ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂಬೆ ಇಳುವರಿ ಕುಸಿವ ಭೀತಿ

ಬರದ ಹೊಡೆತಕ್ಕೆ ಬೆಳೆಗಾರರು ಕಂಗಾಲು
Last Updated 4 ನವೆಂಬರ್ 2018, 19:30 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಎರಡೂ ಕೈಕೊಟ್ಟಿವೆ. ಮಳೆ ಇಲ್ಲದೇ ಕೊಳವೆಬಾವಿಗಳು ಬತ್ತುತ್ತಿವೆ. ಸಕಾಲಕ್ಕೆ ಸಾಕಷ್ಟು ನೀರು ಸಿಗದೆ ನಿಂಬೆಗಿಡಗಳಲ್ಲಿನ ಹೂವು– ಹೀಚು ಉದುರುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಅಕ್ಟೋಬರ್‌ ಆರಂಭದಲ್ಲಿ ನಿಂಬೆ ಗಿಡಗಳು ಹೂವು ಬಿಟ್ಟು ಹಸಿರಿನಿಂದ ಕಂಗೊಳಿಸುತ್ತಿದ್ದವು. ಆದರೆ, ನೀರಿಲ್ಲದೆ ತಿಂಗಳ ಕೊನೆಯಲ್ಲಿ ಅರ್ಧಕ್ಕೂ ಹೆಚ್ಚು ಹೂವು ಉದುರಿವೆ.

ಗಿಡ ಉಳಿದರೆ ಸಾಕು: ‘ನಿಂಬೆ ವರ್ಷವಿಡೀ ಸಿಗುವ ಬೆಳೆ. ಬೇಸಿಗೆಯಲ್ಲಿ ದೊರಕುವ ಹಣ್ಣುಗಳೇ ಆದಾಯ ತರುವಂಥವು. ಉಳಿದ ಅವಧಿಯಲ್ಲಿನ ಬೆಳೆಯು ಖರ್ಚಿಗೇ ಸರಿಯಾಗಲಿದೆ. ಇದರಲ್ಲೇ ಮನೆಯನ್ನು ನಿಭಾಯಿಸುತ್ತಿದ್ದೆವು. ದೀಪಾವಳಿ, ಎಳ್ಳಮಾವಾಸ್ಯೆ ಆಸುಪಾಸು ನಿಂಬೆ ಗಿಡಗಳು ಹೊಸದಾಗಿ ಚಿಗುರಿ, ಹೂವು ಬಿಡುತ್ತವೆ. ಈ ಹೂವೇ ಬೇಸಿಗೆ ಬೆಳೆ. ಇದೇ ನಮ್ಮ ಜೀವನಾಧಾರ. ಆದರೆ ಈ ಬಾರಿ, ಈಗಾಗಲೇ ಅರ್ಧಕ್ಕರ್ಧ ಹೂವು ಉದುರಿವೆ. ಇದೀಗ ಹೀಚು ಉದುರಲಾರಂಭಿಸಿದೆ’ ಎಂದು ತಾಂಬಾದ ನಿಂಬೆ ಬೆಳೆಗಾರ ಅಡಿವೆಪ್ಪ ಶಿವಪ್ಪ ರೊಟ್ಟಿ ಹೇಳಿದರು.

‘ವಾರಕ್ಕೆ, ಗಿಡವೊಂದಕ್ಕೆ ಕನಿಷ್ಠ 500 ಲೀಟರ್ ನೀರುಣಿಸಿದರೆ ಭರ್ಜರಿ ಫಸಲು ಸಿಗಲಿದೆ. ಆದರೆ, ಈಗ ಕೇವಲ 100 ಲೀಟರ್‌ ನೀರುಣಿಸುತ್ತಿದ್ದೇವೆ. ಬೇಸಿಗೆ ಉತ್ಪನ್ನ ಪಡೆಯುವ ಆಸೆ ಕೈ ಬಿಟ್ಟಿದ್ದೇವೆ. ಈ ವರ್ಷ ಗಿಡ ಉಳಿಸಿಕೊಂಡರೆ ಸಾಕು ಎಂದು ಹರಸಾಹಸ ನಡೆಸಿದ್ದೇವೆ’ ಎಂದು ಅವರು ಹೇಳಿದರು.

‘ನೀರು ಕಡಿಮೆಯಾಗಿ, ‘ಸುರಳಿ ಪೂಚಿ’ ರೋಗ ಉಲ್ಬಣಿಸಿದೆ. ಇದರಿಂದ ಬಹುತೇಕ ಗಿಡಗಳಲ್ಲಿ ಹೂವು ಬಿಟ್ಟೇ ಇಲ್ಲ. ಔಷಧಿ ಸಿಂಪಡಿಸಿದರೂ ಪ್ರಯೋಜನ ಸಿಗದಾಗಿದೆ’ ಎಂದು ತಾಂಬಾ ಗ್ರಾಮದ ರೈತ ಬೀರಪ್ಪ ವಗ್ಗಿ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಇಳುವರಿಗೆ ಹೊಡೆತ
‘ನೀರಿನ ಕೊರತೆಯಿಂದ ನಿಂಬೆ ಗಿಡದಲ್ಲಿನ ಹೂವು ಉದುರುತ್ತಿದೆ. ಇದು ವಾರ್ಷಿಕ ಉತ್ಪನ್ನದ ಮೇಲೆ ತೀವ್ರ ಪರಿಣಾಮ ಬೀರಲಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ ಇನಾಮದಾರ.

ವಿಜಯಪುರ ಜಿಲ್ಲೆ ರಾಜ್ಯದಲ್ಲಿನ ನಿಂಬೆ ಕಣಜ. ರಾಜ್ಯದಲ್ಲಿ ಬೆಳೆಯುವ ನಿಂಬೆಯಲ್ಲಿ ಅರ್ಧಕ್ಕೂ ಹೆಚ್ಚು ಜಿಲ್ಲೆಯದೇ ಪಾಲು. ಇಂಡಿ ತಾಲ್ಲೂಕು ಒಂದರಲ್ಲೇ ಹೆಚ್ಚಿನ ಪ್ರಮಾಣದ ಬೆಳೆಯಿದೆ.

ಅಂದಾಜಿನ ಪ್ರಕಾರ ವಾರ್ಷಿಕವಾಗಿ ಜಿಲ್ಲೆಯೊಂದರಲ್ಲೇ 1.80 ಲಕ್ಷ ಟನ್‌ ನಿಂಬೆ ಬೆಳೆಯಲಾಗುತ್ತದೆ. ಆದರೆ ಈ ಬಾರಿಶೇ 30ರಿಂದ ಶೇ 40ರಷ್ಟು ಇಳುವರಿ ಕುಸಿಯಬಹುದು ಎಂದು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದರು.

*
ನಿಂಬೆ ಗಿಡದಲ್ಲಿನ ಹೂವು–ಹೀಚು ಉದುರುವುದು ಹೆಚ್ಚುತ್ತಿದೆ. ಇದು, ನಮ್ಮ ಬೇಸಿಗೆ ಬೆಳೆಯ ಕನಸನ್ನೇ ಕಮರಿಸಿದೆ.
–ಅಡಿವೆಪ್ಪ ಶಿವಪ್ಪ ರೊಟ್ಟಿ, ನಿಂಬೆ ಬೆಳೆಗಾರ

*
ಇದೇ ಪರಿಸ್ಥಿತಿ ಮುಂದುವರೆದರೆ ನಿಂಬೆ ಸಂಪೂರ್ಣ ನಾಶವಾಗುವ ಭಯ ಕಾಡ್ತಿದೆ.
–ಮಹಾದೇವ ಮಸಳಿ, ನಿಂಬೆ ಬೆಳೆಗಾರ

ಬೆಳೆಯ ಚಿತ್ರಣ
* 7,150 ಹೆಕ್ಟೇರ್‌ನಲ್ಲಿ ಬೆಳೆ
* 8000 ರಿಂದ 9000 ಬೆಳೆಗಾರರು
* ಶೇ 30ರಿಂದ ಶೇ 40ರಷ್ಟು ಇಳುವರಿ ಕುಸಿತ
* 1 ಎಕರೆಗೆ 10 ಟನ್‌ ಸಹಜ ಇಳುವರಿ
* 6 ರಿಂದ 7 ಟನ್‌ ಇಳುವರಿ ಪ್ರಸ್ತುತ ಬೇಸಿಗೆಯಲ್ಲಿ
(ಆಧಾರ: ಜಿಲ್ಲಾ ತೋಟಗಾರಿಕೆ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT