ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಐ.ಟಿ. ರಿಟರ್ನ್ಸ್‌ ತುಂಬುವುದು ಕಡ್ಡಾಯವೇ?

Last Updated 10 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ನಾನು ದಾವಣಗೆರೆಯಲ್ಲಿ ಕಾಲೇಜ್‌ನಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೇನೆ. ಹಲವು ವರ್ಷಗಳಿಂದ ನಿಮ್ಮ ಅಂಕಣ ಓದುತ್ತಿದ್ದೇನೆ. ಈ ವರ್ಷ ನನ್ನ ಕುಟುಂಬದ ಮೂವರಿಗೆ ಸರ್ಕಾರಿ ಕೆಲಸ ಸಿಕ್ಕಿದೆ. ಅವರಿಗೆ ಪ್ರಾರಂಭದಿಂದಲೇ ಉಳಿತಾಯ ಯೋಜನೆ ತಿಳಿಸಿ.
ಹರೀಶ್‌ ಬಡಿಗೇರ್. ದಾವಣಗೆರೆ

ಉತ್ತರ: ನಿಮ್ಮೆಲ್ಲರ ಅಭಿಮಾನಕ್ಕೆ ಧನ್ಯವಾದ. ಹೆಚ್ಚಿನ ವರಮಾನ, ಕಮಿಷನ್‌, ಉಡುಗೊರೆ ಅಥವಾ ಇನ್ನಿತರ ಆಮಿಷಗಳಿಂದ ಬಹಳಷ್ಟು ಜನರು ಹಣ ಹೂಡಿ ಅಸಲನ್ನೇ ಕಳೆದುಕೊಳ್ಳುತ್ತಿರುವುದು ಶೋಚನೀಯ. ನಿಮ್ಮ ಕುಟುಂಬದಲ್ಲಿ ಸರ್ಕಾರಿ ನೌಕರಿ ದೊರೆತ ಮೂವರೂ ಕನಿಷ್ಠ ಶೇ 25ರಷ್ಟು ಸಂಬಳವನ್ನು ಅವರು ಸಂಬಳ ಪಡೆಯುವ ಬ್ಯಾಂಕ್‌ನಲ್ಲಿ 10 ವರ್ಷಗಳ ಅವಧಿಗೆ ಆರ್‌.ಡಿ. ಮಾಡಲು ಹೇಳಿ. ಇದು ಅವರ ಮುಂದಿನ ಜೀವನಕ್ಕೆ ಅನುಕೂಲ ಆಗುತ್ತದೆ.

**

ನಾನು ಚಿಕ್ಕ ಜೋಗಹಳ್ಳಿ ವ್ಯವಸಾಯ ಸೇವಾ ಸಂಘದಲ್ಲಿ ₹ 20 ಸಾವಿರವನ್ನು 12–12–1996ರಲ್ಲಿ ಠೇವಣಿ ಇರಿಸಿದ್ದೆ. ಬಾಂಡ್ ಅವಧಿ ಮುಗಿದು ಹಣ ಕೇಳಿದಾಗ ಹಣ ಕೊಡುತ್ತಿಲ್ಲ. ದಯಮಾಡಿ ಮಾರ್ಗದರ್ಶನ ಮಾಡಿ.
–ಹೆಸರು ಬೇಡ, ಕೂಡಲಗಿ

ಉತ್ತರ: ನೀವು ಬಾಂಡ್‌ನ ಜೆರಾಕ್ಸ್‌ ತೆಗೆದು Registrar of co operative society, Aliaskar Road Bangalore-1 ಇವರಿಗೆ ರಿಜಿಸ್ಟರ್ಡ್‌ ಪೋಸ್ಟ್‌ ಕಳಹಿಸಿ, ವಿವರ ತಿಳಿಸಿ. ಸೊಸೈಟಿ ಆರ್ಥಿಕ ಪರಿಸ್ಥಿತಿ ಸಿರ ಇಲ್ಲದಿರಬಹುದು. ನಿಮಗೆ ಹಣ ವಾಪಸ್‌ ಸಿಗಬಹುದು ಎನ್ನುವುದು ನನ್ನ ನಂಬಿಕೆ. ಹಣ ಹೂಡುವ ಮುನ್ನ ಭದ್ರತೆ ವಿಚಾರದಲ್ಲಿ ಬಹಳಷ್ಟು ಜನರು ಗಮನ ಹರಿಸುವುದಿಲ್ಲ. ಮುಂದೆಯಾದರೂ ಹಣ ಇರಿಸುವಾಗ ಜಾಗ್ರತೆ ಇರಲಿ.

**

ನನ್ನ ವಾರ್ಷಿಕ ಪಿಂಚಣಿ ₹ 3,11,058 . ಬ್ಯಾಂಕ್‌ ಠೇವಣಿ ಬಡ್ಡಿ ₹ 24,900. ಅಂಚೆ ಕಚೇರಿ ಠೇವಣಿ ಬಡ್ಡಿ ₹ 37,200. ಉಳಿತಾಯ ಖಾತೆ ಬಡ್ಡಿ ₹ 3,503. ಹೀಗೆ ಒಟ್ಟು ವಾರ್ಷಿಕ ಆದಾಯ ₹ 37,661. ನಾನು ತೆರಿಗೆಗೆ ಒಳಗಾಗುವುದಿಲ್ಲ ಎಂದು ಭಾವಿಸುತ್ತೇನೆ. ಆದ್ದರಿಂದ ಐ.ಟಿ. ರಿಟರ್ನ್ಸ್‌ ತುಂಬುವುದು ಕಡ್ಡಾಯವೇ?
–ಬಸವರಾಜ ಎನ್‌. ಸವಣೂರು, ಬೀದರ್‌

ಉತ್ತರ: 2019ರ ಏಪ್ರಿಲ್‌ನಿಂದ ಎಲ್ಲಾ ವರ್ಗದ ಜನರು ಆದಾಯ ತೆರಿಗೆಯಲ್ಲಿ ನಮೂದಿಸಿದ ವಿನಾಯ್ತಿ ಪಡೆದು ಅಥವಾ ಪಡೆಯದೇ ವಾರ್ಷಿಕವಾಗಿ ₹ 5 ಲಕ್ಷ ಆದಾಯ ಹೊಂದಿದ್ದರೆ, ಅವರು ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ಇದೇ ವೇಳೆ, 60 ವರ್ಷದೊಳಗೆ ಇರುವವರ ವಾರ್ಷಿಕ ಒಟ್ಟು ಆದಾಯ ₹ 2.50 ಲಕ್ಷ ದಾಟಿದಲ್ಲಿ, 60 ದಾಟಿ 80ರ ಒಳಗೆ ಇರುವವರು ₹ 3 ಲಕ್ಷ ಒಟ್ಟು ಆದಾಯ ಹಾಗೂ 80 ವರ್ಷದಾಟಿದವರ ಒಟ್ಟು ಆದಾಯ ₹ 5 ಲಕ್ಷ ದಾಟಿದಲ್ಲಿ ವಿನಾಯ್ತಿ ಪಡೆದು ತೆರಿಗೆಗೆ ಒಳಗಾಗದಿದ್ದರೂ ಐ.ಟಿ ರಿಟರ್ನ್ಸ್‌ ತುಂಬಬೇಕಾಗುತ್ತದೆ. ಬಹಳಷ್ಟು ಜನರು ತಾವು ತೆರಿಗೆಗೆ ಒಳಗಾಗುವುದಿಲ್ಲ. ಐ.ಟಿ ರಿಟರ್ನ್ಸ್‌ ತುಂಬುವ ಅವಶ್ಯಕತೆ ಇರುವುದಿಲ್ಲ ಎಂದುಕೊಂಡಿದ್ದಾರೆ. ಮೊದಲಿನ ಮಿತಿ ದಾಟಿದಾಗ ರಿಟರ್ನ್ಸ್‌ ತುಂಬಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT