ಬುಧವಾರ, ಮೇ 27, 2020
27 °C

ಮುಂಬೈ ಷೇರುಪೇಟೆ: ಬ್ಯಾಂಕಿಂಗ್‌ ಷೇರು ನಷ್ಟ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ‘ಕೋವಿಡ್‌–19’ ಪ್ರಕರಣಗಳಲ್ಲಿನ ಏರಿಕೆಯಿಂದಾಗಿ ಆರ್ಥಿಕತೆ ಮೇಲೆ ಬೀರಬಹುದಾದ ಪರಿಣಾಮಗಳ ಅನಿಶ್ಚಿತತೆ ಹೆಚ್ಚಿದೆ. ಹೀಗಾಗಿ ಮುಂಬೈ ಷೇರುಪೇಟೆಯಲ್ಲಿ ಮಾರಾಟ ಒತ್ತಡ ಮುಂದುವರೆದಿದೆ.

ಶುಕ್ರವಾರದ ವಹಿವಾಟಿನಲ್ಲಿ ಷೇರುಪೇಟೆ ಸಂವೇದಿ ಸೂಚ್ಯಂಕವು 674 ಅಂಶಗಳನ್ನು ಕಳೆದುಕೊಂಡಿತು.  ಮೂಡೀಸ್‌ ಇನ್ವೆಸ್ಟರ್ಸ್‌ ಸರ್ವಿಸ್‌, ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿಯ ಮುನ್ನೋಟವನ್ನು ಸ್ಥಿರತೆಯಿಂದ ನಕಾರಾತ್ಮಕ ಮಟ್ಟಕ್ಕೆ ಬದಲಿಸಿರುವುದರಿಂದ ಬ್ಯಾಂಕಿಂಗ್ ಷೇರುಗಳಲ್ಲಿ ತೀವ್ರ ಮಾರಾಟ ಕಂಡುಬಂದಿತು. ಬ್ಯಾಂಕ್ ಷೇರುಗಳ ಬೆಲೆಗಳು ಗರಿಷ್ಠ ಶೇ 15.5ರವರೆಗೆ ನಷ್ಟ ದಾಖಲಿಸಿದವು.

ವಹಿವಾಟಿನ ಒಂದು ಹಂತದಲ್ಲಿ 27,500 ಅಂಶಗಳಿಗೆ ಕುಸಿದಿದ್ದ ಸೂಚ್ಯಂಕವು ದಿನದ ಅಂತ್ಯಕ್ಕೆ 674 ಅಂಶಗಳಷ್ಟು ಕುಸಿತ ಕಂಡು 27,590 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ‘ 170 ಅಂಶಗಳಿಗೆ ಎರವಾಗಿ 8,083 ಅಂಶಗಳಲ್ಲಿ ಅಂತ್ಯಕಂಡಿತು.

ಆರ್‌ಬಿಎಲ್‌ ಬ್ಯಾಂಕ್‌ ಗರಿಷ್ಠ ಶೇ 15.53, ಆ್ಯಕ್ಸಿಸ್ ಬ್ಯಾಂಕ್‌  (ಶೇ 9.16), ಇಂಡಸ್‌ಇಂಡ್‌ ಬ್ಯಾಂಕ್‌ (ಶೇ 8.49), ಐಸಿಐಸಿಐ ಬ್ಯಾಂಕ್‌ (ಶೇ 8.01) ಮತ್ತು  ಎಸ್‌ಬಿಐ ಶೇ 5.92ರಷ್ಟು ನಷ್ಟ ಕಂಡವು. ಬ್ಯಾಂಕ್‌ ಸೂಚ್ಯಂಕವು ಶೇ 5.39ರಷ್ಟು ಇಳಿಕೆ ದಾಖಲಿಸಿತು. ಟೈಟನ್‌, ಮಾರುತಿ, ಎಚ್‌ಡಿಎಫ್‌ಸಿ ಮತ್ತು ಏಷಿಯನ್‌ ಪೇಂಟ್ಸ್‌ ಷೇರುಗಳೂ ನಷ್ಟ ದಾಖಲಿಸಿದವು.

ಇನ್ನೊಂದೆಡೆ ಸನ್‌ ಫಾರ್ಮಾ, ಐಟಿಸಿ, ಎಂಆ್ಯಂಡ್‌ಎಂ, ಟೆಕ್‌ ಮಹೀಂದ್ರಾ ಷೇರುಗಳ ಬೆಲೆ ಏರಿಕೆ ಕಂಡವು.

‘ಕೋವಿಡ್‌–19’ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಳಗೊಳ್ಳುತ್ತಿರುವುದರಿಂದ  ತಮ್ಮ ಆತಂಕ ಹೆಚ್ಚುತ್ತಿದೆ ಎಂದು ಹೂಡಿಕೆದಾರರು ತಿಳಿಸಿದ್ದಾರೆ.

ಶಾಂಘೈ ಮತ್ತು ಹಾಂಗ್‌ಕಾಂಗ್‌ ಷೇರುಪೇಟೆಗಳಲ್ಲಿಯೂ ಮಾರಾಟ ಒತ್ತಡ ಕಂಡುಬಂದಿತು. ಸೋಲ್‌ ಮತ್ತು ಟೋಕಿಯೊ ಪೇಟೆಗಳು ಅಲ್ಪಮಟ್ಟಿನ ಗಳಿಕೆ ದಾಖಲಿಸಿದವು. ಯುರೋಪ್‌ ಷೇರುಪೇಟೆಗಳೂ ಆರಂಭಿಕ ವಹಿವಾಟಿನಲ್ಲಿ ಗಮನಾರ್ಹ ಕುಸಿತ ಕಂಡವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು