ಬೆಂಗಳೂರು: ದೇಶದ ಸರ್ಕಾರಿ ಸ್ವಾಮ್ಯದ ಕಂಪನಿಗಳು ಹಾಗೂ ಉದ್ದಿಮೆಗಳು ತಮಗೆ ಬೇಕಾದ ಬಹುತೇಕ ಕಚ್ಚಾವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿವೆ. ಇದರ ಬದಲು ದೇಶದಲ್ಲಿರುವ ಎಂಎಸ್‌ಎಂಇಗಳಿಂದ ಕಚ್ಚಾವಸ್ತುಗಳನ್ನು ಖರೀದಿಸಲು ಆದ್ಯತೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ಮತ್ತು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ಎಂಎಸ್‌ಎಂಇ ಸಚಿವಾಲಯದ ಸಹಯೋಗದೊಂದಿಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಶುಕ್ರವಾರದಿಂದ ಆಯೋಜಿಸಿರುವ ಎರಡು ದಿನಗಳ ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಮಾವೇಶಕ್ಕೆ‘ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ರಫ್ತು ಹೆಚ್ಚಾಗಬೇಕು, ಆಮದು ಕಡಿಮೆಯಾಗಬೇಕು. ಹೊಸ ಕೈಗಾರಿಕೆಗಳನ್ನು ಪ್ರಾರಂಭಿಸಲು ಇರುವ ಸಬ್ಸಿಡಿಗಳನ್ನು ಪಡೆಯಲು ಪ್ರತಿ ವರ್ಷ ಸುಮಾರು 5 ಲಕ್ಷ ಅರ್ಜಿ ಸಲ್ಲಿಕೆಯಾಗುತ್ತಿವೆ. ಆದರೆ, ಇಲಾಖೆಯಿಂದ ಕೇವಲ 90 ಸಾವಿರ ಜನರಿಗೆ ಮಾತ್ರ ಸಬ್ಸಿಡಿ ನೀಡಲು ಸಾಧ್ಯವಾಗುತ್ತಿದೆ. ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಹಣಕಾಸು ಸಚಿವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ದೇಶದ ಕಾರ್ಮಿಕರಲ್ಲಿ ಕೌಶಲದ ಕೊರತೆಯಿದ್ದು, ಅವರಿಗೆ ಅಗತ್ಯ ಕೌಶಲ ತರಬೇತಿ ನೀಡುವ ಜೊತೆಗೆ ಕೌಶಲವನ್ನು ವೃದ್ಧಿಸಬೇಕಿದೆ. ಇದಕ್ಕಾಗಿ ಹೊಸ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಎ.ಐ) ಬಳಸಿಕೊಳ್ಳಬೇಕಿದೆ. ಎಂಎಸ್‌ಎಂಇಗಳು ಮೂಲಸೌಕರ್ಯದ ಕೊರತೆ ಅನುಭವಿಸುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ಅಗತ್ಯ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯನ್ನು ಆಯೋಜಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ (ಎಲೆಕ್ಟ್) ಎಂ.ಜಿ ಬಾಲಕೃಷ್ಣ, ಹಿರಿಯ ಉಪಾಧ್ಯಕ್ಷೆ ಉಮಾ ರೆಡ್ಡಿ, ಎಫ್‌ಕೆಸಿಸಿಐ ಇಂಡಸ್ಟ್ರಿ ಕಮಿಟಿ ಅಧ್ಯಕ್ಷ ಅರವಿಂದ ಬುರ್ಜಿ, ಕಾಸಿಯಾ ಅಧ್ಯಕ್ಷ ಎಂ.ಜಿ ರಾಜಗೋಪಾಲ್, ಪೀಣ್ಯ ಇಂಡಸ್ಟ್ರಿ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಉಪಸ್ಥಿತರಿದ್ದರು.
‘ರಾಜ್ಯಕ್ಕೆ ಒಂದೂ ಕೈಗಾರಿಕಾ ಸ್ಮಾರ್ಟ್‌ಸಿಟಿ ಇಲ್ಲ’
ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಮಾತನಾಡಿ ದೇಶೀಯ ತಯಾರಿಕಾ ವಲಯಕ್ಕೆ ಉತ್ತೇಜನ ನೀಡಲು ದೇಶದ 10 ರಾಜ್ಯಗಳಲ್ಲಿ ಹೊಸದಾಗಿ 12 ಕೈಗಾರಿಕಾ ಸ್ಮಾರ್ಟ್‌ಸಿಟಿ ಸ್ಥಾಪನೆಗೆ ಕೇಂದ್ರ ಅನುಮೋದನೆ ನೀಡಿದೆ. ಆದರೆ ರಾಜ್ಯದವರೇ ಆದ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಕೇಂದ್ರ ಎಂಎಸ್‌ಎಂಇ ಇಲಾಖೆಯ ಸಚಿವೆ ಶೋಭಾ ಕರಂದ್ಲಾಜೆ ಇದ್ದರೂ ರಾಜ್ಯಕ್ಕೆ ಒಂದೂ ಸ್ಮಾರ್ಟ್‌ಸಿಟಿ ಮಂಜೂರಾಗಿಲ್ಲ. ಈಗಲಾದರೂ ಸಚಿವರು ಸಂಬಂಧಪಟ್ಟವರ ಜೊತೆ ಮಾತನಾಡಿ ರಾಜ್ಯಕ್ಕೆ ಒಂದಾದರೂ ಸ್ಮಾರ್ಟ್‌ಸಿಟಿ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.