ಶನಿವಾರ, ಜನವರಿ 16, 2021
18 °C

ಚೇತರಿಕೆಯ ಹಾದಿಯಲ್ಲಿ ಅರ್ಥ ವ್ಯವಸ್ಥೆ

ಅನ್ನಪೂರ್ಣಾ ಸಿಂಗ್ Updated:

ಅಕ್ಷರ ಗಾತ್ರ : | |

ನವದೆಹಲಿ: ಹೊಸ ಸ್ವರೂಪದ ಕೊರೊನಾ ವೈರಾಣು, ಯುರೋಪಿನ ಅಲ್ಲಲ್ಲಿ ಜಾರಿಯಾಗುತ್ತಿರುವ ಲಾಕ್‌ಡೌನ್‌ ಜಾಗತಿಕ ಅರ್ಥವ್ಯವಸ್ಥೆಯ ಚೇತರಿಕೆಗೆ ಬೆದರಿಕೆಯಾಗಿ ಪರಿಣಮಿಸಿರುವುದರ ನಡುವೆಯೇ, ಭಾರತದ ಅರ್ಥ ವ್ಯವಸ್ಥೆಯ ಪ್ರಮುಖ ಸೂಚಕಗಳು ಚೇತರಿಕೆಯನ್ನು ತೋರಿಸುತ್ತಿವೆ. ತಯಾರಿಕೆ, ಉಕ್ಕು ಬೇಡಿಕೆ, ವಾಹನಗಳ ನೋಂದಣಿ, ಇ–ವೇ ಬಿಲ್‌, ಜಿಎಸ್‌ಟಿ ಸಂಗ್ರಹ, ಪೆಟ್ರೋಲ್ ಬಳಕೆ ಮತ್ತು ರಫ್ತು ಏರಿಕೆ ಹಾದಿಯಲ್ಲಿ ಇವೆ. ಇವುಗಳಲ್ಲಿ ಕೆಲವು ಡಿಸೆಂಬರ್‌ನಲ್ಲಿ ಕೋವಿಡ್ ಪೂರ್ವದ ಹಂತವನ್ನು ತಲುಪಿವೆ.

ಡೀಸೆಲ್ ಬಳಕೆ, ಸಿಮೆಂಟ್ ಮತ್ತು ನೈಸರ್ಗಿಕ ಅನಿಲ ಬಳಕೆಯಲ್ಲಿ ಹೆಚ್ಚಳ ಆಗುತ್ತಿಲ್ಲ ಎಂದು ಅಧಿಕೃತ ಅಂಕಿ–ಅಂಶಗಳು ಹೇಳುತ್ತಿವೆ. ಹಿಂಗಾರು ಬಿತ್ತನೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 3ರಷ್ಟು ಹೆಚ್ಚಳ ಆಗಿದೆ. ಟ್ರ್ಯಾಕ್ಟರ್ ಮಾರಾಟ ಹೆಚ್ಚುತ್ತಿದೆ. ನರೇಗಾ ಯೋಜನೆಯ ಅಡಿ ಕೂಲಿಗೆ ಬೇಡಿಕೆಯು ಡಿಸೆಂಬರ್‌ನಲ್ಲಿ ಶೇಕಡ 57ರಷ್ಟು ಹೆಚ್ಚಳವಾಗಿದೆ.

ಆದಾಯ ಸಂಗ್ರಹ ಹಾಗೂ ಸರಕು ಸಾಗಣೆಯ ಪ್ರಮುಖ ಸೂಚಕವಾಗಿರುವ ಇ–ವೇ ಬಿಲ್‌ಗಳಲ್ಲಿ ಡಿಸೆಂಬರ್‌ನಲ್ಲಿ ಶೇಕಡ 17.5ರಷ್ಟು ಹೆಚ್ಚಳ ಆಗಿದೆ. ಹೆದ್ದಾರಿಗಳಲ್ಲಿ ದಿನವೊಂದಕ್ಕೆ ಸರಾಸರಿ ₹ 74.31 ಕೋಟಿ ಟೋಲ್ ಸಂಗ್ರಹ ಆಗುತ್ತಿದ್ದು, ಇದು ಕೋವಿಡ್ ಪೂರ್ವದ ಮಟ್ಟವನ್ನು ದಾಟಿದೆ. ಕೋವಿಡ್ ಸಾಂಕ್ರಾಮಿಕ ಅಪ್ಪಳಿಸುವ ಮೊದಲು ದಿನವೊಂದಕ್ಕೆ ಸರಾಸರಿ ₹ 57.9 ಕೋಟಿ ಟೋಲ್ ಸಂಗ್ರಹ ಆಗುತ್ತಿತ್ತು ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಂಕಿ–ಅಂಶಗಳು ಹೇಳಿವೆ.

ರೈಲ್ವೆ ಸರಕು ಸಾಗಣೆ ಪ್ರಮಾಣದಲ್ಲಿ ಕಳೆದ ವರ್ಷದ ಡಿಸೆಂಬರ್‌ಗೆ ಹೋಲಿಸಿದರೆ ಶೇಕಡ 8.5ರಷ್ಟು ಏರಿಕೆ ಆಗಿದೆ. ರೈಲ್ವೆ ಪ್ರಯಾಣಿಕರ ಬುಕಿಂಗ್‌ನಿಂದ ಬರುವ ಆದಾಯವು ಡಿಸೆಂಬರ್‌ನ ಆರಂಭದ ಮೂರು ವಾರಗಳಲ್ಲಿ ₹ 1,432 ಕೋಟಿ ಆಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 51ರಷ್ಟು ಹೆಚ್ಚು. ಡಿಸೆಂಬರ್‌ನಲ್ಲಿ ಯುಪಿಐ ಆಧಾರಿತ ಪಾವತಿಗಳ ಸಂಖ್ಯೆಯು ಸಾರ್ವಕಾಲಿಕ ದಾಖಲೆಯ ಮಟ್ಟವಾದ 223 ಕೋಟಿಗೆ ತಲುಪಿವೆ. ಯುಪಿಐ ವ್ಯವಸ್ಥೆಯ ಮೂಲಕ ಒಟ್ಟು ₹ 4.16 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿದೆ.

ಆದರೆ, ಈ ನಡುವೆ ಕೆಲವು ನಕಾರಾತ್ಮಕ ಸಂಗತಿಗಳೂ ಕಾಣಿಸಿವೆ. ಅಕ್ಟೋಬರ್‌ನಲ್ಲಿ ಎರಡು ಅಂಕಿಗಳ ಬೆಳವಣಿಗೆಯನ್ನು ದಾಖಲಿಸಿದ್ದ ವಿದ್ಯುತ್ ಬೇಡಿಕೆಯು, ನವೆಂಬರ್‌ನಲ್ಲಿ ಶೇ 3.5ಕ್ಕೆ ಹಾಗೂ ಡಿಸೆಂಬರ್‌ನಲ್ಲಿ ಶೇ 5.2ಕ್ಕೆ ನಿಂತಿದೆ. ಡೀಸೆಲ್‌ ಬೇಡಿಕೆಯು ಕಳೆದ ವರ್ಷದ ಮಟ್ಟಕ್ಕೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಶೇಕಡ 3ರಷ್ಟು ಕಡಿಮೆ ಆಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು