ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಥೆನಾಲ್ ಬೆರೆಸಿದರೆ ಪೆಟ್ರೋಲ್‌ ₹10 ಅಗ್ಗ?

ತೈಲ ಮಾರಾಟ ಕಂಪನಿಗಳು, ಬ್ಯಾಂಕ್‌ಗಳ ನಡುವೆ ಒಪ್ಪಂದ
Last Updated 11 ಮೇ 2022, 20:54 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಬೆಲೆ ತಗ್ಗಿಸಲು ಅವಕಾಶ ಕಲ್ಪಿಸುವ ಹೆಜ್ಜೆಯೊಂದನ್ನು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಹಾಗೂ ಸರ್ಕಾರಿ ಸ್ವಾಮ್ಯದ ಮೂರು ಬ್ಯಾಂಕ್‌ಗಳು ಇರಿಸಿವೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ ಕಂಪನಿಗಳು ಎಥೆನಾಲ್ ಪೂರೈಕೆಗೆ ಹಣ ಪಾವತಿಸುವುದಕ್ಕೆ ಸಂಬಂಧಿಸಿದಂತೆ ಎಸ್‌ಬಿಐ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿವೆ.

ಎಥೆನಾಲ್‌ ಪೂರೈಸುವುದಕ್ಕಾಗಿಯೇ ತಲೆ ಎತ್ತಲಿರುವ ಘಟಕಗಳು ತೈಲ ಮಾರಾಟ ಕಂಪನಿಗಳಿಗೆ ಎಥೆನಾಲ್ ಒದಗಿಸಲಿವೆ. ಇದನ್ನು ಪೆಟ್ರೋಲ್ ಜೊತೆ ಮಿಶ್ರಣ ಮಾಡಲಾಗುತ್ತದೆ. ಶೇಕಡ 20ರಷ್ಟು ಎಥೆನಾಲ್ ಇರುವ ಪೆಟ್ರೋಲ್‌ಅನ್ನು ಪೆಟ್ರೋಲ್ ಬಂಕ್ ಮೂಲಕ ಮಾರಾಟ ಮಾಡುವ ವ್ಯವಸ್ಥೆಯು 2025ರೊಳಗೆ ಜಾರಿಗೆ ಬರುವ ನಿರೀಕ್ಷೆ ಇದೆ. ಎಥೆನಾಲ್ ಮಿಶ್ರಣದಿಂದಾಗಿ ಲೀಟರ್ ಪೆಟ್ರೋಲ್ ಬೆಲೆಯು ₹ 10ರಷ್ಟು ಕಡಿಮೆ ಆಗಬಹುದು ಎನ್ನಲಾಗಿದೆ.

ಪೆಟ್ರೋಲ್‌ಗೆ ಶೇ 20ರಷ್ಟು ಎಥೆನಾಲ್ ಮಿಶ್ರಣ ಮಾಡುವುದರಿಂದ ಕಚ್ಚಾ ತೈಲ ಆಮದು ತುಸು ಕಡಿಮೆ ಆಗುತ್ತದೆ. ಅಲ್ಲದೆ, ಎಥೆನಾಲ್‌ನಿಂದ ಆಗುವ ಪರಿಸರ ಮಾಲಿನ್ಯ ಕಡಿಮೆ. ದೇಶದಲ್ಲಿ ಪೆಟ್ರೋಲ್‌ನಲ್ಲಿ ಶೇ 9.90ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. ಇದರಿಂದಾಗಿ ₹ 9 ಸಾವಿರ ಕೋಟಿಗಿಂತ ಹೆಚ್ಚಿನ ವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಎಥೆನಾಲ್ ಕೊರತೆಯು ದೊಡ್ಡ ಸವಾಲು. 2025–26ರೊಳಗೆ ಶೇ 20ರಷ್ಟು ಎಥೆನಾಲ್ ಮಿಶ್ರಣದ ಗುರಿ ಸಾಧಿಸಬೇಕು ಎಂದಾದರೆ ದೇಶಕ್ಕೆ 1,016 ಕೋಟಿ ಲೀಟರ್ ಎಥೆನಾಲ್ ಅಗತ್ಯವಿದೆ. ಆದರೆ, 650 ಕೋಟಿ ಲೀಟರ್ ಎಥೆನಾಲ್ ಕೊರತೆ ಇದೆ ಎಂದು ಅಂದಾಜು ಮಾಡಲಾಗಿದೆ.

ಅಗತ್ಯ ಎದುರಾದರೆ, ಸಕ್ಕರೆ ಉದ್ಯಮವು ಹೆಚ್ಚುವರಿಯಾಗಿ ಇರುವ 60 ಲಕ್ಷ ಟನ್ ಸಕ್ಕರೆಯನ್ನು ಅಂದಾಜು 700 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆಗೆ ಬಳಸಬಹುದು. ಹೆಚ್ಚುವರಿ ಧಾನ್ಯಗಳಿಂದ ಅಂದಾಜು 500 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆಗೆ ಯೋಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT