ನವದೆಹಲಿ: ಜಾಗತಿಕ ಆರ್ಥಿಕ ಅನಿಶ್ಚಿತತೆಯಿಂದಾಗಿ ಏಪ್ರಿಲ್–ಜುಲೈ ಅವಧಿಯಲ್ಲಿ ದೇಶದ ಚಿನ್ನದ ಆಮದು ಪ್ರಮಾಣವು ಶೇ 4.23ರಷ್ಟು ಇಳಿಕೆಯಾಗಿದೆ.
ಹಿಂದಿನ ವರ್ಷದ ಇದೇ ಅವಧಿಯಲ್ಲಿ ಚಿನ್ನದ ಆಮದು ಮೌಲ್ಯವು ₹1.10 ಲಕ್ಷ ಕೋಟಿ ಇತ್ತು. ಪ್ರಸಕ್ತ ವರ್ಷದ ಈ ಅವಧಿಯಲ್ಲಿ ₹1.06 ಲಕ್ಷ ಕೋಟಿಗೆ ಇಳಿದಿದೆ ಎಂದು ಕೇಂದ್ರ ಸರ್ಕಾರದ ಅಂಕಿ–ಅಂಶಗಳು ತಿಳಿಸಿವೆ.
ಜುಲೈನಲ್ಲಿ ಆಮದು ಪ್ರಮಾಣವು ಶೇ 10.65ರಷ್ಟು ಇಳಿಕೆಯಾಗಿದೆ. ₹26,274 ಕೋಟಿ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ. ಜೂನ್‌ನಲ್ಲಿ (–) ಶೇ 38.66 ಮತ್ತು ಮೇ ತಿಂಗಳಲ್ಲಿ (–) ಶೇ 9.76ರಷ್ಟು ಪೂರೈಕೆ ಕಡಿಮೆಯಾಗಿದೆ. ಏಪ್ರಿಲ್‌ನಲ್ಲಿ ₹26,106 ಕೋಟಿ ಮೌಲ್ಯದ ಹಳದಿ ಲೋಹ ಆಮದಾಗಿತ್ತು.
‘ಚಿನ್ನದ ದರದಲ್ಲಿ ಏರಿಕೆಯಾಗಿರುವುದೇ ಆಮದು ಪ್ರಮಾಣವು ಕುಸಿಯಲು ಕಾರಣವಾಗಿದೆ. ಆದರೆ, ದೇಶದಲ್ಲಿ ಸೆಪ್ಟೆಂಬರ್‌ನಿಂದ ಹಬ್ಬದ ಋತು ಆರಂಭವಾಗುತ್ತಿದೆ. ಕೇಂದ್ರ ಬಜೆಟ್‌ನಲ್ಲಿ ಸರ್ಕಾರವು ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕವನ್ನು ಶೇ 15ರಿಂದ ಶೇ 6ಕ್ಕೆ ಇಳಿಸಿದೆ. ಇದರಿಂದ ಆಮದು ಪ್ರಮಾಣ ಏರಿಕೆಯಾಗಲಿದೆ’ ಎಂದು ಆಭರಣ ತಯಾರಕರು ಹೇಳಿದ್ದಾರೆ.
ಚಿನ್ನದ ಆಮದಿನಲ್ಲಿ ಇಳಿಕೆಯಾಗಿರುವುದರಿಂದ ಜುಲೈನಲ್ಲಿ ವ್ಯಾಪಾರ ಕೊರತೆ ಅಂತರವು ₹1.97 ಲಕ್ಷ ಕೋಟಿ ಆಗಿದೆ. ಈ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಕೊರತೆ ಅಂತರವು ₹7.18 ಲಕ್ಷ ಕೋಟಿ ಆಗಿದೆ.