ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಗ್ಬಂಧನ ವಿಸ್ತರಣೆ: ಆರ್ಥಿಕತೆಗೆ ₹ 17.55 ಲಕ್ಷ ಕೋಟಿ ನಷ್ಟ

ಬ್ರಿಟನ್ನಿನ ಷೇರು ದಲ್ಲಾಳಿ ಕಂಪನಿ ಬಾರ್ಕ್ಲೇಸ್‌ ಅಂದಾಜು
Last Updated 14 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಮುಂಬೈ: ದಿಗ್ಬಂಧನ ವಿಸ್ತರಣೆಯಿಂದಾಗಿ ಭಾರತದ ಅರ್ಥ ವ್ಯವಸ್ಥೆಗೆ ಆಗಲಿರುವ ನಷ್ಟದ ಪ್ರಮಾಣವು ಗಣನೀಯವಾಗಿ ಏರಿಕೆಯಾಗಿ ₹ 17.55 ಲಕ್ಷ ಕೋಟಿಗೆ ತಲುಪಲಿದೆ ಎಂದು ಬ್ರಿಟನ್ನಿನ ಷೇರು ದಲ್ಲಾಳಿ ಕಂಪನಿ ಬಾರ್ಕ್ಲೇಸ್‌ ಲೆಕ್ಕ ಹಾಕಿದೆ.

2020ರ ಕ್ಯಾಲೆಂಡರ್‌ ವರ್ಷದಲ್ಲಿ ದೇಶಿ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೂನ್ಯ ಮಟ್ಟದಲ್ಲಿ ಇರಲಿದೆ. 2020–21ನೇ ಹಣಕಾಸು ವರ್ಷದಲ್ಲಿ ಕೇವಲ ಶೇ 0.8ರಷ್ಟು ದಾಖಲಾಗಲಿದೆ ಎಂದು ಕಂಪನಿ ತಿಳಿಸಿದೆ.

ಮೊದಲ ಹಂತದ ಮೂರು ವಾರಗಳ ದಿಗ್ಬಂಧನದಿಂದಾಗಿ ಭಾರತದ ಅರ್ಥ ವ್ಯವಸ್ಥೆಗೆ ₹ 9 ಲಕ್ಷ ಕೋಟಿ ನಷ್ಟ ಉಂಟಾಗಲಿದೆ ಎಂದು ಕಂಪನಿಯು ಅಂದಾಜಿಸಿತ್ತು.

2020ರ ಕ್ಯಾಲೆಂಡರ್ ವರ್ಷದಲ್ಲಿ ‘ಜಿಡಿಪಿ’ಯು ಶೇ 2.5ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಈಗ ಅದನ್ನು ಶೂನ್ಯಕ್ಕೆ ಇಳಿಸಿದೆ. 2020–21ನೇ ಸಾಲಿನ ಪ್ರಗತಿಯನ್ನು ಈ ಮುಂಚಿನ ಶೇ 3.5 ರಿಂದ ಶೇ 0.8ಕ್ಕೆ ತಗ್ಗಿಸಿದೆ.

‘ದಿಗ್ಬಂಧನ ವಿಸ್ತರಣೆಯಿಂದ ಆರ್ಥಿಕತೆ ಮೇಲೆ ಆಗುವ ಪ್ರತಿಕೂಲ ಪರಿಣಾಮಗಳು ಈ ಮೊದಲಿನ ನಿರೀಕ್ಷೆಗಿಂತ ಹೆಚ್ಚು ತೀಕ್ಷ್ಣ ಸ್ವರೂಪದಲ್ಲಿ ಇರಲಿವೆ. ‘ಕೋವಿಡ್‌–19’ ಸೋಂಕು ಸಮುದಾಯದಲ್ಲಿ ಹರಡುತ್ತಿದೆ ಎಂದು ಭಾರತವು ಇದುವರೆಗೂ ಅಧಿಕೃತವಾಗಿ ಘೋಷಿಸಿಲ್ಲ. ಸದ್ಯಕ್ಕೆ ಜಾರಿಯಲ್ಲಿ ಇರುವ ನಿರ್ಬಂಧಗಳು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ನಷ್ಟ ಉಂಟು ಮಾಡಿವೆ.

ಅವಶ್ಯಕ ವಲಯಗಳಾದ ಗಣಿಗಾರಿಕೆ, ಕೃಷಿ, ತಯಾರಿಕೆ ಮೇಲೆ ಗರಿಷ್ಠ ಪ್ರಮಾಣದ ಪರಿಣಾಮ ಉಂಟಾಗಿದೆ. ದಿಗ್ಬಂಧನವು ಜೂನ್‌ ಆರಂಭದಲ್ಲಿ ಕೊನೆಗೊಳ್ಳಬಹುದು. ಆನಂತರವಷ್ಟೇ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಚೇತರಿಸಿಕೊಳ್ಳಬಹುದು ಎಂದು ಬಾರ್ಕ್ಲೇಸ್‌ ತಿಳಿಸಿದೆ.

ಅಂಕಿ ಅಂಶ

₹ 9 ಲಕ್ಷ ಕೋಟಿ: ಮೊದಲ ಹಂತದ ದಿಗ್ಬಂಧನದ ನಷ್ಟ

0 %: 2020ರ ಕ್ಯಾಲೆಂಡರ್‌ ವರ್ಷದ ಜಿಡಿಪಿ

0.8 %: 2020–21ನೇ ಹಣಕಾಸು ವರ್ಷದ ಜಿಡಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT