ನವದೆಹಲಿ: ದೇಶೀಯ ಆಭರಣ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆಯಿಂದಾಗಿ ಮಂಗಳವಾರ ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಏರಿಕೆಯಾಗಿದೆ.
10 ಗ್ರಾಂ ಚಿನ್ನದ ದರವು ₹1,400 ಏರಿಕೆಯಾಗಿದ್ದು, ₹74,150ಕ್ಕೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹3,150 ಹೆಚ್ಚಳವಾಗಿದ್ದು, ₹87,150ಕ್ಕೆ ತಲುಪಿದೆ.
ಕೇಂದ್ರ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಸರ್ಕಾರವು ಕಡಿತಗೊಳಿಸಿತ್ತು. ಹಾಗಾಗಿ, ಜುಲೈ 23ರಂದು ಚಿನ್ನದ ಧಾರಣೆಯು 10 ಗ್ರಾಂಗೆ ₹3,350 ಕಡಿಮೆಯಾಗಿತ್ತು. ಕಳೆದ ಒಂದು ತಿಂಗಳಿನಿಂದಲೂ ಬೆಲೆಯಲ್ಲಿ ಏರಿಳಿತವಾಗುತ್ತಿತ್ತು.
‘ಅಮೆರಿಕದ ಕೇಂದ್ರೀಯ ಬ್ಯಾಂಕ್ ಆದ ಫೆಡರಲ್ ರಿಸರ್ವ್ ಮುಂಬರುವ ಹಣಕಾಸು ನೀತಿ ಸಮಿತಿ ಸಭೆಗಳಲ್ಲಿ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆಯಿದೆ. ಹಾಗಾಗಿ, ಹಳದಿ ಲೋಹದ ಬೆಲೆ ಏರಿಕೆಯಾಗಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ತಿಳಿಸಿದ್ದಾರೆ.
‘ಅಮೆರಿಕಕ್ಕೆ ಆರ್ಥಿಕ ಹಿಂಜರಿಕೆಯ ಭಯವಿಲ್ಲ ಎಂದು ಇತ್ತೀಚೆಗೆ ಚಿಕಾಗೊ ಫೆಡರಲ್ ರಿಸರ್ವ್ ಬ್ಯಾಂಕ್‌ನ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಡಾಲರ್ ಮೌಲ್ಯದ ನಡುವೆಯೇ ಅಲ್ಲಿನ ಆರ್ಥಿಕತೆ ಚೇತರಿಕೆಯ ಹಳಿಗೆ ಮರಳುತ್ತಿರುವುದರಿಂದ ಹಳದಿ ಲೋಹದಲ್ಲಿ ಹೂಡಿಕೆಯತ್ತ ಹೂಡಿಕೆದಾರರ ಚಿತ್ತ ಹರಿದಿದೆ’ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.