ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿರೀಕ್ಷಿತ ವಿದ್ಯಮಾನ: 6 ಯೋಜನೆ ರದ್ದುಪಡಿಸಿದ ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌

ಮ್ಯೂಚುವಲ್‌ ಫಂಡ್ಸ್‌ ವಹಿವಾಟಿನ ಅನಿರೀಕ್ಷಿತ ವಿದ್ಯಮಾನ
Last Updated 25 ಏಪ್ರಿಲ್ 2020, 2:12 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಎಂಟನೇ ಅತಿದೊಡ್ಡ ಮ್ಯೂಚುವಲ್‌ ಫಂಡ್‌ ಸಂಸ್ಥೆ ಆಗಿರುವ ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌, ತನ್ನ ಆರು ಸಾಲ ನಿಧಿ (ಡೆಟ್‌ ಸ್ಕೀಮ್‌) ಯೋಜನೆಗಳನ್ನು ಹಠಾತ್ತಾಗಿ ರದ್ದುಪಡಿಸಿದೆ.

ಬಾಂಡ್‌ ಮಾರುಕಟ್ಟೆಯಲ್ಲಿ ಕಂಡು ಬಂದಿರುವ ನಗದು ಕೊರತೆ ಮತ್ತುಹಣ ಹಿಂದೆ ಪಡೆಯಲು ಹೂಡಿಕೆದಾರರಿಂದ ಹೆಚ್ಚಿದ ಒತ್ತಡದ ಕಾರಣಕ್ಕೆ ಅನಿವಾರ್ಯವಾಗಿ ಈ ನಿರ್ಧಾರಕ್ಕೆ ಬರಬೇಕಾಯಿತು ಎಂದು ಸಂಸ್ಥೆಯು ತಿಳಿಸಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ನಿಧಿ ನಿರ್ವಹಣೆ ಸಂಸ್ಥೆಯೊಂದು ತನ್ನ ಸ್ಕೀಮ್‌ಗಳನ್ನು ರದ್ದುಪಡಿಸಿದ ಮೊದಲ ನಿದರ್ಶನ ಇದಾಗಿದೆ.

ಸಂಸ್ಥೆಯು ತನ್ನ ಫ್ರ್ಯಾಂಕ್ಲಿನ್‌ ಇಂಡಿಯಾ ಲೊ ಡ್ಯುರೇಷನ್‌ ಫಂಡ್‌, ,ಡೈನಮಿಕ್‌ ಅರ್ಕುವಲ್‌ ಫಂಡ್‌, ಕ್ರೆಡಿಟ್‌ ರಿಸ್ಕ್‌ ಫಂಡ್‌, ಶಾರ್ಟ್‌ಟರ್ಮ್‌ ಇನ್‌ಕಂ ಪ್ಲ್ಯಾನ್‌, ಅಲ್ಟ್ರಾ ಶಾರ್ಟ್‌ ಬಾಂಡ್‌ ಫಂಡ್‌ ಮತ್ತು ಇನ್‌ಕಂ ಅಪಾರ್ಚುನಿಟಿಸ್‌ ಫಂಡ್‌ ಸ್ಕೀಮ್‌ಗಳನ್ನು ರದ್ದುಪಡಿಸಿದೆ.

ಕೋವಿಡ್‌ ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಕಾರ್ಪೊರೇಟ್‌ ಬಾಂಡ್‌ ಮಾರುಕಟ್ಟೆಯ ಕೆಲ ವಲಯಗಳಲ್ಲಿ ನಗದು ಲಭ್ಯತೆ ಪ್ರಮಾಣವು ನಿರಂತರವಾಗಿ ಕಡಿಮೆಯಾಗುತ್ತಿದೆ. ಸ್ಥಿರ ವರಮಾನ ವಲಯದಲ್ಲಿ ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳಿಂದ ತಮ್ಮ ಹೂಡಿಕೆ (ಯುನಿಟ್‌) ರದ್ದುಪಡಿಸಿ ಹಣ ಹಿಂದೆ ಪಡೆಯಲು ಧಾವಂತ ತೋರುತ್ತಿದ್ದಾರೆ.

ಈ ಯೋಜನೆಗಳಲ್ಲಿ ತೊಡಗಿಸಿದ (ಯೂನಿಟ್‌ ಮೌಲ್ಯ) ಹಣದ ರಕ್ಷಣೆಗೆ ಮತ್ತು ಹೂಡಿಕೆದಾರರು ವ್ಯವಸ್ಥಿತವಾಗಿ ಹೂಡಿಕೆಯಿಂದ ಹಿಂದೆ ಸರಿಯಲು ಅವಕಾಶ ಮಾಡಿಕೊಡಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಏನಿದು ಡೆಟ್‌ ಫಂಡ್

ಸರ್ಕಾರಿ ಮತ್ತು ಖಾಸಗಿ ಬಾಂಡ್‌, ಟ್ರೆಷರಿ ಬಿಲ್‌ಗಳಂತಹ ಸ್ಥಿರ ಆದಾಯದ ಸಾಲಪತ್ರಗಳಲ್ಲಿ ಮ್ಯೂಚುವಲ್‌ ಫಂಡ್‌ಗಳು ಹಣ ತೊಡಗಿಸುವುದಕ್ಕೆ ಡೆಟ್‌ ಫಂಡ್ಸ್‌ (Debt funds) ಎನ್ನುತ್ತಾರೆ.

ಪರಿಣಾಮ ಏನು

ಈ ವಿದ್ಯಮಾನವು ಇತರ ಡೆಟ್‌ ಸ್ಕೀಮ್‌ಗಳ ಮೇಲೆಯೂ ಪರಿಣಾಮ ಬೀರಲಿದೆ ಎನ್ನುವ ಆತಂಕ ಮ್ಯೂಚುವಲ್‌ ಫಂಡ್‌ ಉದ್ದಿಮೆಯಲ್ಲಿ ವ್ಯಕ್ತವಾಗುತ್ತಿದೆ. ಹೂಡಿಕೆದಾರರು ಆತಂಕಪಡಬೇಕಾಗಿಲ್ಲ. ಇಂತಹ ಸ್ಕೀಮ್‌ಗಳಲ್ಲಿ ಸಾಕಷ್ಟು ನಗದು ಲಭ್ಯತೆ ಇದೆ ಎಂದು ಭಾರತದ ಮ್ಯೂಚುವಲ್‌ ಫಂಡ್ಸ್‌ ಸಂಘವು (ಎಎಂಎಫ್‌ಐ) ಭರವಸೆ ನೀಡಿದೆ.

ಮ್ಯೂಚುವಲ್‌ ಫಂಡ್‌ ಬಿಕ್ಕಟ್ಟಿನ ವಿವರ

* ಕೋವಿಡ್‌ ಬಿಕ್ಕಟ್ಟಿನ ಕಾರಣಕ್ಕೆ ಕಂಪನಿಗಳು ಮತ್ತು ಹೂಡಿಕೆದಾರರು ತಮ್ಮ ಬಳಿಯಲ್ಲಿ ನಗದು ಹೊಂದಲು ಧಾವಂತ ತೋರುತ್ತಿದ್ದಾರೆ. ಹೂಡಿಕೆದಾರರಿಗೆ ಹಣ ಮರಳಿಸಲು ಸಾಧ್ಯವಾಗದ ಕಾರಣಕ್ಕೆ ಸಂಪತ್ತು ನಿರ್ವಹಣಾ ಸಂಸ್ಥೆಯೊಂದು ತನ್ನ ಆರು ಸಾಲ ನಿಧಿ ಸ್ಕೀಮ್‌ಗಳನ್ನು ರದ್ದುಪಡಿಸಿದೆ

* ಮ್ಯೂಚುವಲ್‌ ಫಂಡ್ ಸ್ಕೀಮ್‌ಗಳನ್ನು ರದ್ದುಪಡಿಸಿರುವುದು ದೇಶದಲ್ಲಿನ ಮೊದಲ ವಿದ್ಯಮಾನ .

* ಈ ಬೆಳವಣಿಗೆಯು ಉದ್ದಿಮೆಯಲ್ಲಿ ಕಂಪನ ಮೂಡಿಸಿದೆ. ಹೂಡಿಕೆದಾರರೂ ಕಳವಳಗೊಂಡಿದ್ದಾರೆ

* ಸ್ಥಿರ ಆದಾಯದ ಉದ್ದೇಶದಿಂದ ಸಾಮಾನ್ಯ ಮತ್ತು ದೊಡ್ಡ ಹೂಡಿಕೆದಾರರು ತೊಡಗಿಸಿದ್ದ ಹಣ ಮರಳಿ ಕೈಸೇರುವುದು ಅನಿಶ್ಚಿತವಾಗಿದೆ

* ದೇಶಿ ಮ್ಯೂಚುವಲ್‌ ಫಂಡ್ಸ್‌ ಉದ್ದಿಮೆಯಲ್ಲಿನ 44 ಸಂಸ್ಥೆಗಳಲ್ಲಿ ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ 8ನೇಶ್ರೇಯಾಂಕ ಹೊಂದಿದೆ. ದೇಶದಲ್ಲಿ 25 ವರ್ಷಗಳಿಂದ ವಹಿವಾಟು ನಡೆಸುತ್ತಿದೆ

* ₹ 1 ಲಕ್ಷ ಕೋಟಿ: ಸಂಸ್ಥೆಯು ನಿರ್ವಹಿಸುತ್ತಿರುವ ಸಂಪತ್ತಿನ ಮೌಲ್ಯ

* ₹ 25,000 ಕೋಟಿಗಳಿಂದ ₹ 30,000 ಕೋಟಿ: ರದ್ದಾದ 6 ಯೋಜನೆಗಳಲ್ಲಿ ಹೂಡಿಕೆಯಾಗಿರುವ ಮೊತ್ತ

* ಶೇ 1.4: ದೇಶಿ ಮ್ಯೂಚುವಲ್‌ ಫಂಡ್ಸ್‌ ಉದ್ದಿಮೆಯ ಒಟ್ಟಾರೆ ಸಂಪತ್ತು ನಿರ್ವಹಣೆಯಲ್ಲಿ ರದ್ದಾಗಿರುವ ಆರು ಸ್ಕೀಮ್‌ಗಳ ನಿರ್ವಹಣಾ ಸಂಪತ್ತಿನ ಮೊತ್ತ

* ಹೂಡಿಕೆದಾರರು ಈ 6 ಸ್ಕೀಮ್‌ಗಳಿಂದ ಸದ್ಯಕ್ಕೆ ಹೊರ ಬರುವಂತಿಲ್ಲ. ಲಾಭಾಂಶವನ್ನೂ ನಿರೀಕ್ಷಿಸುವಂತಿಲ್ಲ. ಹೂಡಿಕೆಯನ್ನೂ ಮಾಡುವ ಹಾಗಿಲ್ಲ. ಸಂಸ್ಥೆಯು ಹೊಂದಿರುವ ಬಾಂಡ್‌ಗಳನ್ನು ಇತರರು ಖರೀದಿಸಿದ ನಂತರವೇ ಹೂಡಿಕೆದಾರರ ಹಣ ವಾಪಸ್‌. ಕೆಲ ತಿಂಗಳವರೆಗೆ ಕಾಯುವುದು ಅನಿವಾರ್ಯ

* ₹ 2 ಲಕ್ಷ ಕೋಟಿ: ಹೂಡಿಕೆ ಹಿಂದೆ ಪಡೆಯಲು ಹೆಚ್ಚಿದ ಒತ್ತಡದ ಕಾರಣಕ್ಕೆ ಉದ್ದಿಮೆಯ ಒಟ್ಟಾರೆ ಡೆಟ್‌ ಫಂಡ್ಸ್‌ಗಳಿಂದ ಮಾರ್ಚ್‌ ತಿಂಗಳಲ್ಲಿ ಹೊರ ಹೋದ ಮೊತ್ತ

* ಉದ್ದಿಮೆಯಲ್ಲಿ ಒಳಹರಿವಿಗಿಂತ (₹ 12 ಲಕ್ಷ ಕೋಟಿ ಹೂಡಿಕೆ) ಹೊರ ಹರಿವಿನ ಪ್ರಮಾಣವೇ (₹ 14 ಲಕ್ಷ ಕೋಟಿ) ಹೆಚ್ಚು

* ಡೆಟ್‌ ಫಂಡ್ಸ್‌: ಖಾಸಗಿ ಮತ್ತು ಸರ್ಕಾರಿ ಸಾಲ ಪತ್ರಗಳಲ್ಲಿನ ಹಣ ಹೂಡಿಕೆ

* ‘ಎಯುಎಂ’ ಹೆಚ್ಚಳ: ಐದು ವರ್ಷಗಳಲ್ಲಿ ಉದ್ದಿಮೆಯು ನಿರ್ವಹಿಸುವ ಸಂಪತ್ತಿನ ಮೊತ್ತವು (ಎಯುಎಂ) ಗಮನಾರ್ಹವಾಗಿ ಹೆಚ್ಚಳಗೊಂಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT