ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 7,000 ಕೋಟಿ ಹೂಡಿಕೆ: ಜೆಫ್‌ ಬೆಜೊಸ್‌

‘ಎಂಎಸ್‌ಎಂಇ’ಗಳ ಡಿಜಿಟಲಿಕರಣಕ್ಕೆ ಅಮೆಜಾನ್‌ ನೆರವು
Last Updated 15 ಜನವರಿ 2020, 19:45 IST
ಅಕ್ಷರ ಗಾತ್ರ

ನವದೆಹಲಿ : ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಸ್‌ಎಂಇ) ವಹಿವಾಟು ಹೆಚ್ಚಿಸುವ ಉದ್ದೇಶದ ಡಿಜಿಟಲಿಕರಣಕ್ಕೆ ಮುಂದಿನ 5 ವರ್ಷಗಳಲ್ಲಿ ₹ 7 ಸಾವಿರ ಕೋಟಿ ಮೊತ್ತದ ಹೂಡಿಕೆ ಮಾಡುವುದಾಗಿ ಇ–ಕಾಮರ್ಸ್‌ನ ಜಾಗತಿಕ ದೈತ್ಯ ಸಂಸ್ಥೆ ಅಮೆಜಾನ್‌ ಪ್ರಕಟಿಸಿದೆ.

‘ನಗರ, ಪಟ್ಟಣ ಮತ್ತು ಹಳ್ಳಿಗಳಲ್ಲಿನ ‘ಎಂಎಸ್‌ಎಂಇ’ಗಳ ವಹಿವಾಟು ಹೆಚ್ಚಿಸಲು, ವಿಶ್ವದಾದ್ಯಂತ ಹೆಚ್ಚೆಚ್ಚು ಗ್ರಾಹಕರನ್ನು ತಲುಪಲು ಈ ಡಿಜಿಟಲಿಕರಣ ಪ್ರಕ್ರಿಯೆ ನೆರವಾಗಲಿದೆ. ಭಾರತದ ದೀರ್ಘಾವಧಿ ಪಾಲುದಾರನಾಗಲು ಅಮೆಜಾನ್‌ ಬದ್ಧವಾಗಿದೆ’ ಎಂದು ಕಂಪನಿಯ ಸ್ಥಾಪಕ ಮತ್ತು ಸಿಇಒ ಜೆಫ್‌ ಬೆಜೊಸ್‌ ಅವರು ಬುಧವಾರ ಇಲ್ಲಿ ತಿಳಿಸಿದರು. ಇಲ್ಲಿ ನಡೆದ ಶೃಂಗಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

‘1 ಕೋಟಿ ‘ಎಂಎಸ್‌ಎಂಇ’ಗಳನ್ನು ಡಿಜಿಟಲಿಕರಣ ಪ್ರಕ್ರಿಯೆಗೆ ಒಳಪಡಿಸಿ, 2025ರ ವೇಳೆಗೆ ಅವುಗಳ ಇ–ಕಾಮರ್ಸ್‌ ರಫ್ತು ವಹಿವಾಟನ್ನು ವಿಶ್ವದಾದ್ಯಂತ ₹ 70 ಸಾವಿರ ಕೋಟಿಗೆ ತಲುಪಿಸಲು ಅಮೆಜಾನ್‌ ನಿರ್ಧರಿಸಿದೆ. ಲಕ್ಷಾಂತರ ಜನರು ಭಾರತದ ಅಭಿವೃದ್ಧಿಯಲ್ಲಿ ಭಾಗಿಯಾಗುವಂತೆ ಮಾಡುವುದು ಈ ಭಾರಿ ಮೊತ್ತದ ಹೂಡಿಕೆಯ ಮುಖ್ಯ ಉದ್ದೇಶವಾಗಿದೆ.

‘ಭಾರತದ ಸಮೃದ್ಧ ಮತ್ತು ವೈವಿಧ್ಯಮಯ ಸಂಸ್ಕೃತಿ ಪ್ರತಿನಿಧಿಸುವ ‘ಭಾರತದಲ್ಲಿಯೇ ತಯಾರಿಸಿದ’ ಉತ್ಪನ್ನಗಳನ್ನು ವಿಶ್ವಕ್ಕೆ ಪರಿಚಯಿಸಲು ಅಮೆಜಾನ್‌ ನೆರವಿನ ಹಸ್ತ ಚಾಚಲಿದೆ.

‘21ನೇ ಶತಮಾನವು ಭಾರತದ ಶತಮಾನವಾಗಿರಲಿದೆ. ಚಲನಶೀಲತೆ, ಸಾಮರ್ಥ್ಯದ ವಿಷಯದಲ್ಲಿ ಭಾರತ ವಿಶಿಷ್ಟ ಬಗೆಯ ಪ್ರಜಾಪ್ರಭುತ್ವ ದೇಶವಾಗಿದೆ’ ಎಂದೂ ಅವರು ಶ್ಲಾಘಿಸಿದ್ದಾರೆ.

ಮೂರು ದಿನಗಳ ಭೇಟಿ ನೀಡಲು ಜೆಫ್‌ ಭಾರತಕ್ಕೆ ಬಂದಿದ್ದಾರೆ. ಇ–ಕಾಮರ್ಸ್‌ ವಹಿವಾಟಿನ ಮೇಲೆ ವಿಧಿಸಿರುವ ನಿರ್ಬಂಧಗಳ ಸಂಬಂಧ ಅವರು ಸರ್ಕಾರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಲಿದ್ದಾರೆ. ಅಮೆಜಾನ್‌ ಪಾಲಿಗೆ ಭಾರತವು ಅಮೆರಿಕ ನಂತರದ ಅತಿದೊಡ್ಡ ಮತ್ತು ವಹಿವಾಟು ವಿಸ್ತರಣೆಯ ಪ್ರಮುಖ ಮಾರುಕಟ್ಟೆಯಾಗಿದೆ.

ವರ್ತಕರ ವಿರೋಧ

ಇ–ಕಾಮರ್ಸ್‌ ದೈತ್ಯ ಸಂಸ್ಥೆಗಳಾದ ಅಮೆಜಾನ್ ಮತ್ತು ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್, ನ್ಯಾಯಬಾಹಿರ ವಹಿವಾಟು ನಡೆಸುತ್ತಿವೆ ಎಂದು ರಿಟೇಲ್‌ ವರ್ತಕರು ತೀವ್ರವಾಗಿ ಆರೋಪಿಸುತ್ತಿರುವ ಹೊತ್ತಿನಲ್ಲಿಯೇ ಬೆಜೊಸ್‌ ಅವರ ಭಾರತ ಭೇಟಿ ನಡೆಯುತ್ತಿದೆ.

ಅಮೆಜಾನ್‌ ತನ್ನ ಆನ್‌ಲೈನ್‌ ತಾಣದಲ್ಲಿ ಉತ್ಪನ್ನಗಳ ಬೆಲೆಯನ್ನು ತೀವ್ರವಾಗಿ ಕಡಿತ ಮಾಡಿ ಮಾರಾಟ ಮಾಡುತ್ತಿದೆ. ಆಯ್ದ ದೊಡ್ಡ ಮಾರಾಟಗಾರರಿಗೆ ಮಾತ್ರ ಮಣೆ ಹಾಕುತ್ತಿದೆ ಎಂಬುದು ಅಖಿಲ ಭಾರತ ವರ್ತಕರ ಒಕ್ಕೂಟವು (ಸಿಎಐಟಿ) ಆರೋಪವಾಗಿದೆ. ಬೆಜೊಸ್‌ ಭೇಟಿ ವಿರೋಧಿಸಿ ಒಕ್ಕೂಟದ ಆಶ್ರಯದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಭಾರತದ ಸ್ಪರ್ಧಾತ್ಮಕ ಆಯೋಗವು (ಸಿಸಿಐ) ಇತ್ತೀಚೆಗಷ್ಟೇ ಈ ಎರಡೂ ದೈತ್ಯ ಸಂಸ್ಥೆಗಳ ವಹಿವಾಟಿನ ಸ್ವರೂಪದ ಬಗ್ಗೆ ತನಿಖೆಗೆ ಚಾಲನೆ ನೀಡಿದೆ.

ಅಂಕಿ ಅಂಶಗಳು

1 ಕೋಟಿ -ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಡಿಜಿಟಲೀಕರಣ

60 ಸಾವಿರ -ಅಮೆಜಾನ್‌ ತಾಣದಲ್ಲಿ ಸರಕು ಮಾರಾಟ ಮಾಡುವ ತಯಾರಕರ ಸಂಖ್ಯೆ

₹ 70 ಸಾವಿರ ಕೋಟಿ- 2025ರ ವೇಳೆಗೆ ‘ಎಂಎಸ್‌ಎಂಇ’ಗಳ ಇ–ಕಾಮರ್ಸ್‌ ರಫ್ತು ಗುರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT