ಬುಧವಾರ, ಸೆಪ್ಟೆಂಬರ್ 28, 2022
26 °C
ಹಣಕಾಸು ಸಚಿವಾಲಯದಿಂದ ಪರಿಶೀಲನೆ: ಮೂಲಗಳ ಮಾಹಿತಿ

ಹೊಸ ಆದಾಯ ತೆರಿಗೆ: ಇನ್ನಷ್ಟು ಆಕರ್ಷಕ ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿನಾಯಿತಿಗಳು ಇಲ್ಲದ ವೈಯಕ್ತಿಕ ಆದಾಯ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಆಕರ್ಷಕವಾಗಿಸಲು ಕೇಂದ್ರ ಹಣಕಾಸು ಸಚಿವಾಲಯ ಉದ್ದೇಶಿಸಿದೆ. ಹೀಗಾಗಿ, ಸಚಿವಾಲಯವು ವಿನಾಯಿತಿ ಮುಕ್ತ ತೆರಿಗೆ ವ್ಯವಸ್ಥೆಯ ಪರಿಶೀಲನೆ ನಡೆಸುವ ಇರಾದೆ ಹೊಂದಿದೆ ಎಂದು ಮೂಲಗಳು ಹೇಳಿವೆ.

ಯಾವುದೇ ತರಹದ ತೆರಿಗೆ ವಿನಾಯಿತಿ ಇಲ್ಲದ ವ್ಯವಸ್ಥೆ ರೂಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅಲ್ಲದೆ, ವಿನಾಯಿತಿಗಳನ್ನು ಒಳಗೊಂಡಿರುವ ಹಳೆಯ ತೆರಿಗೆ ವ್ಯವಸ್ಥೆಯನ್ನು ಕೈಬಿಡುವ ಬಗ್ಗೆಯೂ ಆಲೋಚನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

2020–21ರ ಕೇಂದ್ರ ಬಜೆಟ್‌ನಲ್ಲಿ ವಿನಾಯಿತಿಗಳು ಇಲ್ಲದ ಹೊಸ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಹಳೆಯ ಮತ್ತು ಹೊಸ ವ್ಯವಸ್ಥೆ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ತೆರಿಗೆದಾರರಿಗೆ ನೀಡಲಾಗಿದೆ. ತೆರಿಗೆದಾರರು ವಿನಾಯಿತಿ ಸೌಲಭ್ಯ ಇರುವ ಈಗಿನ ತೆರಿಗೆ ಯೋಜನೆ ಅಥವಾ ಕಡಿಮೆ ತೆರಿಗೆ ದರದ, ವಿನಾಯಿತಿ ಸೌಲಭ್ಯ ಇಲ್ಲದ ಹೊಸ ತೆರಿಗೆ ವ್ಯವಸ್ಥೆ ನಡುವೆ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ಮನೆ ಮತ್ತು ಶಿಕ್ಷಣ ಸಾಲಗಳನ್ನು ತೀರಿಸಿರುವ ಜನ ಹೊಸ ತೆರಿಗೆ ವ್ಯವಸ್ಥೆಗೆ ಬರಲು ಮುಂದಾಗಿದ್ದಾರೆ. ಏಕೆಂದರೆ ಅವರಿಗೆ ವಿನಾಯಿತಿ ಪಡೆಯಲು ಏನೂ ಇಲ್ಲವಾಗಿದೆ ಎಂದು ಮೂಲಗಳು ತಿಳಿಸಿವೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ದರಗಳನ್ನು ಕಡಿಮೆ ಮಾಡುವುದರಿಂದ ಅದು ಮತ್ತಷ್ಟು ಆಕರ್ಷಕವಾಗಲಿದೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

2019ರ ಸೆಪ್ಟೆಂಬರ್‌ನಲ್ಲಿ ಕಾರ್ಪೊರೇಟ್‌ ವಲಯದ ತೆರಿಗೆದಾರರಿಗೂ ಇದೇ ತರಹದ ವ್ಯವಸ್ಥೆಯನ್ನು ಪರಿಚಯಿಸಲಾಯಿತು. ವಿನಾಯಿತಿಗಳನ್ನು ತೆಗೆದು ತೆರಿಗೆ ದರಗಳನ್ನು ತಗ್ಗಿಸಲಾಗಿದೆ.

ಕೇಂದ್ರ ಸರ್ಕಾರವು ಮೂಲ ಕಾರ್ಪೊರೇಟ್‌ ತೆರಿಗೆ ದರವನ್ನು ಶೇಕಡ 30ರಿಂದ ಶೇ 22ಕ್ಕೆ ಇಳಿಸಿದೆ. 2019ರ ಅಕ್ಟೋಬರ್‌ 1ರ ಬಳಿಕ ಸ್ಥಾಪನೆ ಆಗಿರುವ ಮತ್ತು 2024ರ ಮಾರ್ಚ್‌ 31ಕ್ಕೂ ಮೊದಲು ಕಾರ್ಯಾಚರಣೆ ಆರಂಭಿಸಿರುವ ಹೊಸ ತಯಾರಿಕಾ ಕಂಪನಿಗಳಿಗೆ ತೆರಿಗೆ ದರವು ಶೇ 25ರಿಂದ ಶೇ 15ಕ್ಕೆ ಇಳಿದಿದೆ. ಹೊಸ ತೆರಿಗೆ ವ್ಯವಸ್ಥೆಗೆ ಬರುವ ಕಂಪನಿಗಳಿಗೆ ಯಾವುದೇ ವಿನಾಯಿತಿ ಮತ್ತು ಉತ್ತೇಜನಗಳು ಇರುವುದಿಲ್ಲ.

ಹೊಸ ತೆರಿಗೆ ವ್ಯವಸ್ಥೆ

ವಾರ್ಷಿಕ ಆದಾಯ;                                   ತೆರಿಗೆ ಪ್ರಮಾಣ

₹ 2.5 ಲಕ್ಷದವರೆಗೆ;                                  ಯಾವುದೇ ತೆರಿಗೆ ಇಲ್ಲ

₹ 2.5 ಲಕ್ಷದಿಂದ ₹ 5 ಲಕ್ಷದವರೆಗೆ;                      5%

₹5 ಲಕ್ಷದಿಂದ ₹ 7.5 ಲಕ್ಷದವರೆಗೆ;                       10%

₹7.5 ಲಕ್ಷದಿಂದ ₹10 ಲಕ್ಷದವರೆಗೆ;                      15%

₹10 ಲಕ್ಷದಿಂದ ₹12.5 ಲಕ್ಷದವರೆಗೆ;                    20%

₹12.5 ಲಕ್ಷದಿಂದ ₹15 ಲಕ್ಷದವರೆಗೆ;                     25%

₹15 ಲಕ್ಷಕ್ಕಿಂತ ಹೆಚ್ಚು;                                      30%

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು