ಶನಿವಾರ, ಏಪ್ರಿಲ್ 17, 2021
31 °C

ನಿವೃತ್ತಿ ಜೀವನಕ್ಕಿರಲಿ ವಿಸ್ತರಿತ ಪಿಂಚಣಿ

ಸಮಿತ್‌ ಉಪಾಧ್ಯಾಯ Updated:

ಅಕ್ಷರ ಗಾತ್ರ : | |

ಇಳಿಕೆಯಾಗುತ್ತಿರುವ ಬಡ್ಡಿ ದರದ ಜೊತೆಗೆ ದೀರ್ಘವಾಗುತ್ತಿರುವ ಜೀವಿತಾವಧಿಯು ನಿವೃತ್ತಿಯ ನಂತರದ ಜೀವನದ ಆರ್ಥಿಕ ಭದ್ರತೆಗೆ ದೊಡ್ಡ ಸವಾಲಾಗುತ್ತಿವೆ.  ನಿವೃತ್ತಿಯ ನಂತರದ ಜೀವನದ ಬಗ್ಗೆ ಚರ್ಚಿಸಲು ಇದು ಸೂಕ್ತ ಸಮಯವಾಗಿದೆ. 1990ರ ದಶಕದಲ್ಲಿ ದೇಶದಲ್ಲಿ ಉದಾರೀಕರಣ ಜಾರಿಗೆ ಬಂತು. ಆ ಸಂದರ್ಭದಲ್ಲಿ ವೃತ್ತಿ ಜೀವನ ಆರಂಭಿಸಿದವರು ಈಗ 40ರಿಂದ 50ವರ್ಷ ವಯಸ್ಸಿನ ಆಸುಪಾಸಿನಲ್ಲಿದ್ದಾರೆ. ಇದು, ಕೊಳ್ಳುಬಾಕ ಸಂಸ್ಕೃತಿಯನ್ನು ಮತ್ತು ಉದಾರೀಕರಣದ ಫಲವನ್ನು ಅನುಭವಿಸಿದ ಮೊದಲ ತಲೆಮಾರು. ಈ ತಲೆಮಾರು ಹಿಂದಿನ ತಲೆಮಾರು ಅನುಭವಿಸಿದ್ದಕ್ಕಿಂತ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯವನ್ನು ಸಹ ಅನುಭವಿಸಿದೆ. ಈಗ ಈ ತಲೆಮಾರಿನವರ ತಲೆಕೂದಲುಗಳು ಬೆಳ್ಳಗಾಗುತ್ತಿವೆ. ಜೊತೆ ಜೊತೆಗೆ ತಲೆ ಕೆಡಿಸಿಕೊಳ್ಳಬೇಕಾದಂತಹ ಕೆಲವು ಪ್ರಶ್ನೆಗಳೂ ಇವರಿಗೆ ಎದುರಾಗುತ್ತಿವೆ.

 ಹಿಂದಿನ ತಲೆಮಾರಿನವರು ಉಳಿತಾಯದ ಹಣವನ್ನು ನಿಶ್ಚಿತ ಠೇವಣಿ ಇಟ್ಟು, ಅದಕ್ಕೆ ಹೆಚ್ಚಿನ ಬಡ್ಡಿ ದರ ಪಡೆಯುತ್ತಿದ್ದರು. ನಿವೃತ್ತಿಯ ಸಮೀಪದಲ್ಲಿರುವ ಈಗಿನವರು ಅದೇ ಹೂಡಿಕಾ ವಿಧಾನ ಅನುಸರಿಸುವುದು ಅವರ ಪಾಲಿಗೆ ಅಷ್ಟೇನೂ ಉಪಯುಕ್ತವಾಗಿಲ್ಲ.

23 ವರ್ಷಗಳ ಹಿಂದೆ, ವಾರ್ಷಿಕ ಶೇ 14ರಷ್ಟು ಗಳಿಕೆ ತಂದುಕೊಡುತ್ತಿದ್ದ ಸರ್ಕಾರಿ ಬಾಂಡ್‌ಗಳು ಈಗ ಶೇ 6 ರಿಂದ 8ರಷ್ಟು ಗಳಿಕೆ ಮಾಡುತ್ತಿವೆ. ನಿಶ್ಚಿತ ಠೇವಣಿ ಬಡ್ಡಿ ದರವೂ ಇದೇ ಪ್ರಮಾಣದಲ್ಲಿ ಕಡಿಮೆಯಾಗಿದೆ. 2030ರ ವೇಳೆಗೆ ಪರಿಸ್ಥಿತಿ ಏನಾಗಬಹುದು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ನಿವೃತ್ತಿಯ ನಂತರದ ಜೀವನಕ್ಕಾಗಿ ಮಾಡಿಟ್ಟ ಉಳಿತಾಯವು ನಿರೀಕ್ಷಿಸಿದ ಪ್ರಮಾಣದಲ್ಲಿ ಬಡ್ಡಿಯನ್ನು ತಂದುಕೊಡಲಾರದು. ಇತ್ತೀಚಿನ ಕೆಲವು ವರ್ಷಗಳಿಂದ ಮಾನವನ ಜೀವಿತಾವಧಿಯೂ ಹೆಚ್ಚಾಗುತ್ತಿದೆ. ಹೀಗಾಗಿ 1990ರ ಆಸುಪಾಸಿನಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ತಲೆಮಾರು 2050ರವರೆಗೂ ಬದುಕಿರುವ ಸಾಧ್ಯತೆ ಇದೆ.

ಕಳೆದ ಎರಡು ದಶಕಗಳಿಂದ ಬಡ್ಡಿದರವು ಕಂಡಿರುವ ಕುಸಿತವನ್ನೇ ಮುಂದಿನ ವರ್ಷಗಳಲ್ಲೂ ಕಾಣುತ್ತಾ ಹೋದರೆ ನಿಶ್ಚಿತ ಠೇವಣಿಯ ಬಡ್ಡಿಯನ್ನೇ ನಂಬಿ ಬದುಕು ನಡೆಸುವ ಲೆಕ್ಕಾಚಾರ ಹಾಕಿದವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ.

ಹಾಗಾದರೆ, ಬಡ್ಡಿ ದರ ಕುಸಿತ ಹಾಗೂ ಜೀವತಾವಧಿ ದೀರ್ಘಗೊಳ್ಳುವುದರಿಂದ ಬರಬಹುದಾದ ಅಪಾಯಗಳಿಂದ ರಕ್ಷಿಸಿಕೊಳ್ಳಲು ಯಾವುದಾದರೂ ಮಾರ್ಗ ಇದೆಯೇ. ಖಂಡಿತವಾಗಿಯೂ ಇದೆ. ಜೀವ ವಿಮಾ ಸಂಸ್ಥೆಗಳು ನೀಡುವ  ‘ತಕ್ಷಣದಿಂದ ಜಾರಿಯಾಗುವ ವರ್ಷಾಶನ’ ಯೋಜನೆಗಳು ಈ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ನೀಡಬಲ್ಲವು.

ಇಂಥ ಯೋಜನೆಗಳನ್ನು ಖರೀದಿಸುವ ಗ್ರಾಹಕರಿಗೆ ಈ ವಿಮೆ ಸಂಸ್ಥೆಗಳು ಹೂಡಿಕೆ ಆರಂಭಿಸುವಾಗಲೇ ಜೀವಿತಾವಧಿಯವರೆಗೂ ಮಾಸಿಕ ಅಥವಾ ವಾರ್ಷಿಕ ಗಳಿಕೆಯ ಭರವಸೆಯನ್ನು ನೀಡುತ್ತವೆ. ಇಂಥ ಕೆಲವು ಯೋಜನೆಗಳು ಹೂಡಿಕೆದಾರರು ಬೇಗನೆ ನಿಧನ ಹೊಂದಿದರೆ ಅವರ ಪತ್ನಿಗೂ ಹಣವನ್ನು ನೀಡುತ್ತವೆ.

ಈ ಯೋಜನೆಗಳು ದಶಕಗಳಿಂದ ಜಾರಿಯಲ್ಲಿವೆ. ಇವುಗಳಲ್ಲಿ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ನೌಕರರಿಗೆ ಕಡ್ಡಾಯಗೊಳಿಸಲಾಗಿದೆ. ಆದರೆ ಮುಂದಿನ 5ರಿಂದ 10ವರ್ಷಗಳಲ್ಲಿ ನಿವೃತ್ತಿ ಹೊಂದಲಿರುವ ತಲೆಮಾರಿಗೆ ಈ ಯೋಜನೆಗಳು ಅಷ್ಟೊಂದು ಲಾಭದಾಯಕ ಎನಿಸಲಾರವು. ನಿವೃತ್ತಿಯ ನಂತರ ಹಣ ಬರುವುದನ್ನು ಇವರು ನಿರೀಕ್ಷಿಸುತ್ತಾರೆ. ಆದರೆ, ಎಷ್ಟು ಹಣ ಬರುತ್ತದೆ ಎಂಬುದನ್ನು ಈಗಲೇ ನಿಖರವಾಗಿ ತಿಳಿದುಕೊಳ್ಳಲು ಇವರು ಇಚ್ಛಿಸುತ್ತಾರೆ.

ವಿಸ್ತರಿತ ಪಿಂಚಣಿ ಯೋಜನೆ

ಈ ಅಗತ್ಯವನ್ನು ಈಡೇರಿಸಲು ಕೆಲವು ವಿಮಾ ಸಂಸ್ಥೆಗಳು ‘ವಿಸ್ತರಿತ ಅಥವಾ ಮುಂದೂಡಿದ ಪಿಂಚಣಿ’ (deferred annuity) ಯೋಜನೆ ಆರಂಭಿಸಿವೆ. ಇಂಥ ಯೋಜನೆಗಳು ನಿವೃತ್ತಿ ಹೊಂದುವ ವೇಳೆಯಲ್ಲಿ ಎಷ್ಟು ಹಣ ಬರುತ್ತದೆ ಎಂಬುದನ್ನು ಹೂಡಿಕೆ ಆರಂಭಿಸುವಾಗಲೇ ನಿಖರವಾಗಿ ಹೇಳುತ್ತವೆ. ಹೂಡಿಕೆದಾರರು ನಿಗದಿಪಡಿಸಿದ ದಿನದಿಂದ ಆರಂಭಿಸಿ ಜೀವನಪರ್ಯಂತ ಪ್ರತಿ ವರ್ಷ ಎಷ್ಟು ಹಣ ಬರುತ್ತದೆ ಎಂಬುದನ್ನು ಇವು ಮೊದಲೇ ತಿಳಿಸುತ್ತವೆ.

50 ವರ್ಷ ವಯಸ್ಸಿನ ಹೂಡಿಕೆದಾರರೊಬ್ಬರ ಉದಾಹರಣೆಯನ್ನೇ ತೆಗೆದುಕೊಳ್ಳೋಣ. 10ವರ್ಷದ ಬಳಿಕ ನಿವೃತ್ತಿಯಾಗಲಿರುವ ಇವರು ವಿಸ್ತರಿತ ಪಿಂಚಣಿ ವಿಮೆಯಲ್ಲಿ ಈಗ ₹ 10 ಲಕ್ಷ ಹೂಡಿಕೆ ಮಾಡಿದರೆ, ನಿವೃತ್ತಿಯಾದ ಮರುದಿನದಿಂದ ಆರಂಭಿಸಿ ಜೀವಿತಾವಧಿಯವರೆಗೂ ವಾರ್ಷಿಕ ₹ 1.32ಲಕ್ಷ (ಶೇ 13.2ರ ಬಡ್ಡಿ ದರದಲ್ಲಿ ) ಪಡೆಯುತ್ತಲೇ ಇರಬಹುದು.

ಆ ಗ್ರಾಹಕರು ದೊಡ್ಡ ನಿಧಿಯನ್ನು ಕ್ರೋಡೀಕರಿಸಿ, ನಂತರ ಇಂತಹ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವುದಾದರೆ ಇನ್ನೊಂದು ಆಯ್ಕೆಯನ್ನೂ ಪರಿಗಣಿಸಬಹುದು. ಅದು ಏನೆಂದರೆ– ₹ 10 ಲಕ್ಷವನ್ನು ಈಗ ಯಾವುದಾದರೂ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದು (10 ವರ್ಷಗಳಲ್ಲಿ ಅದು ದ್ವಿಗುಣವಾಗುತ್ತದೆ). ತಾವು ನಿವೃತ್ತಿ ಹೊಂದುವಾಗ ಈ ₹ 20 ಲಕ್ಷವನ್ನು ಅದೇ ವರ್ಷದಿಂದ ಪಿಂಚಣೆ ಜಾರಿಯಾಗುವಂತಹ ಯೋಜನೆಯಲ್ಲಿ ಹೂಡಿಕೆ ಮಾಡುವುದು.

ಆದರೆ, ಈ ಯೋಜನೆಯಲ್ಲಿ ಒಂದು ಅಪಾಯವಿದೆ. ಇಂತಹ ಯೋಜನೆಗಳಿಗೆ ಸದ್ಯಕ್ಕೆ ವಾರ್ಷಿಕ ಶೇ 6.8 ರಿಂದ ಶೇ 6.9ರಷ್ಟು ಬಡ್ಡಿ ನೀಡಲಾಗುತ್ತಿದೆ. 2029ರ ವೇಳೆಗೆ ಬಡ್ಡಿಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯೂ ಇದೆ. ಬಡ್ಡಿಯ ಪ್ರಮಾಣವು ಶೇ 6ಕ್ಕೆ ಕುಸಿದರೂ, ₹ 20 ಲಕ್ಷಕ್ಕೆ ವಾರ್ಷಿಕ ಕೇವಲ ₹ 1.20ಲಕ್ಷ ಪಿಂಚಣಿ ಬರುತ್ತದೆ. ಅಂದರೆ ಈಗಲೆ ₹ 10 ಲಕ್ಷ ಹೂಡಿಕೆ ಮಾಡಿದರೆ ಬರುವ (₹ 1.32ಲಕ್ಷ) ಮೊತ್ತಕ್ಕಿಂತ ಕಡಿಮೆ. ಬಡ್ಡಿ ದರವು ಅದಕ್ಕಿಂತ ಇಳಿಕೆಯಾದರೆ ಬರಬಹುದಾದ ಅಪಾಯವನ್ನು ಯಾರಾದರೂ ಊಹಿಸಬಹುದಾಗಿದೆ.

ಆದ್ದರಿಂದ ನಿವೃತ್ತಿಯ ಸಮೀಪ ಬಂದಿರುವ, ಆರ್ಥಿಕವಾಗಿ ಸ್ವತಂತ್ರರಾಗಿರುವ ತಲೆಮಾರಿಗೆ ನೀಡಬಹುದಾದ ವಿವೇಕಯುತವಾದ ಸಲಹೆ ಏನೆಂದರೆ, ‘ತಮ್ಮ ಉಳಿತಾಯದಲ್ಲಿ ಒಂದಷ್ಟು ಹಣವನ್ನು ಈಗಲೇ ನಿವೃತ್ತಿಯ ನಂತರದ ವಿಮಾ ಯೋಜನೆಯಲ್ಲಿ (ವಿಸ್ತರಿತ ಪಿಂಚಣಿ ಯೋಜನೆ) ತೊಡಗಿಸಿ’ ಎಂಬುದು. ಅನೇಕ ‘ಮೊದಲು’ಗಳಿಗೆ ಸಾಕ್ಷಿಯಾಗಿರುವ ಈ ತಲೆಮಾರು ಭವಿಷ್ಯಕ್ಕಾಗಿ ಸ್ವಲ್ಪ ಉಳಿತಾಯವನ್ನಷ್ಟೇ ಮಾಡಿಲ್ಲ. ಜತೆಗೆ ನಿವೃತ್ತಿ ನಂತರದ ಜೀವನವನ್ನೂ ಭದ್ರಪಡಿಸಿಕೊಂಡಿದೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿ.

(ಲೇಖಕ: ಟಾಟಾ ಎಐಜಿ ಲೈಫ್‌ ಇನ್ಶುರೆನ್ಸ್‌ನ ಚೀಫ್‌ ರಿಸ್ಕ್‌ ಆಫೀಸರ್‌)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು