ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್‌ ಫಂಡ್‌ | ಫ್ರಾಂಕ್ಲಿನ್‌: ಇ–ವೋಟ್‌ ಪ್ರಕ್ರಿಯೆ ರದ್ದು

Last Updated 9 ಜೂನ್ 2020, 16:03 IST
ಅಕ್ಷರ ಗಾತ್ರ

ನವದೆಹಲಿ: ತನ್ನ ಆರು ಸಾಲ ನಿಧಿ ಯೋಜನೆಗಳಲ್ಲಿ ಹೂಡಿಕೆ ಮಾಡಿದವರಿಗೆ ಹಣ ಮರಳಿಸಲು ಹೂಡಿಕೆದಾರರಿಂದ ಆನ್‌ಲೈನ್‌ನಲ್ಲಿ ಸಮ್ಮತಿ ಪಡೆಯುವ ಪ್ರಕ್ರಿಯೆಯನ್ನು (ಇ–ವೋಟಿಂಗ್‌) ಫ್ರಾಂಕ್ಲಿನ್‌ ಟೆಂಪಲ್‌ಟನ್‌ ಮ್ಯೂಚುವಲ್‌ ಫಂಡ್‌ (ಎಫ್‌ಟಿಎಂಎಫ್‌) ರದ್ದುಪಡಿಸಿದೆ.

ಈ ಪ್ರಕ್ರಿಯೆಯು ಮಂಗಳವಾರದಿಂದ ಗುರುವಾರದವರೆಗೆ ನಡೆಯಲಿತ್ತು. ಇದೇ 12ಕ್ಕೆ ನಿಗದಿಯಾಗಿದ್ದ ಹೂಡಿಕೆದಾರರ ಸಭೆಯನ್ನೂ ರದ್ದುಪಡಿಸಲಾಗಿದೆ.

ಇ–ವೋಟ್‌ ಪ್ರಕ್ರಿಯೆ ಮತ್ತು ಹೂಡಿಕೆದಾರರ ಸಭೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಲು ಗುಜರಾತ್‌ ಹೈಕೋರ್ಟ್‌ ನಿರಾಕರಿಸಿದ್ದರಿಂದ ಕಂಪನಿಯು ಈ ನಿರ್ಧಾರಕ್ಕೆ ಬಂದಿದೆ. 6 ಸಾಲ ನಿಧಿಗಳನ್ನು ರದ್ದುಪಡಿಸುವ ಕಂಪನಿಯ ನಿರ್ಧಾರ ಅಕ್ರಮವಾಗಿದೆ ಎಂಬುದು ಕೋರ್ಟ್‌ ಮೆಟ್ಟಿಲು ಹತ್ತಿದ್ದ ಹೂಡಿಕೆದಾರರ ಆಕ್ಷೇಪವಾಗಿದೆ.

ಕಂಪನಿಯು ನಡೆಸಲು ಉದ್ದೇಶಿಸಿದ್ದ ಆನ್‌ಲೈನ್‌ ಮತದಾನದಲ್ಲಿ ಹೂಡಿಕೆದಾರರಿಗೆ ಎರಡು ಆಯ್ಕೆಗಳನ್ನು ನೀಡಿತ್ತು. ಟ್ರಸ್ಟಿಗಳು ಸಂಪತ್ತನ್ನು ನಗದೀಕರಿಸುವುದು ಇಲ್ಲವೇ ಈ ಪ್ರಕ್ರಿಯೆ ನಡೆಸಲು ಮೂರನೇ ಕಂಪನಿಯ ನೆರವು ಪಡೆಯುವುದನ್ನು ಹೂಡಿಕೆದಾರರು ಅನುಮೋದಿಸಬೇಕಾಗಿತ್ತು. ಈ ಎರಡೂ ಪ್ರಸ್ತಾವಗಳಿಗೆ ತಮ್ಮ ಸಮ್ಮತಿ ಇಲ್ಲದಿರುವುದನ್ನು ಸೂಚಿಸುವ ಅವಕಾಶವನ್ನೂ ಕಲ್ಪಿಸಲಾಗಿತ್ತು.

ಹಣ ಹಿಂದೆ ಪಡೆಯಲು ಹೆಚ್ಚಿದ ಒತ್ತಡ ಮತ್ತು ಬಾಂಡ್‌ ಮಾರುಕಟ್ಟೆಯಲ್ಲಿ ನಗದು ಕೊರತೆಯ ಕಾರಣ ನೀಡಿ ಕಂಪನಿಯು ಏಪ್ರಿಲ್‌ನಲ್ಲಿ ತನ್ನ 6 ಸಾಲ ನಿಧಿ ಯೋಜನೆಗಳನ್ನು ರದ್ದುಪಡಿಸಿತ್ತು. ಈ ಯೋಜನೆಗಳಲ್ಲಿ ಹೂಡಿಕೆದಾರರ ₹ 28 ಸಾವಿರ ಕೋಟಿ ಸಿಲುಕಿಕೊಂಡಿದೆ.

‘ಹಣ ಮರಳಿಸಲು ಟ್ರಸ್ಟಿಗಳಿಗೆ ಹೂಡಿಕೆದಾರರ ಸಮ್ಮತಿ ಬೇಕಾಗಿದೆ. ಮತದಾನ ಪ್ರಕ್ರಿಯೆಯು ಸಂಪೂರ್ಣವಾಗಿ ಯಶಸ್ವಿಗೊಂಡ ನಂತರವೇ ಹಣ ಮರುಪಾವತಿ ಅಂತಿಮಗೊಳಿಸಲಾಗುವುದು’ ಎಂದು ಫ್ರಾಂಕ್ಲಿನ್ ಟೆಂಪಲ್‌ಟನ್ ಇಂಡಿಯಾದ ಅಧ್ಯಕ್ಷ ಸಂಜಯ್‌ ಸಪ್ರೆ ಅವರು ಹೂಡಿಕೆದಾರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT