ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಎಫ್‌ಪಿಐ ಹೂಡಿಕೆ ಶೇ 15ರಷ್ಟು ಏರಿಕೆ

Published 16 ನವೆಂಬರ್ 2023, 14:37 IST
Last Updated 16 ನವೆಂಬರ್ 2023, 14:37 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ದೇಶದ ಷೇರುಗಳಲ್ಲಿ ಮಾಡಿರುವ ಹೂಡಿಕೆಯ ಒಟ್ಟು ಮೊತ್ತವು ಸೆಪ್ಟೆಂಬರ್ ತ್ರೈಮಾಸಿಕದ ಅಂತ್ಯಕ್ಕೆ ₹54.03 ಲಕ್ಷ ಕೋಟಿಯಷ್ಟು ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಆಗಿದ್ದ ಹೂಡಿಕೆಗೆ ಹೋಲಿಸಿದರೆ ಶೇ 15ರಷ್ಟು ಏರಿಕೆ ಆಗಿದೆ.

ಮಾರ್ನಿಂಗ್‌ಸ್ಟಾರ್ ಸಂಸ್ಥೆಯ ವರದಿಯ ಪ್ರಕಾರ, 2022ರ ಸೆಪ್ಟೆಂಬರ್ ತ್ರೈಮಾಸಿಕದ ಅಂತ್ಯದಲ್ಲಿ ಭಾರತದ ಷೇರುಗಳಲ್ಲಿ ಎಫ್‌ಪಿಐ ಹೂಡಿಕೆಯು ₹46.97 ಲಕ್ಷ ಕೋಟಿಯಷ್ಟು ಇತ್ತು. ದೇಶಿ ಷೇರುಪೇಟೆಗಳಲ್ಲಿ ನಡೆದ ಉತ್ತಮ ವಹಿವಾಟು ಮತ್ತು ವಿದೇಶಿ ಬಂಡವಾಳ ಒಳಹರಿವಿನಿಂದ ಈ ಪ್ರಮಾಣದ ಬೆಳವಣಿಗೆ ಆಗಿದೆ ಎಂದು ಅದು ತಿಳಿಸಿದೆ.

ಜೂನ್‌ ತ್ರೈಮಾಸಿಕಕ್ಕೆ ಹೋಲಿಸಿದರೆ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಹೂಡಿಕೆಯು ಶೇ 4ರಷ್ಟು ಏರಿಕೆ ಕಂಡಿದೆ. ಜೂನ್‌ ತ್ರೈಮಾಸಿಕದಲ್ಲಿ ₹51.95 ಲಕ್ಷ ಕೋಟಿಯಷ್ಟು ಹೂಡಿಕೆ ಆಗಿತ್ತು. ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 

ಕಂಪನಿಗಳ ಗಳಿಕೆ ಉತ್ತಮ ಆಗಿರುವುದು, ಆರ್ಥಿಕ ಚಟುವಟಿಕೆಗಳ ಬೆಳವಣಿಗೆ ಸ್ಥಿರವಾಗಿರುವುದು ಮತ್ತು ಚೀನಾದ ಆರ್ಥಿಕತೆ ಎದುರಿಸಿದ ಸವಾಲುಗಳಿಂದಾಗಿ ವಿದೇಶಿ ಹೂಡಿಕೆದಾರರು ಭಾರತದ ಷೇರುಗಳಲ್ಲಿ ಜುಲೈನಲ್ಲಿ ₹47,144 ಕೋಟಿ ಹೂಡಿಕೆ ಮಾಡಿದರು. ಆದರೆ, ಆಗಸ್ಟ್‌ನಲ್ಲಿ ಹೂಡಿಕೆ ಪ್ರಮಾಣವು ₹12,284 ಕೋಟಿಗೆ ಇಳಿಕೆ ಕಂಡಿತು. ಕಚ್ಚಾ ತೈಲ ದರ ಏರಿಕೆ ಮತ್ತು ಹಣದುಬ್ಬರದ ಆತಂಕದಿಂದಾಗಿ ಜಾಗತಿಕ ಆರ್ಥಿಕ ಬೆಳವಣಿಗೆ ಇನ್ನಷ್ಟು ಕಡಿಮೆ ಆಗುವ ಕಳವಳ ವ್ಯಕ್ತವಾಗಿದ್ದೇ ಆಗಸ್ಟ್‌ನಲ್ಲಿ ಹೂಡಿಕೆ ತಗ್ಗಲು ಕಾರಣ ಎಂದು ಅದು ಹೇಳಿದೆ.

ಅಮೆರಿಕದ ಬಾಂಡ್‌ ಮೇಲಿನ ಹೂಡಿಕೆಯಿಂದ ಹೆಚ್ಚು ಲಾಭ ಬರಲು ಆರಂಭಿಸಿದ್ದು ಸಹ ಭಾರತದಲ್ಲಿ ವಿದೇಶಿ ಹೂಡಿಕೆ ಕಡಿಮೆ ಆಗಲು ಕಾರಣವಾಯಿತು. ಸೆಪ್ಟೆಂಬರ್‌ನಲ್ಲಿ ಷೇರುಗಳನ್ನು ಮಾರಾಟ ಮಾಡಲು ಗಮನ ಹರಿಸಿದರು. ಸೆ‍‍ಪ್ಟೆಂಬರ್‌ನಲ್ಲಿ ಒಟ್ಟು ₹14,774 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು. ಅಕ್ಟೋಬರ್‌ನಲ್ಲಿಯೂ ಷೇರುಗಳನ್ನು ಮಾರಾಟ ಮಾಡುವುದು ಮುಂದುವರಿಸಿದರು. ಇದೀಗ ನವೆಂಬರ್ ತಿಂಗಳಿನಲ್ಲಿಯೂ ಬಂಡವಾಳ ಹಿಂತೆಗೆತ ಮುಂದುವರಿಸಿದೆ ಎಂದು ಸಂಸ್ಥೆಯು ಮಾಹಿತಿ ನೀಡಿದೆ.

‘ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಳ’

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆಯು ಹೆಚ್ಚಾಗುತ್ತಿದೆ. ಚಿಲ್ಲರೆ ಹೂಡಿಕೆದಾರರ ಈ ಸಮೂಹವು ಒಂದು ಅಗಾಧವಾದ ಶಕ್ತಿಯಾಗಿ ಮಾರ್ಪಟ್ಟಿದೆ ಎಂದು ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ವ್ಯವಸ್ಥಾಪಕ ನಿರ್ದೇಶಕ ಆಶಿಶ್‌ಕುಮಾರ್ ಚೌಹಾಣ್ ಹೇಳಿದ್ದಾರೆ. ಚಿಲ್ಲರೆ ಹೂಡಿಕೆದಾರರು 2023ರಲ್ಲಿ ಈವರೆಗೆ ₹28 ಲಕ್ಷ ಕೋಟಿ ಹೂಡಿಕೆ ಮಾಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವವರಿಗಿಂತಲೂ ಹೆಚ್ಚಿನ ಮೊತ್ತ ಇದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಚಿಲ್ಲರೆ ಹೂಡಿಕೆದಾರರು ₹60 ಲಕ್ಷ ಕೋಟಿ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಷೇರುಪೇಟೆಯಲ್ಲಿನ ಹೂಡಿಕೆದಾರರ ಒಟ್ಟು ಸಂಪತ್ತಿನ ಐದನೇ ಒಂದು ಭಾಗ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT