ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಾಲ ಮನ್ನಾಕ್ಕೆ ವಿರೋಧ, ಉದ್ಯಮಿಗಳ ಸಾಲಕ್ಕೆ ಪರೋಕ್ಷ ಪರಿಹಾರ; ಹೇಗೆ ಗೊತ್ತೇ?

ಎನ್‌ಪಿಎ ಸಂಕಷ್ಟದಿಂದ ಪಾರಾಗಲು ಬ್ಯಾಂಕ್‌ಗಳಿಗೆ ಸರ್ಕಾರದಿಂದ ಭಾರಿ ನೆರವು
Last Updated 19 ಫೆಬ್ರುವರಿ 2019, 20:28 IST
ಅಕ್ಷರ ಗಾತ್ರ

ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಕೃಷಿ ಸಾಲ ಮನ್ನಾ ಘೋಷಣೆ ಮಾಡಿದ ವಿಚಾರ ಈಚೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಾಲ ಮನ್ನಾದಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗುತ್ತಿದೆ, ಬ್ಯಾಂಕಿಂಗ್ ವ್ಯವಸ್ಥೆಗೆ ನಷ್ಟವಾಗುತ್ತಿದೆ ಹಾಗೂ ದೇಶದ ಅಭಿವೃದ್ಧಿ ಕುಠಿತವಾಗುತ್ತಿದೆ ಎಂದೆಲ್ಲ ಮಾಧ್ಯಮಗಳಲ್ಲಿ ವರದಿಯಾಗಿದ್ದಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲೂ ಚರ್ಚೆಯಾಗಿದೆ.

ಆದರೆ ಉದ್ಯಮಿಗಳ ವಸೂಲಿಯಾಗದ ಸಾಲ ಮನ್ನಾಕ್ಕೆ ಸರ್ಕಾರ ಪರೋಕ್ಷ ನೆರವು ನೀಡುತ್ತಿರುವ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ.ವಸೂಲಾಗದ ಸಾಲದಿಂದ ಕಂಗೆಟ್ಟಿರುವ ಬ್ಯಾಂಕ್‌ಗಳಿಗೆ 2017–18ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ 2.11 ಲಕ್ಷ ಕೋಟಿ ಪರಿಹಾರ ಘೋಷಿಸಿತ್ತು. ಇದು ಈಚೆಗೆ ಕರ್ನಾಟಕ ಸೇರಿದಂತೆ 10 ರಾಜ್ಯಗಳು ಮಾಡಿರುವ ಕೃಷಿ ಸಾಲ ಮನ್ನಾದ ಮೊತ್ತಕ್ಕಿಂತ (₹184,800 ಕೋಟಿ) ಹೆಚ್ಚೆಂಬುದು ಗಮನಾರ್ಹ.

10 ರಾಜ್ಯಗಳಲ್ಲಿ ಮನ್ನಾ ಆದ ಕೃಷಿ ಸಾಲಕ್ಕಿಂತಲೂ 12 ಕಂಪನಿಗಳಿಗೆ ನೀಡಿದ ವಸೂಲಾಗದ ಸಾಲದ ಮೊತ್ತ (ಕಾರ್ಪೊರೇಟ್ ಎನ್‌ಪಿಎ) ದುಪ್ಪಟ್ಟಿದೆ ಎಂದರೆ ನೀವು ನಂಬಲೇಬೇಕು.

ಹೌದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಅಂಕಿಅಂಶಗಳ ಪ್ರಕಾರ 2017–18ನೇ ಸಾಲಿನಲ್ಲಿ ಕರ್ನಾಟಕ ಸೇರಿದಂತೆ 10 ರಾಜ್ಯಗಳು ಮಾಡಿರುವ ಕೃಷಿ ಸಾಲ ಮನ್ನಾದ ಮೊತ್ತ ₹184,800 ಕೋಟಿ. 2015ರ ಮಾರ್ಚ್‌ವರೆಗಿನ ಲೆಕ್ಕಾಚಾರದ ಪ್ರಕಾರ 12 ಕಂಪನಿಗಳಿಗೆ ನೀಡಿದ ವಸೂಲಾಗದ ಸಾಲದ ಮೊತ್ತ ₹345,000 ಕೋಟಿ.

ಕೃಷಿ ಸಾಲ ಮನ್ನಾದ ವಿವರ

ರಾಜ್ಯ ಮೊತ್ತ (ಕೋಟಿ ₹ಗಳಲ್ಲಿ)
ಕರ್ನಾಟಕ 44,000
ಮಧ್ಯ ಪ್ರದೇಶ 38,000
ಉತ್ತರ ಪ್ರದೇಶ 36,000
ಮಹಾರಾಷ್ಟ್ರ 34,000
ರಾಜಸ್ಥಾನ 18,000
ಛತ್ತೀಸಗಡ 6,100
ಆಂಧ್ರ ಪ್ರದೇಶ 3,600
ತೆಲಂಗಾಣ 3,000
ಪಂಜಾಬ್ 1,500
ಅಸ್ಸಾಂ 600


ಉದ್ಯಮ ಸಾಲದ ಮೊತ್ತವೇ ಹೆಚ್ಚು

ಕೃಷಿ ಸಾಲ ಮನ್ನಾದ ಮೊತ್ತಕ್ಕೆ ಹೋಲಿಸಿದರೆ ದೇಶದಲ್ಲಿ ಉದ್ಯಮ ಸಾಲದ ಪ್ರಮಾಣವೇ ಹೆಚ್ಚಿದೆ.2015ರ ಮಾರ್ಚ್‌ ವೇಳೆಗೆ ದೇಶದ 10 ಕಂಪನಿಗಳಿಗೆ ನೀಡಿದ ಸಾಲದ ಮೊತ್ತ ₹731,000 ಕೋಟಿ ಆಗಿತ್ತು. 2017ರ ಮಾರ್ಚ್ ವೇಳೆಗೆ ಉದ್ಯಮ ಕಂಪನಿಗಳು ಮತ್ತು ವ್ಯಕ್ತಿಗಳಿಗೆ (ವೈಯಕ್ತಿಕ ಸಾಲ) ನೀಡಲಾದ ಸಾಲದ ಒಟ್ಟು ಮೊತ್ತ ₹71.5 ಲಕ್ಷ ಕೋಟಿ ಆಗಿತ್ತು. 2018ರ ಮಾರ್ಚ್‌ ವೇಳೆಗೆ ಇದು ₹77 ಲಕ್ಷ ಕೋಟಿ ಆಗಿದೆ ಎಂಬುದು 2018ರ ಡಿಸೆಂಬರ್‌ನಲ್ಲಿ ಆರ್‌ಬಿಐ ಬಿಡುಗಡೆ ಮಾಡಿದ್ದ ವರದಿಯಿಂದ ತಿಳಿದುಬಂದಿದೆ.

ಈ ಎರಡೂ ಅವಧಿಯಲ್ಲಿ ನೀಡಲಾದ ಕೃಷಿ ಸಾಲದ ಮೊತ್ತ ₹10 ಲಕ್ಷ ಕೋಟಿ. ಅಂದರೆ ಒಟ್ಟು ಬ್ಯಾಂಕ್‌ ಸಾಲದ ಶೇ 13ರಿಂದ 14ರಷ್ಟು ಎಂದಿದೆ ಆರ್‌ಬಿಐ ವರದಿ. ಈ ಎರಡೂ ವರ್ಷಗಳಲ್ಲಿ ಉದ್ಯಮ ಅಥವಾ ಕಂಪನಿಗಳಿಗೆ ₹26–27 ಲಕ್ಷ ಕೋಟಿ ಸಾಲ ನೀಡಲಾಗಿದೆ. ಇದರ ಪ್ರಮಾಣ ಒಟ್ಟು ಬ್ಯಾಂಕ್ ಸಾಲದ ಶೇ 35ರಷ್ಟಾಗುತ್ತದೆ. ಎರಡೂ ಅವಧಿಯಲ್ಲಿ ₹5 ಕೋಟಿಗಿಂತ ಹೆಚ್ಚು ಮೊತ್ತದ ಸಾಲವನ್ನು ₹22 ಲಕ್ಷ ಕೋಟಿಯಷ್ಟು ನೀಡಲಾಗಿದೆ.

ಹತ್ತು ಕಂಪನಿಗಳಿಗೆ ನೀಡಿದ ಸಾಲ ₹7 ಲಕ್ಷ ಕೋಟಿ

ಅಂತರರಾಷ್ಟ್ರೀಯ ಹಣಕಾಸು ಸೇವಾ ಕಂಪನಿ ಕ್ರೆಡಿಟ್‌ ಸ್ಯೂಸ್ಸೆ ಲೆಕ್ಕಾಚಾರದ ಪ್ರಕಾರ, 2015ರ ಮಾರ್ಚ್‌ ವೇಳೆಗೆ ಪ್ರಮುಖ 10 ಕಂಪನಿಗಳಿಗೆ ಸುಮಾರು ₹7 ಲಕ್ಷ ಕೋಟಿ ಸಾಲ ನೀಡಲಾಗಿದೆ. ಇದು ಒಟ್ಟು ಬ್ಯಾಂಕ್ ಸಾಲದ ಶೇ 10ರಿಂದ 14ರಷ್ಟು ಮತ್ತು ಉದ್ಯಮಗಳಿಗೆ ನೀಡಲಾದ ಒಟ್ಟು ಸಾಲದ ಶೇ 27ರಷ್ಟಾಗುತ್ತದೆ.

ಇದೇ ಅವಧಿಯಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಒಟ್ಟು ₹7.7 ಲಕ್ಷ ಕೋಟಿ ಸಾಲ ನೀಡಲಾಗಿದೆ. ಅಂದರೆ, ಇಡೀ ದೇಶದ ಕೃಷಿಕರಿಗೆ ನೀಡಲಾದ ಒಟ್ಟು ಸಾಲದ ಮೊತ್ತ ಕೇವಲ 10 ಕಂಪನಿಗಳಿಗೆ ನೀಡಿದ ಸಾಲದ ಮೊತ್ತಕ್ಕಿಂತ ತುಸು ಹೆಚ್ಚು ಅಷ್ಟೆ.

ಹತ್ತು ಕಂಪನಿಗಳಿಗೆ ನೀಡಿದ ಸಾಲದ ಒಟ್ಟು ಮೊತ್ತ (2015ರ ಮಾರ್ಚ್‌ 31ರ ಪ್ರಕಾರ)

ಕಂಪನಿ ಹೆಸರು ಸಾಲದ ಮೊತ್ತ (ಕೋಟಿ ₹ಗಳಲ್ಲಿ)
ರಿಲಯನ್ಸ್‌ ಎಡಿಎಜಿ 125,000
ವೇದಾಂತ ಗ್ರೂಪ್ 103,000
ಎಸ್ಸಾರ್ ಗ್ರೂಪ್ 100,000
ಅದಾನಿ ಗ್ರೂಪ್ 96,000
ಜೇಪೀ ಗ್ರೂಪ್ 75,000
ಜೆಎಸ್‌ಡಬ್ಲ್ಯು ಗ್ರೂಪ್ 58,000
ಜಿಎಂಆರ್ ಗ್ರೂಪ್ 48,000
ಲ್ಯಾನ್ಕೊ 47,000
ವಿಡಿಯೊಕಾನ್ ಗ್ರೂಪ್ 45,000
ಜಿವಿಕೆ ಗ್ರೂಪ್ 34,000


ಹೆಚ್ಚುತ್ತಿದೆ ವಸೂಲಾಗದ ಸಾಲ

ಆರ್‌ಬಿಐ ಅಂಕಿಅಂಶಗಳ ಪ್ರಕಾರ, 2017 ಮಾರ್ಚ್ ಮತ್ತು 2018ರ ಮಾರ್ಚ್‌ ವೇಳೆಗೆ ವಸೂಲಾಗದ ಸಾಲದ ಮೊತ್ತ ಕ್ರಮವಾಗಿ ₹8 ಲಕ್ಷ ಕೋಟಿ ಮತ್ತು ₹10.3 ಲಕ್ಷ ಕೋಟಿ ಆಗಿದೆ. ಹೆಚ್ಚು ಮೊತ್ತದ ಸಾಲ ಪಡೆದು ಮರುಪಾವತಿ ಮಾಡದೇ ಇರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ವಸೂಲಾಗದ ಸಾಲದ ಪೈಕಿ 12 ಕಂಪನಿಗಳಿಗೆ ನೀಡಲಾದ ಸಾಲದ ಪ್ರಮಾಣವೇ ಶೇ 25ರಷ್ಟಿದೆ. ಈ ಬಗ್ಗೆ ಆರ್‌ಬಿಐಯು 2017ರ ಮಾರ್ಚ್‌ನಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣಕ್ಕೆ(ಸಾಲ ವಸೂಲಾತಿಗೆ ಸಂಬಂಧಿಸಿದ ಸಂಸ್ಥೆ) ದೂರು ನೀಡಿದೆ. ಈ ಪೈಕಿ ನಾಲ್ಕು ಕಂಪನಿಗಳ ಶೇ 52ರಷ್ಟು ಬಾಕಿಯನ್ನು ವಸೂಲಿ ಮಾಡಲಾಗಿದೆ. ಈ ವಸೂಲಾತಿಯು 12 ಕಂಪನಿಗಳ ಒಟ್ಟು ವಸೂಲಾಗದ ಸಾಲದ ಕೇವಲ ಶೇ 14ರಷ್ಟಾಗುತ್ತದೆ (₹48,300 ಕೋಟಿ).

ಕಂಪನಿಗಳ ಪರ ವಹಿಸುವ ಬ್ಯಾಂಕ್‌ಗಳು

ಐದು ಕಂಪನಿಗಳ ₹11,106 ಕೋಟಿ ಸಾಲವನ್ನು ಬ್ಯಾಂಕ್‌ಗಳು ವಜಾಮಾಡಿವೆ (ರಿಟನ್‌ಆಫ್‌ ಮಾಡುವುದು ಅಥವಾ ವಸೂಲಿ ಮಾಡಲು ಸಾಧ್ಯವಾಗದ ಸಾಲ ಎಂದು ಬ್ಯಾಲೆನ್ಸ್‌ಶೀಟ್‌ನಿಂದ ತೆಗೆದು ಹಾಕುವುದಕ್ಕೆ ಸಾಲ ವಜಾ ಮಾಡುವುದು ಎನ್ನುತ್ತಾರೆ. ಬ್ಯಾಂಕಿಂಗ್‌ ಭಾಷೆಯಲ್ಲಿ ಸಾಲ ವಜಾ ಎಂದರೆ, ಎನ್‌ಪಿಎ ಖಾತೆಗಳಿಗೆ ಬ್ಯಾಂಕ್‌ ತನ್ನ ಲಾಭದ ಶೇ 100ರಷ್ಟನ್ನು ತೆಗೆದು ಇರಿಸುವುದು ಎಂದರ್ಥ. ಇದರಿಂದ ಬ್ಯಾಂಕ್‌ನ ಲೆಕ್ಕಪತ್ರದಲ್ಲಿ ‘ಎನ್‌ಪಿಎ’ದ ಅಸ್ತಿತ್ವವೇ ಇರುವುದಿಲ್ಲ. ಇಂತಹ ಸಾಲ ವಜಾ ನಿರ್ಧಾರದಿಂದ ಬ್ಯಾಂಕ್‌ಗಳ ಲಾಭವೆಲ್ಲ ಕೊಚ್ಚಿಕೊಂಡು ಹೋಗುತ್ತದೆ). ಈ ಮೊತ್ತವು ಛತ್ತೀಸಗಡ ಮತ್ತು ಆಂಧ್ರಪ್ರದೇಶದಲ್ಲಿ ಮಾಡಿದ ಕೃಷಿ ಸಾಲ ಮನ್ನಾದ ಮೊತ್ತಕ್ಕಿಂತಲೂ (₹9,700 ಕೋಟಿ) ಹೆಚ್ಚು.

ಕೃಷಿ ಸಾಲದಿಂದಲೂ ಉದ್ಯಮಕ್ಕೇ ಹೆಚ್ಚು ಪ್ರಯೋಜನ!

ಆರ್‌ಬಿಐ ಅಂಕಿಅಂಶಗಳ ಪ್ರಕಾರ ಕೃಷಿ ಸಾಲದ ಪ್ರಮಾಣ ಈಚೆಗೆ ಹೆಚ್ಚಾಗುತ್ತಿರುವುದು ನಿಜ. ಆರ್ಥಿಕತೆಯ ಆದ್ಯತಾ ಕ್ಷೇತ್ರಗಳಿಗೆ ನಿಗದಿತ ಪ್ರಮಾಣದ ಸಾಲ ನೀಡಬೇಕು ಎಂದು ಆರ್‌ಬಿಐ ಮಾನದಂಡ ನಿಗದಿಪಡಿಸಿರುವುದರಿಂದ ಕೃಷಿ ಸಾಲ ನೀಡಿಕೆ ಪ್ರಮಾಣದಲ್ಲೂ ಹೆಚ್ಚಳ ಕಾಣಬಹುದಾಗಿದೆ. ಆದರೆ ಈ ಸಾಲ ಸಣ್ಣ ಮತ್ತು ಮಧ್ಯಮ ಕೃಷಿಕರ ಬದಲಾಗಿ ಕೃಷಿ ಸಂಬಂಧಿತ ಉದ್ಯಮ ಚಟುವಟಿಕೆಗಳಿಗೆ ದೊರೆಯುತ್ತಿರುವುದು ಗಮನಾರ್ಹ. ಕೃಷಿ ಕ್ಷೇತ್ರಕ್ಕೆ ₹10 ಲಕ್ಷಕ್ಕಿಂತ ಹೆಚ್ಚು ಮೊತ್ತದ ನೇರ ಸಾಲ ನೀಡಿಕೆ ಪ್ರಮಾಣ 1990ರಲ್ಲಿ ಶೇ 4.1ರಷ್ಟು ಇದ್ದುದು 2011ರಲ್ಲಿ ಶೇ 23.8ಕ್ಕೆ ತಲುಪಿದೆ. ಆದರೆ, ಸಣ್ಣ ಮೊತ್ತದ (₹2 ಲಕ್ಷ) ಸಾಲದ ಪ್ರಮಾಣ ಶೇ 92.2ರಿಂದ ಶೇ 48ಕ್ಕೆ ಇಳಿಕೆಯಾಗಿದೆ.

ಆಧಾರ: ಕೇಂದ್ರ ಹಣಕಾಸು ಸಚಿವಾಲಯದ 2014–15ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿ
ಆಧಾರ: ಕೇಂದ್ರ ಹಣಕಾಸು ಸಚಿವಾಲಯದ 2014–15ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿ

ರೈತರಿಗಿಲ್ಲ ಲಾಭ

ಆರ್ಥಿಕತೆಯ ಆದ್ಯತಾ ಕ್ಷೇತ್ರಗಳಿಗೆ ಆರ್‌ಬಿಐ ನಿಗದಿಪಡಿಸಿರುವ ಮಾನದಂಡವನ್ನು ಪೂರೈಸಲು ಹಣಕಾಸು ವರ್ಷದ ಕೊನೆಯಲ್ಲಿ ಬ್ಯಾಂಕ್‌ಗಳು ನೀಡುವ ಸಾಲದಿಂದ ಸಣ್ಣ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಈ ಸಾಲದಿಂದ ಕೃಷಿ ಕ್ಷೇತ್ರದ ಉದ್ಯಮಗಳಿಗಷ್ಟೇ ಪ್ರಯೋಜನವಾಗುತ್ತಿದೆ. ನಗರ ಪ್ರದೇಶದ ಬ್ಯಾಂಕ್‌ ಶಾಖೆಗಳಿಂದಲೇಇಂತಹ ಸಾಲಗಳು ಹೆಚ್ಚು ಪ್ರಮಾಣದಲ್ಲಿ ವಿತರಣೆಯಾಗಿರುವುದು ಗಮನಾರ್ಹ ಎಂದು ‘ರಿವ್ಯೂ ಆಫ್ ಅಗ್ರೇರಿಯನ್ಸ್ಟಡೀಸ್‌’ ತಾಣದಲ್ಲಿ ಪ್ರಕಟವಾಗಿರುವ ಸಂಶೋಧನಾ ಲೇಖನವೊಂದರಲ್ಲಿ ಉಲ್ಲೇಖವಾಗಿದೆ.

ಉದ್ಯಮಿಗಳು ಬಚಾವಾಗುತ್ತಾರೆ ಯಾಕೆ?

ಸಾಲ ಪಡೆದ ರೈತನ ಪರಿಸ್ಥಿತಿ ಯಾವುತ್ತೂ ಅನಿಶ್ಚಿತವಾಗಿಯೇ ಇರುತ್ತದೆ. ಆದರೆ ಉದ್ಯಮಿಗಳಿಗೆ ಹಾಗಲ್ಲ. ಪಡೆದ ಸಾಲವನ್ನು ತೀರಿಸಲಾಗದಿದ್ದಾಗ ದಿವಾಳಿ ಘೋಷಣೆ ಮಾಡಿಕೊಂಡು ಬಚಾವಾಗಲು ಅವಕಾಶವಿದೆ. ಇಂತಹ ಸಂದರ್ಭಗಳಲ್ಲಿ ಉದ್ಯಮಿಗಳು ಕೆಲವೊಮ್ಮೆ ಕಂಪನಿಯ ಆಸ್ತಿ ಕಳೆದುಕೊಳ್ಳಬೇಕಾಗಿ ಬಂದರೂ ಅವರ ವೈಯಕ್ತಿಕ ಆಸ್ತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ರೈತನಿಗೆ ಬೆಳೆಯ ಬೆಲೆ ಕುಸಿತ, ಪ್ರತಿಕೂಲ ಹವಾಮಾನದಿಂದ ಬೆಳೆ ನಷ್ಟ ಇಂತಹ ತೊಂದರೆಗಳಾದಾಗ ಬದುಕಿಗೆ ಬೇರೆ ಆರ್ಥಿಕ ಆಸರೆಗಳಿರುವುದಿಲ್ಲ.

ಮತ್ತೊಂದೆಡೆ, ಕೃಷಿ ಸಾಲ ಮನ್ನಾವು ರಾಜಕೀಯ ಪಕ್ಷಗಳ ಚುನಾವಣಾ ಘೋಷಣೆಗಳಾದ್ದರಿಂದ ಅದನ್ನು ಅನುಷ್ಠಾನ ಮಾಡಲು ಸರ್ಕಾರದ ಬೊಕ್ಕಸದಿಂದಲೇ ನೇರ ಪಾವತಿ ಮಾಡಬೇಕಾಗುತ್ತದೆ. ಆದರೆ, ಉದ್ಯಮ ಕ್ಷೇತ್ರದ ವಸೂಲಾಗದ ಸಾಲದಿಂದ ಸರ್ಕಾರದ ಬೊಕ್ಕಸಕ್ಕೆ ಪರೋಕ್ಷ ಹೊರೆಯಾಗುತ್ತದೆ. ಒಂದು ವೇಳೆ ವಸೂಲಾಗದ ಸಾಲ ಹೊಂದಿರುವ ಬ್ಯಾಂಕ್‌ಗಳಲ್ಲಿ ಸರ್ಕಾರ ಪುನರ್‌ಧನ ಹೂಡಿಕೆ ಮಾಡಿದಲ್ಲಿ ಅಥವಾಬಂಡವಾಳ ಮರುಭರ್ತಿ ಕ್ರಮ ಕೈಗೊಂಡಲ್ಲಿ ಮಾತ್ರ ಸರ್ಕಾರಕ್ಕೆ ಹೊರೆಯಾಗುತ್ತದೆ.

ವಸೂಲಿಯಾಗದ ಸಾಲದಿಂದ ಸಂಕಷ್ಟದಲ್ಲಿ ಬ್ಯಾಂಕ್‌ಗಳು

ವಸೂಲಿಯಾಗದ ಸಾಲವು ದಿನೇದಿನೇ ಹೆಚ್ಚುತ್ತಿರುವುದರಿಂದ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿಯೂ ಹದಗೆಟ್ಟಿದೆ.ವಸೂಲಿಯಾಗದೇ ಇರುವ ಸಾಲದಲ್ಲಿ ಗರಿಷ್ಠ ಪಾಲು ಕಾರ್ಪೊರೇಟ್‌ ವಲಯಕ್ಕೆ ಸೇರಿದ್ದಾಗಿದೆ. ಅದರಲ್ಲೂ ಭೂಷಣ್‌ ಸ್ಟೀಲ್‌, ಎಲೆಕ್ಟ್ರೋಸ್ಟ್ರೀಲ್‌, ಎಸ್ಸಾರ್‌ ಸ್ಟೀಲ್‌ನಂತಹ ಪ್ರತಿಷ್ಠಿತ ಕಂಪನಿಗಳೇ ದೊಡ್ಡ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿರುವುದು ಬ್ಯಾಂಕ್‌ಗಳಿಗೆ ತಲೆನೋವಾಗಿ ಪರಿಣಮಿಸಿದೆ.ಈ ಕಂಪನಿಗಳು ಸಾಲ ಮರುಪಾವತಿ ಮಾಡದೇ ಇರುವ ದಿವಾಳಿ ಸ್ಥಿತಿಗೇನೂ ತಲುಪಿಲ್ಲ. ಆದರೂ ಮರುಪಾವತಿ ಮಾಡುತ್ತಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ.ಸಾಮಾನ್ಯ ಗ್ರಾಹಕರು ಒಂದೆರಡು ತಿಂಗಳ ಕಂತು ಪಾವತಿಸದೇ ಇದ್ದರೆ ಅವರ ವಿರುದ್ಧ ಕ್ರಮ ಜರುಗಿಸುವ ಬ್ಯಾಂಕ್‌ಗಳು ಇಂತಹ ದೊಡ್ಡ ಕಂಪನಿಗಳ ದೊಡ್ಡ ಮೊತ್ತದ ಸಾಲವನ್ನು ಬೆಳೆಯಲು ಬಿಟ್ಟಿರುವುದೇಕೆ ಎಂಬ ಪ್ರಶ್ನೆಗಳೂ ಕೇಳಿಬರುತ್ತಿವೆ.

ಬ್ಯಾಂಕ್ ನಷ್ಟದ ಮೊತ್ತ (ಕೋಟಿ ₹ಗಳಲ್ಲಿ)
ಪಂಜಾಬ್‌ ನ್ಯಾಷನಲ್ ಬ್ಯಾಂಕ್ 14,000
ಐಡಿಬಿಐ ಬ್ಯಾಂಕ್ 8,238
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 6,547

2017–18ನೇ ಹಣಕಾಸು ವರ್ಷದಲ್ಲಿ 19 ಬ್ಯಾಂಕ್‌ಗಳ ನಷ್ಟದ ಪ್ರಮಾಣ ₹ 87,300 ಕೋಟಿ ದಾಟಿದೆ. ಈ ಹಣಕಾಸು ವರ್ಷದಲ್ಲಿಗರಿಷ್ಠ ಪ್ರಮಾಣದ ನಷ್ಟಕ್ಕೆ ಗುರಿಯಾಗಿದ್ದರೂ, ಅದಕ್ಕೂ ಹೆಚ್ಚಿನ ಮೊತ್ತದ ವಸೂಲಾಗದ ಸಾಲವನ್ನು ವಜಾ ಮಾಡಿವೆ.ಒಂದು ವರ್ಷದ ಅವಧಿಯಲ್ಲಿ ₹1.20 ಲಕ್ಷ ಕೋಟಿಯಷ್ಟು ವಸೂಲಾಗದ ಸಾಲವನ್ನು ವಜಾ ಮಾಡಲಾಗಿದೆ. ಇದು ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳಿಗೆ ಆಗಿರುವ ನಷ್ಟಕ್ಕಿಂತಲೂ ಒಂದೂವರೆ ಪಟ್ಟು ಹೆಚ್ಚಿದೆ.

ಅತಿ ಹೆಚ್ಚು ನಷ್ಟದಲ್ಲಿರುವ ಬ್ಯಾಂಕ್‌ಗಳಿವು (2017–18ನೇ ಹಣಕಾಸು ವರ್ಷದ ಲೆಕ್ಕಾಚಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT