ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾದ ಶ್ರೀಮಂತರ ಪಟ್ಟಿ: ಮುಕೇಶ್ ಅಂಬಾನಿ ಹಿಂದಿಕ್ಕಿದ ಗೌತಮ್ ಅದಾನಿ ನಂ.1

Published 5 ಜನವರಿ 2024, 10:32 IST
Last Updated 5 ಜನವರಿ 2024, 10:33 IST
ಅಕ್ಷರ ಗಾತ್ರ

ಮುಂಬೈ: ಏಷ್ಯಾದ ಅತಿ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಇಬ್ಬರು ಉದ್ಯಮಿಗಳು ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಈ ಬಾರಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ ಅವರನ್ನು ಅದಾನಿ ಸಮೂಹದ ಗೌತಮ್ ಅದಾನಿ ಹಿಂದಿಕ್ಕಿ ಅಗ್ರಪಟ್ಟಕ್ಕೇರಿದ್ದಾರೆ ಎಂದು ಬ್ಲೂಮ್‌ಬರ್ಗ್‌ ಬಿಲೆನಿಯರ್ಸ್‌ ಇಂಡೆಕ್ಸ್ (BBI) ವರದಿ ಹೇಳಿದೆ.

ಜಾಗತಿಕ ಮಟ್ಟದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ 12ನೇ ಸ್ಥಾನಕ್ಕೇರಿದ್ದಾರೆ. ಜಗತ್ತಿನ ಅತಿ ಶ್ರೀಮಂತರ ಪಟ್ಟಿಯ ಮೊದಲ ಸ್ಥಾನದಲ್ಲಿ ಎಲಾನ್ ಮಸ್ಕ್‌ ಇದ್ದಾರೆ. ಮತ್ತೊಂದೆಡೆ ಅಂಬಾನಿ 13ನೇ ಸ್ಥಾನದಲ್ಲಿದ್ದಾರೆ. ಕಳೆದ ಒಂದು ವರ್ಷದಲ್ಲಿ ಈ ಇಬ್ಬರು ಭಾರತೀಯ ಶ್ರೀಮಂತರು ತಮ್ಮ ಸ್ಥಾನ ಹೆಚ್ಚಿಸಿಕೊಂಡಿದ್ದಾರೆ. 2023ರ ಡಿಸೆಂಬರ್‌ಗೂ ಮೊದಲು ಅದಾನಿ 15ನೇ ಸ್ಥಾನದಲ್ಲಿದ್ದರು, ಅಂಬಾನಿ 14ನೇ ಸ್ಥಾನದಲ್ಲಿದ್ದರು. 

₹8,115 ಶತಕೋಟಿ ಸಂಪತ್ತಿನೊಂದಿಗೆ ಅದಾನಿ ಸಮೂಹದ ಒಡೆಯ ಏಷ್ಯಾದ ಅತಿ ಶ್ರೀಮಂತ ಹಾಗೂ ಜಗತ್ತಿನ ಶ್ರಿಮಂತರ ಪಟ್ಟಿಯಲ್ಲಿ 12ನೇ ಸ್ಥಾನಕ್ಕೇರಿದ್ದಾರೆ. ಈ ಹಿಂದಿನ ಪಟ್ಟಿಗಿಂತ ಈಗ ಅವರ ಒಟ್ಟು ಆಸ್ತಿ ₹637 ಶತಕೋಟಿಯಷ್ಟು ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ₹1,105 ಶತಕೋಟಿ ಆಸ್ತಿ ಹೆಚ್ಚಳಗೊಂಡಿದೆ. ಹಿಂಡನ್‌ಬರ್ಗ್ ವರದಿಯಿಂದ ಅದಾನಿ ಆಸ್ತಿ ಮೌಲ್ಯ ಕುಸಿದಿತ್ತು.

2023ರ ಜನವರಿಯಲ್ಲಿ ನ್ಯೂಯಾರ್ಕ್‌ ಮೂಲದ ಹಿಂಡನ್‌ಬರ್ಗ್ ಸಂಶೋಧನಾ ಸಂಸ್ಥೆಯು ವರದಿಯೊಂದನ್ನು ಬಹಿರಂಗಪಡಿಸಿ, ಅದಾನಿ ಸಮೂಹವು ಷೇರು ಮೌಲ್ಯಗಳನ್ನು ತಿರುಚುತ್ತಿದೆ, ಷೇರು ಮಾರುಕಟ್ಟೆಯ ಲೆಕ್ಕಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿತ್ತು. ಇದರಿಂದ ಅದಾನಿ ಸಮೂಹ ಕಂಪನಿಗಳ ಷೇರು ಮೌಲ್ಯ ಶೇ 60ರಷ್ಟು ಕುಸಿದಿತ್ತು. ಇದರಿಂದ ಇವರ ಒಟ್ಟು ಸಂಪತ್ತು ₹5,737 ಶತಕೋಟಿಯಷ್ಟು ಕರಗಿತ್ತು.

ಗುಜರಾತ್‌ನ ಅಹಮದಾಬಾದ್ ಮೂಲದ ಅದಾನಿ ಸಮೂಹಕ್ಕೆ ಗೌತಮ್ ಅದಾನಿ ಅಧ್ಯಕ್ಷರಾಗಿದ್ದಾರೆ. ದೇಶದಲ್ಲೇ ಅತಿ ದೊಡ್ಡ ಖಾಸಗಿ ಬಂದರನ್ನು ಹೊಂದಿರುವ ಅದಾನಿ ಸಮೂಹವು, ಜಾಗತಿಕ ಮಟ್ಟದಲ್ಲಿ ಕಲ್ಲಿದ್ದಲ್ಲು ವಹಿವಾಟು ನಡೆಸುವ ಕಂಪನಿಗಳಲ್ಲಿ ಮುಂಚೂಣಿಯಲ್ಲಿದೆ. 2023ರ ಮಾರ್ಚ್‌ 31ಕ್ಕೆ ಘೋಷಿಸಿಕೊಂಡಂತೆ ಕಂಪನಿ ಆದಾಯ ₹1,413 ಶತಕೋಟಿಯಷ್ಟಿತ್ತು.

ಆರ್‌ಬಿಐ ಪ್ರಕಾರ ಅದಾನಿ ಅವರ ವಿವಿಧ ಕಂಪನಿಗಳಲ್ಲಿ ಅವರ ಕುಟುಂಬ ನಡೆಸುವ ಟ್ರಸ್ಟ್ ಪಾಲು ಹೊಂದಿದೆ. ಅದರಲ್ಲಿ ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಶೇ 73, ಅದಾನಿ ಗ್ರೀನ್‌ ಎನರ್ಜಿಯಲ್ಲಿ ಶೇ 56, ಅದಾನಿ ಪೋರ್ಟ್ಸ್‌ನಲ್ಲಿ ಶೇ 66, ಅದಾನಿ ಪವರ್‌– ಶೇ 70, ಅದಾನಿ ಟ್ರಾನ್ಸ್‌ಮಿಷನ್ ಶೇ 68, ಅದಾನಿ ಎನರ್ಜಿ ಸೊಲೂಷನ್ಸ್‌ ಶೇ 73, ಅದಾನಿ ಟೋಟಲ್ ಗ್ಯಾಸ್‌ನಲ್ಲಿ ಶೇ 37ರಷ್ಟು ಪಾಲು ಹೊಂದಿದೆ.

ಅಗ್ರ 50 ಶ್ರೀಮಂತರ ಪಟ್ಟಿಯಲ್ಲಿರುವ ಭಾರತೀಯರು

ರಿಲಯನ್ಸ್‌ನ ಮುಕೇಶ್ ಅಂಬಾನಿ ಈಗ ಏಷ್ಯಾದ 2ನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಶಾಪೂರ್ ಮಿಸ್ತ್ರಿ ಅವರು ₹2,877 ಶತಕೋಟಿ ಆಸ್ತಿಯೊಂದಿಗೆ 38ನೇ ಸ್ಥಾನದಲ್ಲಿದ್ದಾರೆ ಹಾಗೂ ಶಿವ ನಾಡಾರ್ ₹2,744 ಶತಕೋಟಿಯೊಂದಿಗೆ 45ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT