ಗುರುವಾರ , ಸೆಪ್ಟೆಂಬರ್ 19, 2019
26 °C
ಬಂಡವಾಳ ಹೂಡಿಕೆಗೆ ಉತ್ತೇಜನ

ಕೊನೆಗೂ ಎಚ್ಚೆತ್ತ ಸರ್ಕಾರ l ಆರ್ಥಿಕತೆಗೆ ಭಾರಿ ಕೊಡುಗೆ: ಗೃಹ, ವಾಹನ ಸಾಲ ಅಗ್ಗ

Published:
Updated:
Prajavani

ನವದೆಹಲಿ: ಕುಂಠಿತ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆಯ ಪುನಶ್ಚೇತನಕ್ಕೆ ಕೊನೆಗೂ ಮುಂದಾಗಿರುವ ಕೇಂದ್ರ ಸರ್ಕಾರವು ಶುಕ್ರವಾರ ಹಲವಾರು ಕ್ರಮಗಳನ್ನು ಪ್ರಕಟಿಸಿದೆ.

ಕಡಿಮೆ ಬಡ್ಡಿ ದರಕ್ಕೆ ಗೃಹ– ವಾಹನ ಖರೀದಿ, ಕಡಿಮೆಯಾಗಲಿರುವ ಸಾಲದ ತಿಂಗಳ ಸಮಾನ ಕಂತು (ಇವಿಎಂ), ಮೂಲಸೌಕರ್ಯ ಮತ್ತು ಗೃಹ ನಿರ್ಮಾಣ ಯೋಜನೆಗಳಿಗೆ ಸಾಲ ಸೌಲಭ್ಯ, ವಿದೇಶಿ ಹೂಡಿಕೆದಾರರ ಮೇಲಿನ ಸರ್ಚಾರ್ಜ್‌ ರದ್ದು, ಜಿಎಸ್‌ಟಿ ವ್ಯವಸ್ಥೆ ಸರಳೀಕರಣ, ವಿವಿಧ ವಲಯಗಳಿಗೆ ಸಾಲದ ನೆರವು ಹೆಚ್ಚಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ತಕ್ಷಣವೇ ₹ 70 ಸಾವಿರ ಕೋಟಿ ಬಿಡುಗಡೆ, ವಾಹನ ಮಾರಾಟಕ್ಕೆ ಉತ್ತೇಜನ, ನವೋದ್ಯಮಗಳಿಗೆ ತೆರಿಗೆ ವಿನಾಯ್ತಿ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಲು ಮುಂದಾಗಿದೆ.

‘ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯವು ಈಗ ₹ 5 ಲಕ್ಷ ಕೋಟಿಗೆ ಏರಿಕೆಯಾಗಲಿದೆ. ರೆಪೊ ದರ ಆಧರಿಸಿ ಗೃಹ, ವಾಹನ ಖರೀದಿ ಸಾಲಗಳ ಮೇಲಿನ ಬಡ್ಡಿ ದರ ತಗ್ಗಿಸಲು ಬ್ಯಾಂಕ್‌ಗಳು ನಿರ್ಧರಿಸಿವೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಎಫ್‌ಪಿಐ ಸರ್ಚಾರ್ಜ್‌ ರದ್ದು

ಸಾಗರೋತ್ತರ ಹೂಡಿಕೆದಾರರ (ಎಫ್‌ಪಿಐ) ಬೇಡಿಕೆಗೆ ಕೊನೆಗೂ ಮಣಿದಿರುವ ಕೇಂದ್ರ ಸರ್ಕಾರವು, ಸರ್ಚಾರ್ಜ್‌ ಹೆಚ್ಚಳದ ಬಜೆಟ್‌ ಪ್ರಸ್ತಾವಗಳನ್ನು ರದ್ದುಪಡಿದೆ.

‘ಷೇರುಗಳ ವರ್ಗಾವಣೆಯ ಅಲ್ಪಾವಧಿ ಮತ್ತು ದೀರ್ಘಾವಧಿ ಲಾಭ ಗಳಿಕೆ ಮೇಲಿನ ಸರ್ಚಾರ್ಜ್‌ ಹಿಂತೆಗೆದುಕೊಳ್ಳಲಾಗಿದೆ. ಬಜೆಟ್‌ ಮುಂಚಿನ ಪರಿಸ್ಥಿತಿಯೇ ಇನ್ನು ಮುಂದೆಯೂ ಮುಂದುವರಿಯಲಿದೆ. ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಉತ್ತೇಜಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ನಿರ್ಮಲಾ ಹೇಳಿದ್ದಾರೆ.

ಸರ್ಚಾರ್ಜ್‌ ಹೆಚ್ಚಳದಿಂದ ₹ 2 ರಿಂದ ₹ 5 ಕೋಟಿ ವಾರ್ಷಿಕ ಆದಾಯ ಹೊಂದಿದವರ ಮೇಲಿನ ಆದಾಯ ತೆರಿಗೆ ಹೊರೆಯು ಶೇ 39ರಷ್ಟು ಮತ್ತು ₹ 5 ಕೋಟಿಗಿಂತ ಹೆಚ್ಚಿನ ವರಮಾನದವರಿಗೆ ಶೇ 42.7ರವರೆಗೆ ಹೆಚ್ಚಳಗೊಂಡಿತ್ತು.

ಸರ್ಚಾರ್ಜ್‌ ವಿಧಿಸುವ ಬಜೆಟ್‌ ಪ್ರಸ್ತಾವನೆಯು ವಿದೇಶಿ ಹೂಡಿಕೆದಾರರನ್ನು ನಿರುತ್ಸಾಹಗೊಳಿಸಿತ್ತು. ಷೇರುಪೇಟೆಯ ವಹಿವಾಟು ನಿರಂತರ ಕುಸಿತ ಕಾಣುತ್ತ ಬಂದಿತ್ತು.

ಪ್ರಮುಖ ಉತ್ತೇಜನ ಕೊಡುಗೆಗಳು

* ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ತಕ್ಷಣ ₹ 70 ಸಾವಿರ ಕೋಟಿ ಬಿಡುಗಡೆ

* ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಬಾಕಿ ಇರುವ ಜಿಎಸ್‌ಟಿ ಮರುಪಾವತಿ 30 ದಿನಗಳಲ್ಲಿ ಪೂರ್ಣ

* ಗೃಹ ನಿರ್ಮಾಣ ಹಣಕಾಸು ಕಂಪನಿಗಳಿಗೆ ನ್ಯಾಷನಲ್‌ ಹೌಸಿಂಗ್‌ ಬ್ಯಾಂಕ್‌ನಿಂದ (ಎನ್‌ಎಚ್‌ಬಿ) ಹೆಚ್ಚುವರಿಯಾಗಿ ₹ 20 ಸಾವಿರ ಕೋಟಿ ನೆರವು

* ಸ್ಟಾರ್ಟ್‌ಅಪ್‌ಗಳು ಮತ್ತು ಸ್ಟಾರ್ಟ್‌ಅಪ್‌ ಹೂಡಿಕೆದಾರರಿಗೆ ಏಂಜೆಲ್‌ ಟ್ಯಾಕ್ಸ್‌ ರದ್ದು

* ಸ್ಟಾರ್ಟ್‌ಅಪ್‌ಗಳ ಸಮಸ್ಯೆ ಬಗೆಹರಿಸಲು ನೇರ ತೆರಿಗೆ ಕೇಂದ್ರೀಯ ಮಂಡಳಿಯಲ್ಲಿ (ಸಿಬಿಡಿಟಿ) ಪ್ರತ್ಯೇಕ ಘಟಕ

* ಷೇರುಪೇಟೆಯಲ್ಲಿ ಬಂಡವಾಳ ಹೂಡಿಕೆ ಉತ್ತೇಜಿಸಲು ಸರ್ಚಾರ್ಜ್‌ ಹೆಚ್ಚಳ ರದ್ದು

* ಹೊಸ ವಾಹನ ಖರೀದಿಗೆ ಸರ್ಕಾರಿ ಇಲಾಖೆಗಳಿಗೆ ಇದ್ದ ನಿರ್ಬಂಧ ತೆರವು

* ಒಂದು ಬಾರಿಗೆ ನೋಂದಣಿ ಶುಲ್ಕದ ಪರಿಷ್ಕರಣೆಯನ್ನು 2020ರ ಜೂನ್‌ವರೆಗೆ ಮುಂದೂಡಿಕೆ

* ವಿದ್ಯುತ್‌ ಚಾಲಿತ (ಇವಿ) ಮತ್ತು ಅಂತರ್‌ದಹನ ಎಂಜಿನ್‌ ವಾಹನಗಳ (ಐಸಿವಿ) ನೋಂದಣಿ ಮುಂದುವರಿಕೆ

* ಮೂಲಸೌಕರ್ಯ ಯೋಜನೆ ತ್ವರಿತಕ್ಕೆ ಕಾರ್ಯಪಡೆ

Post Comments (+)