ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತರಿಗೂ ವೈದ್ಯಕೀಯ ಸೌಲಭ್ಯ ವಿಸ್ತರಣೆ; ಉಡುಪಿಯಲ್ಲಿ ಇಎಸ್‌ಐ ಆಸ್ಪತ್ರೆ

ಉಡುಪಿಯಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪನೆ: ಭೂಸ್ವಾಧೀನಕ್ಕೆ ಒಪ್ಪಿಗೆ
Published 10 ಫೆಬ್ರುವರಿ 2024, 15:44 IST
Last Updated 10 ಫೆಬ್ರುವರಿ 2024, 15:44 IST
ಅಕ್ಷರ ಗಾತ್ರ

ನವದೆಹಲಿ: ಆರೋಗ್ಯ ವಿಮೆಗೆ ಒಳಪಟ್ಟಿದ್ದ ನಿವೃತ್ತ ಉದ್ಯೋಗಿಗಳಿಗೂ ವೈದ್ಯಕೀಯ ಸೌಲಭ್ಯವನ್ನು ವಿಸ್ತರಿಸಲು ಕಾರ್ಮಿಕರ ರಾಜ್ಯ ವಿಮಾ ನಿಗಮವು (ಇಎಸ್‌ಐಸಿ) ನಿರ್ಧರಿಸಿದೆ.

ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ ನಿಗಮದ ಸಭೆಯಲ್ಲಿ ಈ ಕುರಿತ ನಿಯಮಾವಳಿಗಳನ್ನು ಸಡಿಲಿಸಲು ನಿರ್ಣಯ ಅಂಗೀಕರಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯವು ಶನಿವಾರ ತಿಳಿಸಿದೆ. 

ಸಂಬಳ ಮಿತಿಯ ಹೆಚ್ಚಳದಿಂದಾಗಿ ಇಎಸ್‌ಐ ಆರೋಗ್ಯ ವಿಮೆಯಿಂದ ಹೊರಗುಳಿದಿದ್ದ ನಿವೃತ್ತರಿಗೆ ಈ ವೈದ್ಯಕೀಯ ಪ್ರಯೋಜನ ದೊರೆಯಲಿದೆ. ಆದರೆ, ಉದ್ಯೋಗಿಗಳು ನಿವೃತ್ತಿಗೂ ಅಥವಾ ಸ್ವಯಂ ನಿವೃತ್ತಿಗೂ ಮುಂಚೆ ವಿಮಾ ನೋಂದಣಿ ಮಾಡಿಸಿರಬೇಕಿದೆ ಎಂದು ತಿಳಿಸಿದೆ.

2012ರ ಏಪ್ರಿಲ್ 1ರ ನಂತರ ಕನಿಷ್ಠ ಐದು ವರ್ಷಗಳ ಕಾಲ ಆರೋಗ್ಯ ವಿಮೆ ಮಾಡಿಸಿ ಉದ್ಯೋಗದಲ್ಲಿದ್ದವರು ಅಥವಾ 2017ರ ಏಪ್ರಿಲ್ 1ರ ನಂತರ ಮಾಸಿಕ ₹30 ಸಾವಿರ ವೇತನದೊಂದಿಗೆ ನಿವೃತ್ತಿ, ಸ್ವಯಂ ನಿವೃತ್ತಿ ಪಡೆದ ಉದ್ಯೋಗಿಗಳಿಗೆ ಈ ಹೊಸ ಯೋಜನೆಯಡಿ ವೈದ್ಯಕೀಯ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದೆ. 

ಇಎಸ್‌ಐ ಫಲಾನುಭವಿಗಳಿಗೆ ಹೆಚ್ಚಿನ ಆರೋಗ್ಯ ಸೌಕರ್ಯ ಕಲ್ಪಿಸಲು 2023ರಲ್ಲಿ ಅನುಷ್ಠಾನಗೊಳಿಸಿರುವ ಆಯುಷ್‌ ಹೊಸ ನೀತಿಯನ್ನು ನಿಗಮದ ಆಸ್ಪತ್ರೆಗಳಲ್ಲಿ ಅಳವಡಿಸಿಕೊಳ್ಳಲು ಸಭೆಯು ಅನುಮೋದನೆ ನೀಡಿದೆ ಎಂದು ಹೇಳಿದೆ.

ಉಡುಪಿಯಲ್ಲಿ ಇಎಸ್‌ಐ ಆಸ್ಪತ್ರೆ:

ಇದೇ ವೇಳೆ ವೈದ್ಯಕೀಯ ಆರೈಕೆಯ ಮೂಲ ಸೌಕರ್ಯದ ಬಲವರ್ಧನೆಗೂ ಸಭೆ ಅನುಮೋದನೆ ನೀಡಿದೆ ಎಂದು ಸಚಿವಾಲಯವು ತಿಳಿಸಿದೆ.

ಕರ್ನಾಟಕದ ಉಡುಪಿ ಮತ್ತು ಕೇರಳದ ಇಡುಕ್ಕಿಯಲ್ಲಿ ತಲಾ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳನ್ನು ನಿರ್ಮಿಸಲು ನಿರ್ಧರಿಸಿದೆ. ಪಂಜಾಬ್‌ನ ಮಲೇರ್ಕೋಟ್ಲಾದಲ್ಲಿ 150 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸಲಿದೆ. ಈ ಆಸ್ಪತ್ರೆಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನಕ್ಕೂ ಅನುಮೋದನೆ ನೀಡಿದೆ ಎಂದು ವಿವರಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT