ಮಡಿಕೇರಿ: ಈ ವರ್ಷ ಉಷ್ಣಾಂಶ ಹೆಚ್ಚಿದ್ದು, ಕಾಳುಮೆಣಸಿನ ಇಳುವರಿ ಕುಸಿಯುವ ಲಕ್ಷಣಗಳು ಗೋಚರಿಸುತ್ತಿವೆ. ಬಳ್ಳಿಗಳಲ್ಲಿ ಕಾಳು ಕಟ್ಟುವುದು ತಡವಾಗಿರುವುದರಿಂದ ಬೆಳೆಗಾರರಲ್ಲಿ ಆತಂಕ ಹೆಚ್ಚಿದೆ.
ದೇಶದಲ್ಲಿ ಕಾಳುಮೆಣಸು ಬೆಳೆಯುವ ರಾಜ್ಯಗಳ ಪೈಕಿ ಕರ್ನಾಟಕವು (5.49 ಲಕ್ಷ ಎಕರೆ) ಮೊದಲ ಸ್ಥಾನದಲ್ಲಿದೆ. ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿಹೆಚ್ಚಾಗಿ ಬೆಳೆಯಲಾಗುತ್ತದೆ.
ಉತ್ತಮ ನೀರಾವರಿ ಸೌಲಭ್ಯ ಇರುವ ಪ್ರದೇಶದಲ್ಲಿ ಆತಂಕದ ಸನ್ನಿವೇಶವಿಲ್ಲ. ಆದರೆ, ಹಲವೆಡೆ ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿ, ಕೊಳವೆಬಾವಿಗಳು ಬತ್ತಿದ್ದವು. ತೋಟಗಳಲ್ಲಿದ್ದ ಕೆರೆ–ಕಟ್ಟೆಗಳೂ ಒಣಗಿದ್ದವು. ಸಮರ್ಪಕವಾಗಿ ನೀರು ಹಾಯಿಸದ ಅಂಥ ತೋಟಗಳ ಕಾಳುಮೆಣಸಿನ ಬಳ್ಳಿಗಳಲ್ಲಿ ಕಾಳು ಕಟ್ಟುವಿಕೆ ಕಡಿಮೆಯಾಗಿದೆ.
‘ಬಳ್ಳಿಗಳಿಗೆ ಕಾಡುವ ರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ಸಿಂಪಡಿಸುವುದು ಸೇರಿ ಹಲವು ಪ್ರಯತ್ನ ಮಾಡಿದ್ದೆವು. ಆದರೆ, ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಇಳುವರಿ ಇಳಿಮುಖವಾಗಿದೆ’ ಎಂದು ಬಲ್ಲಮಾವಟಿ ಗ್ರಾಮದ ಕೃಷಿಕ ಹೊಸೊಕ್ಲು ಮುತ್ತಪ್ಪ ನೋವು ತೋಡಿಕೊಂಡರು.
‘ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಿತ್ತು. ಹಲವು ವಾರ ಮಳೆಯಾಗಲಿಲ್ಲ. ಲಭ್ಯ ನೀರು ಕೂಡ ಬೆಳೆಗಾರರಿಗೆ ಸಾಕಾಗಲಿಲ್ಲ’ ಎಂದು ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಯೋಗೇಶ್ ತಿಳಿಸಿದರು.
‘ಕೊಡಗಷ್ಟೇ ಅಲ್ಲದೆ ಬೇಸಿಗೆಯಲ್ಲಿ ನೀರಿನ ಕೊರತೆ ತಲೆದೋರಿದ ಪ್ರದೇಶಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ’ ಎಂದು ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಎಸ್.ಜೆ. ಅಂಕೇಗೌಡ ಹೇಳುತ್ತಾರೆ.
ಕಾಳು ಕಟ್ಟದಿರಲು ಉಷ್ಣಾಂಶ ಹೆಚ್ಚಳವೇ ಕಾರಣ ನೀರು–ಮಣ್ಣು ಸಂರಕ್ಷಿಸಿಕೊಳ್ಳುವುದೇ ಏಕೈಕ ದಾರಿ
ಅಂಕಿಅಂಶಗಳು ದೇಶದಲ್ಲಿ ಕಾಳುಮೆಣಸು ಬೆಳೆಯುವ ರಾಜ್ಯಗಳು ರಾಜ್ಯ;ವಿಸ್ತೀರ್ಣ (ಎಕರೆಗಳಲ್ಲಿ) ಕರ್ನಾಟಕ;5.49 ಲಕ್ಷ ಕೇರಳ;1.81 ಲಕ್ಷ ತಮಿಳುನಾಡು;18906 *** ರಾಜ್ಯದಲ್ಲಿ ಅತಿ ಹೆಚ್ಚು ಕಾಳುಮೆಣಸು ಬೆಳೆಯುವ ಮೊದಲ 3 ಜಿಲ್ಲೆಗಳು ಜಿಲ್ಲೆ;ವಿಸ್ತೀರ್ಣ (ಎಕರೆಗಳಲ್ಲಿ) ಕೊಡಗು;2.42 ಲಕ್ಷ ಚಿಕ್ಕಮಗಳೂರು;1.21 ಲಕ್ಷ ಹಾಸನ;86304 *** (ಆಧಾರ; ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.