಗೆ ವ್ಯಕ್ತಿಯಲ್ಲಿ ಈ ಮೊದಲೇ ಇರಬಹುದಾದ ಕಾಯಿಲೆಯ ಚಿಕಿತ್ಸೆಗೂ ಈ ಪಾಲಿಸಿ ಅನ್ವಯ

ಮನೆಯಲ್ಲಿ ಗರಿಷ್ಠ 14 ದಿನಗಳವರೆಗೆ ಪಡೆಯುವ ಚಿಕಿತ್ಸೆಗೂ ವಿಮೆ ಸೌಲಭ್ಯ

ಒಳರೋಗಿಗಳಿಗೆ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೊಪಥಿ (ಆಯುಷ್‌) ಚಿಕಿತ್ಸೆಗೂ ಅನ್ವಯ

ಆಸ್ಪತ್ರೆ ಸೇರ್ಪಡೆ ಮುಂಚಿನ ಮತ್ತು ನಂತರದ ವೆಚ್ಚಗಳಿಗೂ ವಿಮೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT