ಶುಕ್ರವಾರ, ಏಪ್ರಿಲ್ 3, 2020
19 °C
ಫಿಚ್‌ ರೇಟಿಂಗ್ಸ್‌ ಅಂದಾಜು

2020–21ನೇ ಹಣಕಾಸು ವರ್ಷಕ್ಕೆ ವೃದ್ದಿ ದರ ಶೇ 5.1ಕ್ಕೆ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 2020–21ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 5.1ಕ್ಕೆ ಇಳಿಯಲಿದೆ ಎಂದು ಫಿಚ್‌ ರೇಟಿಂಗ್ಸ್‌ ಅಂದಾಜಿಸಿದೆ.

‘ಕೊರೊನಾ–2’ ವೈರಸ್‌ ಉಂಟು ಮಾಡಿರುವ ಹಾವಳಿಯಿಂದ ಕಚ್ಚಾ ಸರಕುಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವುದರಿಂದ ಬಂಡವಾಳ ಹೂಡಿಕೆ ಮತ್ತು ರಫ್ತು ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮಗಳು ಕಂಡು ಬರಲಿವೆ. ಈ ಕಾರಣಕ್ಕೆ ‘ಜಿಡಿಪಿ’ಯು ಕಡಿಮೆಯಾಗಲಿದೆ. ವಿವಿಧ ದೇಶಗಳ ‘ಜಿಡಿಪಿ’ಯೂ ಕಡಿಮೆಯಾಗಲಿದ್ದು, ಜಾಗತಿಕ ಆರ್ಥಿಕತೆಯು ಹಿಂಜರಿತಕ್ಕೆ ಒಳಗಾಗಲಿದೆ ಎಂದು ತಿಳಿಸಿದೆ.

ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಯು ಶೇ 5.6ರಷ್ಟು ಮತ್ತು 2021–22ರಲ್ಲಿ ಶೇ 6.5ಕ್ಕೆ ಚೇತರಿಕೆ ಕಾಣಲಿದೆ ಎಂದು ಫಿಚ್ ರೇಟಿಂಗ್ಸ್‌ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ಅಂದಾಜಿಸಿತ್ತು. ಈಗ ಪರಿಷ್ಕೃತ ವರದಿ ಬಿಡುಗಡೆ ಮಾಡಿದೆ.

ಮುಂಬರುವ ದಿನಗಳಲ್ಲಿ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬರಲಿದೆ. ಸೋಂಕು ವಿಸ್ತರಣೆಗೆ ಕಡಿವಾಣ ಬಿದ್ದರೂ ಸರಕುಗಳ ಪೂರೈಕೆಯಲ್ಲಿ ಅಡಚಣೆ ಉಂಟಾಗಿ ವಹಿವಾಟಿಗೆ ಧಕ್ಕೆ ಒದಗಲಿದೆ. 2019–20ರಲ್ಲಿ ಶೇ 5.0ರಷ್ಟು ಇರಲಿರುವ ಜಿಡಿಪಿಯು, 2020–21ರಲ್ಲಿ ಶೇ 5.1ರಷ್ಟು ಮಟ್ಟದಲ್ಲಿಯೇ ಇರಲಿದೆ. 2020ರ ಡಿಸೆಂಬರ್‌ನಲ್ಲಿಯೂ ಡಾಲರ್‌ ಎದುರಿನ ರೂಪಾಯಿ ವಿನಿಮಯ ದರವು ₹ 74ರ ಮಟ್ಟದಲ್ಲಿ ಇರಲಿದೆ ಎಂದು ತಿಳಿಸಿದೆ.

ಕೊರೊನಾ ಬಿಕ್ಕಟ್ಟು, ಜಾಗತಿಕ ಜಿಡಿಪಿ ಬೆಳವಣಿಗೆಗೆ ಅಡ್ಡಿಪಡಿಸಲಿದೆ. ಹೀಗಾಗಿ  ವೃದ್ಧಿ ದರವು ಈ ಮೊದಲಿನ ಅಂದಾಜಿಗಿಂತ (ಶೇ 2.5) ಕಡಿಮೆ (ಶೇ 1.3) ಇರುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಹಣಕಾಸು ವ್ಯವಸ್ಥೆಯಲ್ಲಿನ ತಲ್ಲಣಗಳು ಗ್ರಾಹಕರ ಖರೀದಿ ಉತ್ಸಾಹ ಮತ್ತು ವೆಚ್ಚಕ್ಕೆ ಕಡಿವಾಣ ಹಾಕಲಿವೆ. ಕಂಪನಿಗಳ ಹಣಕಾಸು ಪರಿಸ್ಥಿತಿ ಬಿಗಡಾಯಿಸುವುದರಿಂದ ಒಟ್ಟಾರೆ ಹಣಕಾಸು ವ್ಯವಸ್ಥೆಯ ಮೇಲಿನ ಹೊರೆ ಹೆಚ್ಚಲಿದೆ. ಮಂದಗತಿಯ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸರ್ಕಾರ ಕೈಗೊಂಡಿರುವ ಕ್ರಮಗಳು ನಿರೀಕ್ಷಿತ ಫಲಶ್ರುತಿ ನೀಡುವುದಿಲ್ಲ ಎಂದೂ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು