ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಜಿಲ್ಲೆಗಳಲ್ಲಿ ಎಲೆಕ್ಟ್ರಾನಿಕ್ಸ್‌ ಕ್ಲಸ್ಟರ್‌: ಸಚಿವ ಜಗದೀಶ ಶೆಟ್ಟರ್

10ಕ್ಕೂ ಅಧಿಕ ಕಂಪನಿಗಳಿಂದ ಹೂಡಿಕೆ
Last Updated 19 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಕೈಗಾರಿಕಾ ಕ್ಲಸ್ಟರ್‌ ಅಭಿವೃದ್ಧಿ ಕಾರ್ಯಕ್ರಮದಡಿ ಚಿಕ್ಕಬಳ್ಳಾಪುರ, ಮೈಸೂರು, ಧಾರವಾಡ ಮತ್ತು ಕೋಲಾರದಲ್ಲಿಎಲೆಕ್ಟ್ರಾನಿಕ್ ಸಿಸ್ಟಂ ಡಿಸೈನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ (ಇಎಸ್‌ಡಿಎಂ) ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

‘ಮೈಸೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಕ್ಲಸ್ಟರ್‌ ಅಭಿವೃದ್ಧಿಪಡಿಸಲಾಗುತ್ತಿದೆ.ಜಾಗತಿಕ ಮಟ್ಟದ 87ಕ್ಕೂ ಅಧಿಕ ಕಂಪನಿಗಳ ಜತೆ ಚರ್ಚೆ ನಡೆಸಿದ್ದು, 10ಕ್ಕೂ ಹೆಚ್ಚಿನ ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿವೆ’ ಎಂದು ಹೇಳಿದರು.

ಕೈಗಾರಿಕಾ ಇಲಾಖೆ, ಇಂಡಿಯನ್ ಸೆಲ್ಯುಲರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಹಾಗೂ ಇಂಡಿಯಾ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಸೆಮಿಕಂಡಕ್ಟರ್‌ ಅಸೋಸಿಯೇಷನ್‌ ಸಹಯೋಗದಲ್ಲಿ ನಡೆದ ಜಾಗತಿಕವಾಗಿ ಸ್ಪರ್ಧಾತ್ಮಕವಾದ ಇಎಸ್‌ಡಿಎಂ ಕ್ಲಸ್ಟರ್‌ಗಳ ಸ್ಥಾಪನೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಎಲೆಕ್ಟ್ರಾನಿಕ್ಸ್‌ ತಯಾರಿಕೆಯಲ್ಲಿ ಭಾರತವಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ಬರುವ ಗುರಿಯನ್ನು ಸರ್ಕಾರ ಹೊಂದಿದೆ. ಪರಿಸರ ಸ್ನೇಹಿ ಎಲೆಕ್ಟ್ರಾನಿಕ್‌ ಉಪಕರಣಗಳ ತಯಾರಿಕೆಯಲ್ಲಿ ಮೈಸೂರು ಮುಂಚೂಣಿಯಲ್ಲಿದ್ದು, ಧಾರವಾಡದಲ್ಲಿ ನವ ಅನ್ವೇಷಣೆಗೆ ಆದ್ಯತೆ ನೀಡಲಾಗಿದೆ. ಈ ವಲಯದಲ್ಲಿ ಹೂಡಿಕೆ ಮಾಡಲು ಮುಂದಾಗುವವರಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್‌ ಮತ್ತು ವಿಶ್ವದರ್ಜೆಯ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಶ್ರಮಿಸಲಿದೆ’ ಎಂದುಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ ಮಾಹಿತಿ ನೀಡಿದರು.

‘ಕ್ಲಸ್ಟರ್‌ಗಳಿಗಾಗಿ ಈ ಜಿಲ್ಲೆಗಳಲ್ಲಿ ಒಂದು ಸಾವಿರ ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಈ ವಲಯಕ್ಕೆ ಅಗತ್ಯವಿರುವ ಕೌಶಲಯುಕ್ತ ಮಾನವ ಸಂಪನ್ಮೂಲ ಒದಗಿಸಲು ಐಟಿಐ ಮತ್ತಿತರ ವೃತ್ತಿ ಆಧಾರಿತ ಕೋರ್ಸ್‌ಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಇಲ್ಲಿಅಗತ್ಯವಾದ ಮೂಲಸೌಕರ್ಯಗಳೂ ಲಭ್ಯವಾಗಲಿವೆ.

‘ಉದ್ಯಮ ಮತ್ತು ಸರ್ಕಾರವು ಪಾಲುದಾರಿಕೆಯೊಂದಿಗೆ ಕಾರ್ಯನಿರ್ವಹಿಸಿದಾಗ ಮಾತ್ರವೇ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲಿವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT