ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕುಟೋದ್ಯಮ: ₹1,000 ಕೋಟಿ ನಷ್ಟ

ಕೋವಿಡ್‌ 19, ಹಕ್ಕಿಜ್ವರ ಪರಿಣಾಮ: ಶೇ 80ರಷ್ಟು ಕುಸಿದ ಕೋಳಿ ಮಾಂಸ ಮಾರಾಟ
Last Updated 16 ಮಾರ್ಚ್ 2020, 21:25 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಹಾಗೂ ಹಕ್ಕಿಜ್ವರದ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋಳಿ ಮಾಂಸದ ಮಾರಾಟ ಗಣನೀಯವಾಗಿ ಕಡಿಮೆಯಾಗಿದೆ. ಸಗಟು ಮಾರಾಟ ದರ ತೀವ್ರವಾಗಿ ಇಳಿದಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಅಲ್ಪ ಇಳಿಕೆಯಾಗಿದೆ.

‘ಕೋಳಿ ಮಾಂಸ ಮಾರಾಟ ಶೇ 80ರಷ್ಟು ಕುಸಿದಿದೆ. ದಿನಕ್ಕೆ 100 ಕೋಳಿ ವ್ಯಾಪಾರವಾಗುತ್ತಿದ್ದ ಅಂಗಡಿಗಳಲ್ಲಿ, 20ರಿಂದ 25 ಕೋಳಿಗಳು ಮಾತ್ರ ಮಾರಾಟವಾಗುತ್ತಿವೆ. ಕೋಳಿಗಳಿಂದ ಕೊರೊನಾ ಸೋಂಕು ಹರಡುತ್ತದೆ ಎಂಬ ಸುಳ್ಳು ಸುದ್ದಿಯಿಂದ ಕುಕ್ಕುಟೋದ್ಯಮಕ್ಕೆ ₹1,000 ಕೋಟಿಗೂ ಹೆಚ್ಚು ನಷ್ಟವಾಗಿದೆ. ಈ ಪ್ರಮಾಣದ ನಷ್ಟ ಉಂಟಾಗಿರುವುದು ಇತಿಹಾಸದಲ್ಲಿ ಇದೇ ಮೊದಲು’ ಎಂದು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಡಿ.ಕೆ. ಕಾಂತರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದಲ್ಲಿ ಸಾಮಾನ್ಯವಾಗಿ ಒಂದು ದಿನಕ್ಕೆ 1,400 ಟನ್‌ ಕೋಳಿ ಮಾಂಸ ಮಾರಾಟವಾಗುತ್ತಿತ್ತು. ಈಗ ಕೇವಲ 400 ಟನ್‌ ಮಾತ್ರ ಮಾರಾಟವಾಗುತ್ತಿದೆ. ಜೀವಂತ ಕೋಳಿ ಕೆ.ಜಿಗೆ ಸಗಟು ದರ ₹20ರಿಂದ ₹30 ಇದೆ.ಚಿಲ್ಲರೆ ಅಂಗಡಿಗಳಲ್ಲಿ ₹70ರಿಂದ ₹80ರಂತೆ ಮಾರಾಟ ಮಾಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

ನಗರದ ಸಗಟು ಮಾರುಕಟ್ಟೆಯಲ್ಲಿ ಮಾತ್ರ ಜೀವಂತ ಕೋಳಿಯನ್ನು ಈ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಆದರೆ, ಚಿಲ್ಲರೆ ಅಂಗಡಿಗಳಲ್ಲಿ ಕೋಳಿ ಮಾಂಸವನ್ನು ಕೆ.ಜಿಗೆ ₹160ರಿಂದ ₹170ರಂತೆ ಮಾರಾಟ ಮಾಡಲಾಗುತ್ತಿದೆ.

‘ಯಾವುದೇ ವದಂತಿ ಇದ್ದರೂ, ಡೀಲರ್‌ಗಳು ನಮಗೆ ಮಾಂಸವನ್ನು ₹140ರಿಂದ ₹150ರಂತೆ ನೀಡುತ್ತಿದ್ದಾರೆ. ಅಂಗಡಿಯ ನಿರ್ವಹಣೆ ಮತ್ತು ಸ್ವಚ್ಛತೆಯ ವೆಚ್ಚ ಸೇರಿ, ನಾವು ₹160ರಿಂದ ₹170ರಂತೆ ಮಾರಾಟ ಮಾಡುತ್ತಿದ್ದೇವೆ’ ಎಂದು ಆರ್.ಟಿ. ನಗರದ ಕೋಳಿ ಅಂಗಡಿ ವ್ಯಾಪಾರಿ ಸೈಯದ್‌ ಹೇಳಿದರು.

ಗಾಯದ ಮೇಲೆ ಬರೆ

‘ಮೈಸೂರು ಮತ್ತು ದಾವಣಗೆರೆಯಲ್ಲಿ ಹಕ್ಕಿಜ್ವರ ಪ್ರಕರಣ ವರದಿಯಾಗಿರುವ ಬೆನ್ನಲ್ಲೇ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕಾಲರಾ ಇರುವುದರಿಂದ ತರಕಾರಿ ಮಳಿಗೆಗಳು, ಹಣ್ಣಿನ ಅಂಗಡಿ, ಕೋಳಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಇಂತಹ ಪ್ರಕರಣದಿಂದಲೂ ಕುಕ್ಕುಟೋದ್ಯಮಕ್ಕೆ ಹೊಡೆತ ಬಿದ್ದಿದೆ’ ಎಂದುಪಶುವೈದ್ಯ ತಜ್ಞರ ಸಂಘದ ಅಧ್ಯಕ್ಷ ಪ್ರೊ. ಜಿ. ದೇವೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇರಳದಲ್ಲಿ ಹಕ್ಕಿಜ್ವರ ಕಂಡು ಬಂದಿದೆ. ಒಂದು ಕಿ.ಮೀ. ವ್ಯಾಪ್ತಿಯಲ್ಲಿನ ಎಲ್ಲ ಕೋಳಿಗಳನ್ನು ನಾಶ ಮಾಡಬೇಕು ಎಂಬ ನಿಯಮವಿದೆ. ಜಿಲ್ಲಾಧಿಕಾರಿಗಳು ಈ ಕುರಿತು ಆದೇಶ ನೀಡುತ್ತಾರೆ. ಆದರೆ, ಬೆಂಗಳೂರು ನಗರದಲ್ಲಿ ಈವರೆಗೆ ಹಕ್ಕಿಜ್ವರ ಕಂಡುಬಂದಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT