ಶನಿವಾರ, ಮಾರ್ಚ್ 6, 2021
31 °C
ಸಂದೇಹಕ್ಕೆ ಎಡೆಮಾಡಿಕೊಟ್ಟ ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಅಧ್ಯಯನ ವರದಿ

ಜಿಡಿಪಿ ಹೆಚ್ಚಳ: ಹೊಸ ಅನುಮಾನ

ಎಎಫ್‌ಪಿ/ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ಆರ್ಥಿಕ ವೃದ್ಧಿ (ಜಿಡಿಪಿ) ದರದ ಬಗ್ಗೆ ಸರ್ಕಾರಿ ಸಂಸ್ಥೆಯ ವರದಿಯು ಹೊಸ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಆಫೀಸ್‌ (ಎನ್‌ಎಸ್‌ಎಸ್‌ಒ) ನಡೆಸಿದ ಅಧ್ಯಯನದಲ್ಲಿ, ಆರ್ಥಿಕ ವೃದ್ಧಿ ದರ ಲೆಕ್ಕ ಹಾಕುವಲ್ಲಿ ಗಮನಾರ್ಹ ದೋಷಗಳು ಇರುವುದು ಪತ್ತೆಯಾಗಿದೆ.

ಆರ್ಥಿಕ ವೃದ್ಧಿ ದರ ಲೆಕ್ಕ ಹಾಕಲು ಪರಿಗಣಿಸಿರುವ ಕಂಪನಿಗಳ ಪೈಕಿ ಒಂದು ಮೂರಾಂಶದಷ್ಟು ಸಂಸ್ಥೆಗಳು ಬಾಗಿಲು ಹಾಕಿವೆ ಇಲ್ಲವೆ ಉತ್ಪಾದನೆ ನಿಲ್ಲಿಸಿವೆ ಅಥವಾ ಅವುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ ಎಂದು ‘ಎನ್‌ಎಸ್‌ಎಸ್‌ಒ’ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರಿ ಸಂಸ್ಥೆಗಳು ಬಿಡುಗಡೆ ಮಾಡಿರುವ ವರದಿ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ ಎರಡನೆ ನಿದರ್ಶನ ಇದಾಗಿದೆ. ದೇಶದಲ್ಲಿನ ನಿರುದ್ಯೋಗ ಪ್ರಮಾಣವು 2017–18ರಲ್ಲಿ 45 ವರ್ಷಗಳಲ್ಲೇ ಗರಿಷ್ಠ ಮಟ್ಟದಲ್ಲಿ (ಶೇ 6.1) ಇದೆ ಎಂದು ಇದಕ್ಕೂ ಮೊದಲು ಮಾಹಿತಿ ಸೋರಿಕೆಯಾಗಿತ್ತು.

‘ಭಾರತದ ಜಿಡಿಪಿ ವೃದ್ಧಿ ದರ ಮತ್ತು ಅದಕ್ಕೆ ಸಂಬಂಧಿಸಿದ ಅಂಕಿ ಅಂಶಗಳು ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಪರಾಮರ್ಶೆಗೆ ಒಳಪಟ್ಟಿವೆ. ಹೊಸ ವರದಿಗಳು ಜಿಡಿಪಿ ವೃದ್ಧಿ ದರ ಹೆಚ್ಚಳದ ಖಚಿತತೆ ಮತ್ತು ವಿಶ್ವಾಸಾರ್ಹತೆ ಬಗ್ಗೆ ಹೊಸ ಪ್ರಶ್ನೆಗಳಿಗೆ ಎಡೆಮಾಡಿ
ಕೊಟ್ಟಿವೆ’ ಎಂದು ಅರ್ಥಶಾಸ್ತ್ರಜ್ಞ ಅಶಿತೋಷ್‌ ದಾತಾರ್‌ ಹೇಳಿದ್ದಾರೆ.

ತಗ್ಗಿದ ಜಿಡಿಪಿ: ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿ ಇದ್ದಾಗಿನ ವೃದ್ಧಿ ದರವನ್ನು ಸದ್ಯದ ಎನ್‌ಡಿಎ ಸರ್ಕಾರವು ಹಿಂದಿನ ವರ್ಷ ತಗ್ಗಿಸಿತ್ತು.

ನಾಲ್ಕು ವರ್ಷಗಳ ಹಿಂದೆ ಪರಿಚಯಿಸಿದ್ದ ಜಿಡಿಪಿ ಲೆಕ್ಕ ಹಾಕುವ ಹೊಸ ವಿಧಾನದಲ್ಲಿ, ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿನ ಸರಾಸರಿ ಜಿಡಿಪಿ ವೃದ್ಧಿ ದರವು, 2014ರಲ್ಲಿ  ಬಿಜೆಪಿ ಅಧಿಕಾರಕ್ಕೆ ಬಂದ ನಂತರದ ವರ್ಷಗಳಲ್ಲಿನ ವೃದ್ಧಿ ದರಕ್ಕಿಂತ ಕಡಿಮೆ ಇತ್ತು ಎಂದು ಎನ್‌ಡಿಎ ಸರ್ಕಾರ ಹೇಳಿಕೊಂಡಿತ್ತು.

ಈ ಬದಲಾವಣೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಬಿಜೆಪಿ, ಹೊಸ ವಿಧಾನವು ವಿಶ್ವದ ಇತರ ಪ್ರಮುಖ ಆರ್ಥಿಕತೆಗಳಲ್ಲಿ ಬಳಸಲಾಗುತ್ತಿದೆ ಎಂದು ಹೇಳಿಕೊಂಡಿತ್ತು.

ಸರ್ಕಾರಕ್ಕೆ ಮುಜುಗರ:  ಜಿಡಿಪಿ ಕುರಿತು ಹೊಸ ಅನುಮಾನಗಳಿಗೆ ಎಡೆಮಾಡಿಕೊಟ್ಟಿರುವ ವಿದ್ಯಮಾನವು, ಸಾರ್ವತ್ರಿಕ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪಾಲಿಗೆ ತೀವ್ರ ಮುಜುಗರ ಉಂಟು ಮಾಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಮೋದಿ ಅವರು ನಿಯಮಿತವಾಗಿ ತಮ್ಮ ಆರ್ಥಿಕ ಸಾಧನೆಗಳ ಬಗ್ಗೆ ಹೇಳಿಕೊಳ್ಳುತ್ತಿರುತ್ತಾರೆ. ಜಿಡಿಪಿ ದರ ಎನ್‌ಡಿಎ ಸರ್ಕಾರದ ಅಧಿಕಾರಾವಧಿಯಲ್ಲಿ ಹಿಂದಿನ ಸರ್ಕಾರದ ಅವಧಿಗಿಂತ ಉತ್ತಮವಾಗಿದೆ ಎಂದು ಬಿಂಬಿಸಲು ಸರ್ಕಾರ ಅಂಕಿ ಅಂಶಗಳನ್ನೇ ತಿರುಚಿದೆ ಎಂದು ಕಾಂಗ್ರೆಸ್‌ ಪಕ್ಷ ಆರೋಪಿಸುತ್ತಲೇ ಇದೆ.

‘ಅಂಕಿ ಅಂಶ ವಿವಾದ ಇತ್ಯರ್ಥಕ್ಕೆ ಯತ್ನ’

ಮುಂಬೈ: ‘ಆರ್ಥಿಕತೆಗೆ ಸಂಬಂಧಿಸಿದ ಅಂಕಿ ಅಂಶಗಳ ವಿಶ್ವಾಸಾರ್ಹತೆ ಬಗ್ಗೆ ಕಂಡು ಬಂದಿರುವ ಸಂದೇಹಗಳ ನಿವಾರಣೆಗೆ ವಿವೇಕಯುತ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು 15ನೆ ಹಣಕಾಸು ಆಯೋಗದ ಅಧ್ಯಕ್ಷ ಎನ್‌. ಕೆ. ಸಿಂಗ್‌ ಹೇಳಿದ್ದಾರೆ.

‘ವಿಶ್ವಾಸಾರ್ಹ ದತ್ತಾಂಶಗಳನ್ನು ಪರಿಗಣಿಸುವ ಸರ್ವಸಮ್ಮತ ವಿಧಾನಗಳ ಬಗ್ಗೆ ನಾವು ನಮ್ಮ ಪ್ರಯತ್ನಗಳನ್ನು ಮಾಡುತ್ತೇವೆ. ಈ ನಿಟ್ಟಿನಲ್ಲಿ ಮಹಾ ಲೇಖಪಾಲರು (ಸಿಎಜಿ) ಮತ್ತು ಆರ್‌ಬಿಐ ನೆರವು ಪಡೆದುಕೊಳ್ಳಲಾಗುವುದು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆರ್ಥಿಕತೆ ಕುರಿತ ಅಂಕಿ ಅಂಶಗಳ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪದ ಬಗ್ಗೆ ಅರ್ಥಶಾಸ್ತ್ರಜ್ಞರಿಂದಲೂ ಆತಂಕ ವ್ಯಕ್ತವಾಗಿತ್ತು. ಸಾಂಖ್ಯಿಕ ಸಂಘಟನೆಗಳ ಸ್ವಾತಂತ್ರ್ಯ ಮತ್ತು ಸಮಗ್ರತೆ ಕಾಪಾಡುವ ಅಗತ್ಯ ಇದೆ ಎಂದು ಅವರೆಲ್ಲ ಬಲವಾಗಿ ಪ್ರತಿಪಾದಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು